ಸಿಪಿಐಎಂ ಸಭ್ಯ ಭಾಷೆ ಬಳಸಬಹುದಿತ್ತು: ಕೇರಳ ಸಿಎಂ ಪಿಣರಾಯಿ ಹೇಳಿಕೆಗೆ ದೇವೇಗೌಡ ಅಸಮಾಧಾನ

|

Updated on: Oct 21, 2023 | 5:09 PM

ತಮ್ಮ ಹೇಳಿಕೆ ಮತ್ತು ಅದರ ಸಂದರ್ಭವನ್ನು ಕಮ್ಯೂನಿಸ್ಟ್ ಪಕ್ಷದ ಸ್ನೇಹಿತರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸಿಪಿಐಎಂ ನಾಯಕರು ಸಭ್ಯ ಭಾಷೆಯನ್ನು ಬಳಸಿ ಇನ್ನೂ ಉತ್ತಮವಾಗಿ ಪ್ರತಿಕ್ರಿಯಿಸಬಹುದಿತ್ತು ಅಥವಾ ಸ್ಪಷ್ಟನೆ ಕೇಳಬಹುದಿತ್ತು ಎಂದು ದೇವೇಗೌಡರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸಿಪಿಐಎಂ ಸಭ್ಯ ಭಾಷೆ ಬಳಸಬಹುದಿತ್ತು: ಕೇರಳ ಸಿಎಂ ಪಿಣರಾಯಿ ಹೇಳಿಕೆಗೆ ದೇವೇಗೌಡ ಅಸಮಾಧಾನ
ಹೆಚ್​ಡಿ ದೇವೇಗೌಡ
Follow us on

ಬೆಂಗಳೂರು, ಅಕ್ಟೋಬರ್ 21: ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಅವರಂಥ ಪಳಗಿದ ರಾಜಕಾರಣಿ ಆಧಾರರಹಿತ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ತಿರುಗೇಟು ನೀಡಿದ ಬೆನ್ನಲ್ಲೇ ಪರಿಸ್ಥಿತಿಯನ್ನು ತಿಳಿಗೊಳಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಮುಂದಾಗಿದ್ದಾರೆ. ತಮ್ಮ ಹೇಳಿಕೆ ಮತ್ತು ಅದರ ಸಂದರ್ಭವನ್ನು ಕಮ್ಯೂನಿಸ್ಟ್ ಪಕ್ಷದ ಸ್ನೇಹಿತರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅವರು ಸಂದೇಶ ಪ್ರಕಟಿಸಿದ್ದಾರೆ.

‘ನನ್ನ ಹೇಳಿಕೆಯ ಬಗ್ಗೆ ಸಿಪಿಐಎಂ ಗೊಂದಲ ಮಾಡಿಕೊಂಡಿದೆ. ನನ್ನ ಕಮ್ಯೂನಿಸ್ಟ್ ಸ್ನೇಹಿತರು ನಾನು ಹೇಳಿದ್ದನ್ನು ಅಥವಾ ನಾನು ಹೇಳಿದ ಸಂದರ್ಭವನ್ನು ಸರಿಯಾಗಿ ಅರ್ಥೈಸಿದಂತೆ ತೋರುತ್ತಿಲ್ಲ. ಕೇರಳದಲ್ಲಿ ಸಿಪಿಐಎಂ ಪಕ್ಷವು ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿಯನ್ನು ಬೆಂಬಲಿಸುತ್ತದೆ ಎಂದು ನಾನು ಹೇಳಿಯೇ ಇಲ್ಲ. ಬಿಜೆಪಿಯೊಂದಿಗಿನ ಮೈತ್ರಿಯ ನಂತರವೂ ಕರ್ನಾಟಕದ ಹೊರಗಿನ ನನ್ನ ಪಕ್ಷದ ಘಟಕಗಳಲ್ಲಿನ ಕೆಲವು ವಿಚಾರಗಳು ಇತ್ಯರ್ಥವಾಗದ ಕಾರಣ ಕೇರಳದ ಜೆಡಿಎಸ್ ಘಟಕವು ಎಲ್‌ಡಿಎಫ್ ಸರ್ಕಾರದ ಜೊತೆ ಹೊಂದಾಣಿಕೆಯಲ್ಲಿರಲಿದೆ ಎಂದಷ್ಟೇ ನಾನು ಹೇಳಿದ್ದೆ. ಸಿಪಿಐಎಂ ನಾಯಕರು ಸಭ್ಯ ಭಾಷೆಯನ್ನು ಬಳಸಿ ಇನ್ನೂ ಉತ್ತಮವಾಗಿ ಪ್ರತಿಕ್ರಿಯಿಸಬಹುದಿತ್ತು ಅಥವಾ ಸ್ಪಷ್ಟನೆ ಕೇಳಬಹುದಿತ್ತು’ ಎಂದು ದೇವೇಗೌಡರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.


ಬಿಜೆಪಿ ಜತೆಗಿನ ಮೈತ್ರಿಗೆ ಜೆಡಿಎಸ್​​ನ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಕ್ಷದ ರಾಜ್ಯಾಧ್ಯಕ್ಷ ತಾವು. ತಮ್ಮ ಸಮ್ಮತಿ ಇಲ್ಲದೆ ಮೈತ್ರಿ ಸಾಧ್ಯವಿಲ್ಲ. ನಾವು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕ್ರಮ ಕೈಗೊಂಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ, ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆಗೊಳಿಸಿದ್ದರು. ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಮೈತ್ರಿ ವಿಚಾರವಾಗಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದರು. ಇದೇ ವೇಳೆ ಕೇರಳ ಮುಖ್ಯಮಂತ್ರಿಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಕೇರಳ ಮುಖ್ಯಮಂತ್ರಿ ಒಪ್ಪಿದ್ದಾರೆಂದು ದೇವೇಗೌಡರು ಹೇಳಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ದೇವೇಗೌಡರಂತಹ ರಾಜಕಾರಣಿ ಆಧಾರರಹಿತ ಸುಳ್ಳು ಹೇಳುತ್ತಿರುವುದು ನಾಚಿಕೆಗೇಡು: ಪಿಣರಾಯಿ ವಿಜಯನ್ ಕಿಡಿ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದ ಪಿಣರಾಯಿ ವಿಜಯನ್, ದೇವೇಗೌಡರಂತಹ ಪಳಗಿದ ರಾಜಕಾರಣಿ ಈ ರೀತಿ ಆಧಾರರಹಿತ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರ ಇತ್ತೀಚಿನ ಹೇಳಿಕೆಯಿಂದ ನನಗೆ ಸಂಪೂರ್ಣ ಆಶ್ಚರ್ಯವಾಗಿದೆ! ಜೆಡಿಎಸ್-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸುವ ಕಲ್ಪನೆಯನ್ನು ಸಹ ನಾನು ಮಾಡುವುದಿಲ್ಲ ಎಂದು ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ