ಬೆಂಗಳೂರು, (ಜೂನ್ 09): ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ಪುತ್ರ ಎಚ್ಡಿ ಕುಮಾರಸ್ವಾಮಿ. ಇವರು ರಾಜಕೀಯದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಇವರದ್ದು ಪ್ರಾದೇಶಿಕ ಪಕ್ಷವಾಗಿದ್ದರೂ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಎರಡು ಬಾರಿ ಮುಖ್ಯಮಂತ್ರಯಾಗಿ ರಾಜ್ಯ ರಾಜಕಾರಣದಲ್ಲಿ ಎಚ್ಡಿ ಕುಮಾರಸ್ವಾಮಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಇದೀಗ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿ ಸಚಿವರಾಗಿದ್ದಾರೆ. ಈ ಮೂಲಕ ಕುಮಾರಸ್ವಾಮಿ ರಾಷ್ಟ್ರರಾಜಕಾರಣ ಪ್ರವೇಶ ಮಾಡಿದ್ದಾರೆ.
ಕರ್ನಾಟಕದ ಮಂಡ್ಯದಿಂದ ಗೆದ್ದು ಸಂಸತ್ ಪ್ರವೇಶಿಸಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಎಂಟು ಜನ ಬಿಜೆಪಿ ನಾಯಕರು ಪ್ರಮಾಣ ಸ್ವೀಕರಿಸಿದ ನಂತರ ಎನ್ ಡಿಎ ಒಕ್ಕೂಟದ ಮಿತ್ರಪಕ್ಷಗಳಲ್ಲಿ ಮೊದಲಿಗರಾಗಿ ಕುಮಾರಸ್ವಾಮಿ ಅವರು ಪ್ರಮಾಣ ಸ್ವೀಕರಿಸಿದರು. ಸಾಂಪ್ರದಾಯಿಕ ಬಿಳಿ ಅಂಗಿ ಪಂಚೆ ಧರಿಸಿದ್ದ ಎಚ್ಡಿಕೆ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹಾಗೂ ಚೆನ್ನಮ್ಮರ ಕೊನೆಯ ಪುತ್ರರಾದ ಕುಮಾರಸ್ವಾಮಿ ಜನಿಸಿದ್ದು 1959ರ ಡಿಸೆಂಬರ್ 16ರಂದು. ತಂದೆ ಪ್ರಭಾವಿ ರಾಜಕಾರಣಿ. ವರ ಗರಡಿಯಲ್ಲೇ ಬೆಳೆದವರು ಕುಮಾರಸ್ವಾಮಿ.ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಕುಮಾರಸ್ವಾಮಿ ಜನಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಮ್.ಇ.ಎಸ್ ವಿದ್ಯಾಸಂಸ್ಥೆಯಲ್ಲಿ, ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜ್ನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿ ನ್ಯಾಷನಲ್ ಕಾಲೇಜ್ನಲ್ಲಿ ಬಿಎಸ್ಸಿ ಪದವಿಯನ್ನು ಪಡೆದುಕೊಂಡವರು. ರಾಜಕೀಯಕ್ಕೆ ಬರುವ ಮುನ್ನ ಸಿನೆಮಾದಲ್ಲಿ ಗುರುತಿಸಿಕೊಂಡವರು. ತಂದೆ ಸಿಎಂ ಆಗಿದ್ದಾಗಲೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕನಕಪುರದಿಂದ ಗೆದ್ದು ಮೂರು ದಶಕದ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಕೇವಲ ರಾಜಕೀಯ ಜೀವನದಲ್ಲಿ ಮಾತ್ರವಲ್ಲದೇ ಸಿನಿಮಾ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರು ಮಾರ್ಚ್ 13, 1986ರಲ್ಲಿ ಅನಿತಾ ಕುಮಾರಸ್ವಾಮಿಯನ್ನು ವಿವಾಹವಾಗಿದ್ದು, ಅವರಿಗೆ ಒಬ್ಬರೇ ಪುತ್ರ ನಿಖಿಲ್ ಕುಮಾರಸ್ವಾಮಿ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಪುತ್ರ, ಮಾಜಿ ಮುಖ್ಯಮಂತ್ರಿ, ಸಂಸದ ಎಚ್ಡಿ ಕುಮಾರಸ್ವಾಮಿ ಅವರು ಮೂಲತಃ ಚಲನಚಿತ್ರ ನಿರ್ಮಾಪಕರು. ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಕುಮಾರಸ್ವಾಮಿ ಅವರಿಗೆ ಇದೆ. ಇವರು ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮೂಲತಃ ಕೃಷಿಕರು. ಇವರು ತಂದೆಯ ನೆರಳಿನಲ್ಲಿ ರಾಜಕಾರಣಕ್ಕೆ ದುಮುಕಿದರು. ಮೊದಲಿಗೆ ಎಚ್ಡಿಕೆ ಅವರು ತಮ್ಮ 37ನೇ ವಯಸ್ಸಿನಲ್ಲಿ 1996ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 11ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು. ಎಚ್ಡಿ ಕುಮಾರಸ್ವಾಮಿ ಅವರು ಮತ್ತೆ 1998ರಲ್ಲಿ ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ನ ಎಂ.ವಿ ಚಂದ್ರಶೇಖರ ಮೂರ್ತಿ ವಿರುದ್ಧ ಸೋಲು ಅನುಭವಿಸಿದ್ದರು. ಅಲ್ಲದೆ ಈ ಚುನಾವಣೆಯಲ್ಲಿ ಅವರಿಗೆ ಠೇವಣಿಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋತರು.