ರಾಮನಗರ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಈ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮುಂದಿನ ಎಲೆಕ್ಷನ್ಗೆ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಿದ್ದಾರೆ.
ಇಂದು(ಅಕ್ಟೋಬರ್.21) ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಮಾತನಾಡಿದ ಅವರು, ಮೈಸೂರು ಭಾಗದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ. ಇನ್ನೂ ಫೈನಲ್ ಆಗಿಲ್ಲ. ಆದರೆ ಟಿ.ನರಸೀಪುರ, ಪಿರಿಯಾಪಟ್ಟಣ, ನಮ್ಮ ಹಾಲಿ ಎಂಎಲ್ಎ ಇದ್ದಾರೆ. ಚಾಮುಂಡೇಶ್ವರಿಯಿಂದ ಜಿ.ಟಿ ದೇವೇಗೌಡ ಇರ್ತಾರೆ. ಹುಣಸೂರು ಹರೀಶ್ ಗೌಡ ನಿಲ್ಲಿಸಬೇಕು ಅಂತ ನಿರ್ಣಯ ಆಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ 2023: ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಜೆಡಿಎಸ್
ಎಚ್ ಡಿ. ಕೋಟೆಯಲ್ಲಿ ಇಬ್ಬರು ಇದ್ದಾರೆ. ಇಬ್ಬರು ಒಮ್ಮತದಿಂದ ತೀರ್ಮಾನಕ್ಕೆ ಬರುವಂತೆ ತಿಳಿಸಿದ್ದೇನೆ. 15 ರಿಂದ 20 ದಿನಗಳ ಒಳಗೆ ಮಾಹಿತಿ ಪಡೆದು ಫೈನಲ್ ಮಾಡುತ್ತೇನೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಚನ್ನಪಟ್ಟಣದ ಪ್ರತಿ ಹಳ್ಳಿಯಿಂದ 4 ರಿಂದ 5 ಜನ ಬರ ಹೇಳಿದ್ದೇನೆ. ಪ್ರಮುಖ ಕಾರ್ಯಕರ್ತರನ್ನ, ಮುಖಂಡರನ್ನು ಬರಲು ಹೇಳಿದ್ದೇನೆ. ನವೆಂಬರ್ 1 ರಿಂದ ಪಂಚರತ್ನ ಯೋಜನೆ ಕಾರ್ಯಕ್ರಮವಿದೆ. ಇಡೀ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ 120 ದಿನಗಳ ಕಾಲ ನಡೆಯಲಿದೆ. ಪದೇ ಪದೆ ಬರಲು ಸಾಧ್ಯವಿಲ್ಲ. ಕಾರ್ಯಕರ್ತರೇ ಜವಾಬ್ದಾರಿ ತೆಗೆದುಕೊಳ್ಳಲು ಸೂಚನೆ ನೀಡಲು ಕರೆದಿದ್ದೇನೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಧಾನ ಇಲ್ಲ . ಸಣ್ಣ ಪುಟ್ಟ ಸಮಸ್ಯೆಗಳು ಇದ್ರೆ ನನ್ನ ಗಮನಕ್ಕೆ ಬಂದ ಕೂಡಲೇ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಲವಾರು ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆಯುತ್ತಿದ್ದಾರೆ. ನಾನು ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಿಸಿಕೊಂಡು ಬರಬೇಕು ಅಂತ ನಿಖಿಲ್ ಗೆ ಹೇಳಿದ್ದೇನೆ. ಅಂತಿಮವಾಗಿ ಎಲ್ಲಿ ನಿಲ್ಲಬೇಕು ಎಂಬುದನ್ನ ಪಕ್ಷ ತೀರ್ಮಾನ ಮಾಡಲಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ಎಲ್ಲೋ ಒಂದು ಕಡೆ ಸ್ವರ್ಧೆ ಮಾಡಲಿದ್ದಾರೆ ಎಂದರು. ಈ ಮೂಲಕ ಪುತ್ರ ನಿಖಿಲ್ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಿದರು. ಆದ್ರೆ, ಕ್ಷೇತ್ರ ಯಾವುದು ಎನ್ನುವುದು ಮಾತ್ರ ಸಸ್ಪೆನ್ಸ್ ಇಟ್ಟರು.
ಮೂಲಕಗಳ ಪ್ರಕಾರ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಬದಲಿಗೆ ನಿಖಿಲ್ ಸ್ಪರ್ಧೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.
Published On - 8:35 pm, Fri, 21 October 22