ಹಾನಸ, ನ.20: ನಮ್ಮ ಧರ್ಮ ಹಾಳುಮಾಡಿಕೊಂಡು ಅವರ ಧರ್ಮ ಎತ್ತಲು ಆಗುತ್ತಾ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಜಮೀರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಚನ್ನರಾಯಪಟ್ಟಣ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ಮಾಧ್ಯಮದವರು ದತ್ತಮಾಲೆ ಹಾಕುತ್ತೀರಾ ಎಂದು ಪ್ರಶ್ನಿಸಿದರು. ಅದಕ್ಕೆ ದತ್ತಮಾಲೆ ಹಾಕಿದರೆ ತಪ್ಪೇನು ಎಂದಿದ್ದೇನೆ. ರಾಜ್ಯದಲ್ಲಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಶುರುವಾಗಿದೆ. ನಮ್ಮ ಇಲ್ಲಿಯ ಒಬ್ಬ ಮಂತ್ರಿ ತೆಲಂಗಾಣದಲ್ಲಿ ಭಾಷಣ ಮಾಡಿದ್ದಾರೆ. ವೋಟಿಗಾಗಿ ಜಾತಿಗಳ ನಡುವೆ ಬಿರುಕು ಉಂಟು ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ನಾವು ಗೌರವ ಕೊಡುವುದು ಸಭಾಧ್ಯಕ್ಷರಿಗೆ. ಅದು ಯು.ಟಿ.ಖಾದರ್‌ಗೆ ಅಲ್ಲ, ಒಂದು ಸಮಾಜಕ್ಕಲ್ಲ ಎಂದರು.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡುತ್ತೇವೆ. ಖಾದರ್ ಮುಸ್ಲಿಂ ಸಮುದಾಯದವರು ಎಂದು ಕೈಮುಗಿಯುವುದಿಲ್ಲ. ಅವರು ಸದನದ ಗೌರವಾನ್ವಿತ ಪೀಠದ ಸಭಾಧ್ಯಕ್ಷರು, ಹೀಗಾಗಿ ಗೌರವ ನೀಡುತ್ತೇವೆ. ಜಮೀರ್ ಅಂತಹ ವ್ಯಕ್ತಿಗಳನ್ನು ಸರ್ಕಾರದಲ್ಲಿ ಮಂತ್ರಿ ಮಾಡಿಕೊಂಡು ಉತ್ತಮ ಸಮಾಜ ಕಟ್ಟಲು ಆಗುತ್ತಾ, ನೀವೆಲ್ಲಾ ಸಮಾಜ ಕಟ್ಟುವವರಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಚಿವ ಜಮೀರ್ ಅಹ್ಮದ್ ಖಾನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಸಚಿವ ಜಮೀರ್ ಅಹಮ್ಮದ್ ಖಾನ್ ಪದ ಬಳಕೆ ಮಾಡಿದ್ದಾರಲ್ಲ. ಸಿದ್ದರಾಮಯ್ಯ ಅವರು ಕನಿಷ್ಠ ಸೌಜನ್ಯವಿದ್ದಿದ್ದರೆ ಕ್ಷಮೆಕೇಳಲು ಸೂಚನೆ ನೀಡಬೇಕಿತ್ತು. ಇಂಥವರನ್ನು ಸಂಪುಟದಲ್ಲಿ ಇಟ್ಟುಕೊಂಡು ಇವರು ನಾಡು ಕಟ್ಟುತ್ತಾರಾ? ಕ್ಷಮೆಕೇಳಲು ಸಿಎಂ ಡೈರೆಕ್ಷನ್ ಕೊಡಲಿಲ್ಲ, ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಜಮೀರ್ ಅಹಮ್ಮದ್ ತಮ್ಮ ಧರ್ಮವನ್ನು ನೋಡಿ ಕೈಮುಗಿಯುತ್ತಾರೆ. ಹೀಗಾಗಿ ತೆಲಂಗಾಣ ಚುನಾವಣೆಯಲ್ಲಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ನಾವು ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿದ್ದೇವೆ, ಧರ್ಮ ಕಾಪಾಡಬೇಕಲ್ವಾ? ನಮ್ಮ ಧರ್ಮ ಹಾಳುಮಾಡಿಕೊಂಡು ಅವರ ಧರ್ಮ ಎತ್ತಲು ಆಗುತ್ತಾ? ಅಂತಹ ಅನಿರ್ವಾಯತೆ ಬಂದಾಗ ನಾನು ದತ್ತಮಾಲೆ ಹಾಕುತ್ತೇನೆ. ಅದರಲ್ಲಿ ಅಂಥದ್ದೇನು ಇಲ್ಲ, ಯಾವುದೇ ಸಂಕೋಚ ಕೂಡ ಇಲ್ಲ ಎಂದರು.
ಕಾನೂನುಬಾಹಿರ ತೀರ್ಮಾನವನ್ನು ಮಾಡುವುದಿಲ್ಲವೆಂದು ಹೇಳಿದ್ದೇನೆ. ಕಾನೂನು ವ್ಯಾಪ್ತಿಯೊಳಗೆ ನಮ್ಮ ಧರ್ಮವನ್ನು ರಕ್ಷಣೆ ಮಾಡುತ್ತೇನೆ ಎಂದ ಕುಮಾರಸ್ವಾಮಿ, ಅವರಿಗೆ ಅವರ ಧರ್ಮದ ಬಗ್ಗೆ ದುರಾಭಿಮಾನ ಇದ್ದಾಗ ನಮ್ಮ ಧರ್ಮದ ಬಗ್ಗೆ ನನಗೆ ಇರಬಾರದಾ ಎಂದು ಕುಮಾರಸ್ವಾಮಿ ಹೇಳಿದರು.
ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅವರ ಮಗ ಪಾಪಾ ಅವರು ಆಶ್ರಯ ಕಮಿಟಿ ಚೇರ್ಮೆನ್ ಅಂತೆ. ಆಶ್ರಯ ಕಮಿಟಿ ಅದ್ಯಕ್ಷ ಇಡೀ ತಾಲೂಕಿನ ಅದಿಕಾರಿಗಳನ್ನ ಜನ ಸಂಪರ್ಕ ಸಭೆ ಅಂತಾ ಕರೆಯಲು ಅದಿಕಾರ ಇದೆಯಾ? ಒಬ್ಬ ಅಶ್ರಯ ಕಮಿಟಿ ಅಧ್ಯಕ್ಷನಿಗೆ ಇಷ್ಡೊಂದು ಪವರ್ ಕೊಟ್ಟಿದಿರಲ್ಲ. ಅದೇ ರೀತಿ ರಾಜ್ಯದ ಎಲ್ಲಾ ಆಶ್ರಯ ಕಮಿಟಿ ಅದ್ಯಕ್ಷರಿಗೆ ಇದೇ ಪವರ್ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸ್ಪೀಕರ್ಗೆ ಸಿಗುವುದು ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ: ಜಮೀರ್ ಹೇಳಿಕೆಗೆ ಸಿಟಿ ರವಿ ಕಿಡಿ
ಯಡಿಯೂರಪ್ಪ ಸಿಎಂ ಆಗಿದ್ದಾಗ 2008-09 ರಲ್ಲಿ 20 ಉಪ ಚುನಾವಣೆ ನಡೆದಿತ್ತು. ಆಗ ಮಲ್ಲಿಕಾರ್ಜುನ ಖರ್ಗೆ ವಿಪಕ್ಷದ ನಾಯಕರಾಗಿದ್ದರು. ಇವರು ಯಡಿಯೂರಪ್ಪ ಅವರ ಜೊತೆ ಆಂತರಿಕ ಹೊಂದಾಣಿಕೆ ಮಾಡಿಕೊಂಡು ಹಾವೇರಿ ಇಂದ ಮೈಸೂರಿಗೆ ಒಂದೇ ಹೆಲಿಕಾಪ್ಟರ್ನಲ್ಲಿ ಹೋಗಿದ್ದರು. ಅವತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೋಲಿಸಲು ಸಿದ್ದರಾಮಯ್ಯ ಯಡಿಯೂರಪ್ಪ ಅವರಿಂದ ತಗೊಂಡಿದ್ದರು. ಇದನ್ನು ಅವರ ಹಿಂದೆ ಮುಂದೆ ಇರುವವರೇ ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹ್ಯೂಬ್ಲೇಟ್ ವಾಚ್ ಕಳ್ಳತನದ ವಾಚ್. ಅದನ್ನು ಎರಡು ವರ್ಷ ಹಾಕೊಂಡು ಓರ್ವ ಸಿಎಂ ಓಡಾಡಿದ. ಸುಳ್ಳು ಹೇಳಬೇಕೊ ನಿಜ ಹೇಳಬೇಕೊ ಇವರಿಂದ ನಾನು ಕಲಿಬೇಕಾ? ವಿದಾನಸೌಧಕ್ಕೆ ಬರಲಿ, ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಎರಡೂವರೆ ಲಕ್ಷ ಸಿಎಸ್ಅರ್ ಫಂಡ್ ಪಡೆಯಲು ನಿಮ್ಮ ಸರ್ಕಾರಕ್ಕೆ ದರಿದ್ರ ಬಂದಿದೆಯಾ? ಎಲ್ಲಿಯಾದರೂ ಉಂಟಾ, ಯಾವನು ಎರಡೂವರೆ ಲಕ್ಷ ಸಿಎಸ್ಆರ್ ಫಂಡ್ ಕೊಡುತ್ತಾರೆ? ಯಾವ್ಯಾವ ಕಂಪನಿ ಕೊಟ್ಟಿದ್ದಾರೆ ಅಂತಾ ಹೇಳಿದ್ದಾರಾ? ಇದನ್ನ ಇಲ್ಲಿಗೆ ನಿಲ್ಲಿಸಲ್ಲ ವಿದಾನಸಭೆಯಲ್ಲೂ ಚರ್ಚೆ ಮಾಡುತ್ತೇನೆ. ಅಷ್ಟು ಸುಲಭವಾಗಿ ನಾನು ಇದನ್ನ ಬಿಡಲ್ಲ ಎಂದರು.
ವರ್ಗಾವಣೆ ಮಾಡುವುದು ಸಿಎಂಗೆ ಸಂಪೂರ್ಣ ಅದಿಕಾರ ಇದೆ. ವರ್ಗಾವಣೆ ಮಾಡಲು ನನ್ನ ತಕರಾರು ಇಲ್ಲ. ಆದರೆ ವರ್ಗಾವಣೆ ಹೆಸರಿನಲ್ಲಿ ದಂದೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ ಕುಮಾರಸ್ವಾಮಿ, ಇದನ್ನ ಸಾಬೀತು ಮಾಡಿದರೆ ರಾಜಕೀಯ ಬಿಡುತ್ತೇನೆ ಅಂತೀರಾ. ವಿವೇಕಾನಂದ (ವರ್ಗಾವಣೆಯಲ್ಲಿರುವ ಪೊಲೀಸ್ ಅಧಿಕಾರಿ) ಅವರ ಒಂದೇ ವಿಚಾರ ಸಾಕಲ್ವಾ ಎಂದು ಕುಟುಕಿದರು.
ಹೆಚ್ಡಿಕೆ ಬ್ಲ್ಯಾಕ್ಮೇಲ್ಗೆ ಹೆದರಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಇವರ ದುಡ್ಡಿಗೆ, ಇವರ ಪೊಗರಿಗೆ ನಾನು ಹೆದರುತ್ತೇನಾ? ಎಂದು ಪ್ರಶ್ನಿಸಿದರು. ಇವರ ರೌಡಿಸಂಗೆ ನಾನು ಹೆದರುವವನಲ್ಲ ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಜಮೀರ್ ಅಹ್ಮದ್ ವಿಕೆಟ್ ಉರುಳಲೇಬೇಕು: ಡಾ ಸಿಎನ್ ಅಶ್ವಥ್ ನಾರಾಯಣ
ಪುಟ್ಗೋಸಿ ಕರೆಂಟ್ ಎಳೆದಿದ್ದಕ್ಕೆ ಸಿಎಂ, ಡಿಸಿಎಂ ನಡುವೆ ಕಾಂಪಿಟೇಷನ್. ಯಾವನೋ ಕರೆಂಟ್ ಕನೆಕ್ಷನ್ ಕೊಟ್ಟ, ನಾನು ನಿಂತುಕೊಂಡು ಕೊಡಿಸಿದ್ದೇನಾ? ಯಾರು ಕನೆಕ್ಷನ್ ಕೊಟ್ಟಿದ್ದನೋ ಅವನ ಮೇಲೆ ಕ್ರಮ ತೆಗೆದುಕೊಳ್ಳಲಿ. ಯಾವನೋ ಮಾಡಿರುವ ತಪ್ಪಿರಬಹುದು, ಆದರೆ ನನ್ನ ಮನೆಯಲ್ಲಿ ಆಗಿದೆ. ನನ್ನ ಮನೆಯಲ್ಲಿ ಆಗಿದ್ದಕ್ಕೆ ನಾನೇ ವಿಷಾದ ವ್ಯಕ್ತಪಡಿಸಿದ್ದೇನೆ ಎಂದರು.
ಆದರೆ, ಸಿಎಂ, ಡಿಸಿಎಂ ಅಧಿಕಾರಿಗಳಿಗೆ ಆದೇಶ ಮಾಡಿ ನನ್ನ ಮನೆಗೆ ಕಳುಹಿಸಿದರು. ಕೇಸ್ ಹಾಕಬೇಕು ಅಂತಾ ಕಳಿಸಿದ್ರು, ಅದಕ್ಕೆ ನಾನು ಹೆದರುತ್ತೀನಾ? 68 ಸಾವಿರ ರೂ. ಕಟ್ಟಿ ಅಂತಾ ಬಿಲ್ ಕಳಿಸಿದರು, ಅದನ್ನು ಕಟ್ಟಿದ್ದೇನೆ. 71 ಯುನಿಟ್‌ಗೆ 2 ಸಾವಿರ ಆಗಿದೆ, ಆದರೆ 68 ಸಾವಿರ ರೂ. ಬಿಲ್ ನೀಡಿದ್ದಾರೆ. ಹಾಗಾಗಿ ನಾನು ಕೇಸ್ ಹಾಕುತ್ತಿದ್ದೇನೆ ಎಂದರು.
ದುಡ್ಡನ್ನ ನೇರವಾಗಿ ನೀವು ತೆಗೆದುಕೊಳ್ಳಲು ಆಗುತ್ತಾ? ಹಣ ವಸೂಲಿಗೆ ನಿಮ್ಮ ಹಿಂದೆ ಮುಂದೆ ಪಲ್ಲಂಡೆಗಳು ಇದಾರಲ್ಲ. ಸಂತೋಷ್ ಮನೆಯಲ್ಲಿ 45 ಕೋಟಿ ಹಣ ಸಿಕ್ಕಿದ್ದು ಎಲ್ಲಿಂದ? ಆ ಹಣವನ್ನು ಅವನು ಸಂಪಾದನೆ ಮಾಡಿದ್ದಾ? ನಿಮ್ಮ ಮಗನ ಕಲೆಕ್ಷನ್ ತಾನೆ ಅದು ಎಂದು ನೇರವಾಗಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಅವನ್ಯಾರೊ ನಿಮ್ಮ ಆರ್ಕಿಟೆಕ್ಟ್ ಇದಾನಲ್ಲ. ಕಾವೇರಿಯಲ್ಲಿ ಸಭಾಂಗಣ ಕಟ್ಟಿದ್ದೀರಲ್ಲ, ಆ ನಿಮ್ಮ ಆರ್ಕಿಟೆಕ್ಟ್ ತಾನೆ ಸಂತೋಷ ಮನೆಯಲ್ಲಿ ಹಣ ಕೊಂಡೋಗಿ ಇಟ್ಟಿದ್ದು. ಆ ಹಣ ಎಲ್ಲಿಂದ ಬಂತು? ಅದು ವರ್ಗಾವಣೆ ಹಣ ತಾನೆ? ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ನಿಮಗೆ? ಇಂತಹ ಬಂಡತನದಲ್ಲಿ ಇದ್ದರೆ ಇಂತಾ ಬಂಡರಿಗೆ ಏನು ಹೇಳಲು ಆಗುತ್ತದೆ ಎಂದರು.
ಪೆನ್‌ಡ್ರೈವ್ ಏನಾಯ್ತು ಎಂದು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಪೆನ್‌ಡ್ರೈವ್ ತೋರಿಸಿದಾಗ ಎಷ್ಟು ಸಚಿವರು ನನಗೆ ಫೋನ್ ಮಾಡಿದರು? ಎಷ್ಟು ಜನರು ನನ್ನ ಹತ್ತಿರ ಅಣ್ಣಾ ಅಣ್ಣಾ ಅಂತಾ ಬಂದರು ಗೊತ್ತಾ? ಋಣದಲ್ಲಿದ್ದೇವೆ, ನಿಮ್ಮಿಂದ ಬೆಳೆದಿದ್ದೇವೆ ಅಣ್ಣಾ ಅಂತಾ ಯಾಕೆ ಹೇಳಿದರು? ಪೆನ್‌ಡ್ರೈವ್‌ನಲ್ಲಿ ನನ್ನದು ಇದ್ಯಾ ಅಂತ ನಿದ್ದೆಗೆಟ್ರಲಾ? ಯಾಕೆ ನಿದ್ರೆಗೆಟ್ಟರು? ನಿಮ್ಮ ಮಂತ್ರಿಗಳು ಯಾಕೆ ನನ್ನ ಹತ್ತಿರ ಬಂದರು ಎಂದು ಪ್ರಶ್ನಿಸಿದರು.
ಹಾವು ಬಿಡದೆ ಇಷ್ಟೆಲ್ಲಾ ನೀವು ನಿದ್ದೆಗೆಟ್ಟಿದ್ದೀರಿ. ಹಾವು ಇದೆ ಅಂದಿದ್ದಕ್ಕೆ ಬೆಚ್ಚಿ ಹೋಗಿದ್ದೀರಲ್ಲಾ, ಹಾವು ಬಿಟ್ಟರೆ ಏನಾಗುತ್ತೀರಿ? ಪೆನ್‌ಡ್ರೈವ್ ಬಿಡುಗಡೆ ಮಾಡುವವರಗೆ ಕಾಯಿರಿ ಎಂದು ಹೇಳುವ ಮೂಲಕ ಅಂದು ಮಾಧ್ಯಮಗಳ ಮುಂದೆ ತೋರಿಸಿದ್ದ ಪೆನ್‌ಡ್ರೈವ್ ಬಿಡುಗಡೆ ಮಾಡುವ ಸುಳಿವನ್ನು ನೀಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Mon, 20 November 23