ಹಾಸನ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಓಟ್ ಸಿಗುತ್ತದೆ ಅಂದರೆ ಸುನ್ನತ್ತಿಗೂ ತಯಾರಾಗಿರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ಎಸ್ಎಸ್ (RSS) ನಿಷೇಧ ವಿಚಾರವಾಗಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಹಾಸನದ ಬೇಲೂರಿನಲ್ಲಿ ರಂಭಾಪುರಿಶ್ರೀ ನೇತೃತ್ವದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಸಿ.ಟಿ ರವಿ ಈ ಹೇಳಿಕೆ ನೀಡಿದ್ದಾರೆ. ಹತ್ತು ಸೆಕೆಂಡ್ ಸಿಕ್ಕಿದರೆ ಸಾಕು ಆರ್ಎಸ್ಎಸ್ನವರನ್ನು ಮುಗಿಸಿ ಬಿಡುತ್ತೇವೆ ಎಂದು ಹೇಳುತ್ತಾರೆ. ಭಾರತವನ್ನು ಮತ್ತೊಂದು ವಿಭಜನೆ ಮಾಡಲು ತಯಾರಾಗುತ್ತಿರುವ ಇಂತಹವರಿಗೆ ತಡೆಗೋಡೆಯಾಗಿ ನಿಂತಿರುವುದು ಆರ್ಎಸ್ಎಸ್. ಇಂತಹ ಸಂಘಟನೆಯನ್ನು ನಿಷೇಧಿಸಿದರೆ ಮತ್ತೊಂದು ಮೊಘಲ್ ಸಾಮ್ರಾಜ್ಯ ಸ್ಥಾಪಿಸುವುದು ತುಂಬಾ ಸುಲಭವಾಗಲಿದೆ ಎಂದರು.
“ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ, ಅದೇನೋ ಹೇಳುತ್ತಾರೆ ಅಲ್ವಾ, ಕಟ್ ಮಾಡುವುದಕ್ಕೆ ಏನು ಹೇಳುತ್ತಾರೆ? ಮುಂಜಿ, ಅವರ ಭಾಷೆಯಲ್ಲಿ ಏನೋ ಹೇಳುತ್ತಾರೆ. ಸಿದ್ದರಾಮಯ್ಯನವರಿಗೆ ಕೇಳಿ ನೀವು ಸುನ್ನತ್ ಮಾಡಿಸಿಕೊಳ್ಳಲು ತಯಾರಿದ್ದೀರಾ? ಬಹುಶಃ ಸಿದ್ದರಾಮಯ್ಯ ಅವರು ಓಟ್ ಸಿಗುತ್ತದೆ ಅಂದರೆ ಅದಕ್ಕೂ ಸಿದ್ಧರಿರುತ್ತಾರೆ” ಎಂದರು.
“ಇದು ದಸರಾ ಸಂದರ್ಭ. ಆ ತಾಯಿ ವರ ಪ್ರದಾಯಿನಿಯೂ ಹೌದು. ಆಕೆ ದುಷ್ಟರನ್ನ ನಿಗ್ರಹಿಸುವಂತಹ ದುರ್ಗಿಯೂ ಹೌದು. ಆಕೆಯ ಬಳಿ ಶಸ್ತ್ರವೂ ಇದೆ, ಶಾಸ್ತ್ರವೂ ಇದೆ. ಶಿಷ್ಟರನ್ನ ರಕ್ಷಣೆ ಮಾಡುವುದನ್ನೇ ಆ ತಾಯಿ ನಮಗೆ ಹೇಳಿಕೊಟ್ಟಿರುವುದು. ಇದು ದಸರೆಯ ಕಾಲ, ದಸರೆಯ ಕಾಲದಲ್ಲಿ ಯಾರು ಹೇಗೆ ಬರುತ್ತಾರೋ ಅದೇ ರೀತಿಯಲ್ಲಿ ಎದುರಿಸುತ್ತೇವೆ. ದೇಹಿ ಅಂತಾ ಬಂದರೆ ಆಶ್ರಯ ಕೊಡುತ್ತೇವೆ. ಮುಗಿಸಲು ಕತ್ತಿ ಎತ್ತಿಕೊಂಡು ಬಂದರೆ ಒಂದ್ ಕೆನ್ನೆ ತೋರಿಸಿದಾಗ ಇನ್ನೊಂದು ಕೆನ್ನೆ ಕೊಡುವ ಗಾಂಧಿ ಕಾಲ ಹೋಗಿದೆ. ಈಗ ಏನಿದ್ದರೂ ಮೋದಿ ಕಾಲ” ಎಂದರು.
“ಪುಲ್ವಾಮಾದಲ್ಲಿ ನಮ್ಮ ಸೈನಿಕರ ಮೇಲೆ ಮೋಸದಿಂದ ದಾಳಿ ಮಾಡಿದರು ಪರಿಣಾಮ ಸರ್ಜಿಕಲ್ ಸ್ಟ್ರೈಕ್ ಮೂಲಕ ಬಾಲನೇ ಕಟ್ ಮಾಡಿದೆವು. ನಾವೇನು ಅಂತಾ ತೋರಿಸಿದೆವು. ಹಳೇ ಭಾರತ ಅಲ್ಲ ಇದು, ಹೊಡೆತ ತಿಂದುಕೊಳ್ಳುವ ಭಾರತ ಅಲ್ಲ ಇದು. ಬಿರಿಯಾನಿ ಕೊಡುವ ಭಾರತ ಅಲ್ಲ, ಈಗ ನಿಮ್ಮ ಮನೆಗೆ ನುಗ್ಗಿ ಸದೆ ಬಡಿಯುವ ಭಾರತ ಎಂಬ ಸಂದೇಶ ಅವರಿಗೆ ಕೊಟ್ಟೆವು. ಈ ಪಿಎಫ್ಐನವರಿಗೂ ಅಷ್ಟೆ. ಆರ್ಎಸ್ಎಸ್ನವರ ಬಗ್ಗೆ ಬಹಳ ಮಾತಾಡ್ತಿದ್ದಾರಲ್ಲ, ಬಾಲ ಬಿಚ್ಚಲಿ, ಬರೀ ಬಾಲ ಅಲ್ಲ ತಲೆನೇ ಕಟ್ಟಾಗುತ್ತದೆ” ಎಂದರು.
Published On - 9:33 pm, Thu, 29 September 22