Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಿಂದು ರಾಜ್ಯಾಧ್ಯಕ್ಷನಾಗಿರುವುದು ಬಿಎಸ್ ಯಡಿಯೂರಪ್ಪರಿಂದಲ್ಲ: ಬಿವೈ ವಿಜಯೇಂದ್ರ

ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಾನಿಂದು ರಾಜ್ಯಾಧ್ಯಕ್ಷನಾಗಿರುವುದು ಬಿಎಸ್ ಯಡಿಯೂರಪ್ಪರಿಂದಲ್ಲ. ನನ್ನನ್ನ ಆಯ್ಕೆ ಮಾಡಿರುವುದು ಬಿಜೆಪಿ ರಾಷ್ಟ್ರೀಯ ನಾಯಕರು. ನನ್ನ ಪೂರ್ವಜನ್ಮದ ಪುಣ್ಯ ನಾನು​ ಯಡಿಯೂರಪ್ಪ ಅವರ ಮಗನಾಗಿದ್ದು ಮತ್ತು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದು ಎಂದು ಹೇಳಿದ್ದಾರೆ.

ನಾನಿಂದು ರಾಜ್ಯಾಧ್ಯಕ್ಷನಾಗಿರುವುದು ಬಿಎಸ್ ಯಡಿಯೂರಪ್ಪರಿಂದಲ್ಲ: ಬಿವೈ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Nov 20, 2023 | 7:13 PM

ಮೈಸೂರು, ನವೆಂಬರ್​​​ 20: ನಾನಿಂದು ರಾಜ್ಯಾಧ್ಯಕ್ಷನಾಗಿರುವುದು ಬಿಎಸ್ ಯಡಿಯೂರಪ್ಪರಿಂದಲ್ಲ. ನನ್ನನ್ನ ಆಯ್ಕೆ ಮಾಡಿರುವುದು ಬಿಜೆಪಿ ರಾಷ್ಟ್ರೀಯ ನಾಯಕರು. ನನ್ನ ಪೂರ್ವಜನ್ಮದ ಪುಣ್ಯ​ ಯಡಿಯೂರಪ್ಪ ಅವರ ಮಗನಾಗಿದ್ದು ಮತ್ತು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದು ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡ್ತಾರೆಂದು ಯಾರೂ ಭಾವಿಸಿರಲಿಲ್ಲ. ಈ ಪಕ್ಷ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನೇಕ ನಾಯಕರು ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ನನ್ನ ಪರಿಚಯ ಮಾಡಿಕೊಟ್ಟಿದ್ದು ವರುಣ ಜನರು. ಮುಂದಿನ ಬಾರಿ ವರುಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಬೇಕು. ನಮ್ಮ ಕಾರ್ಯಕರ್ತರು ಅನೇಕ ವರ್ಷಗಳಿಂದ ತಮ್ಮ ತಮ್ಮ ನಾಯಕರ ಗೆಲುವಿಗೆ ಶ್ರಮಿಸಿದ್ದೀರಾ. ಮೊದಲು ಮೈಸೂರಿನಿಂದ ನನ್ನ ಪ್ರವಾಸವನ್ನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಬೂತ್ ಅಧ್ಯಕ್ಷರಿಗೂ, ಪಕ್ಷದ ನಾಯಕರಿಗೂ ಒಂದೇ ಗೌರವ 

ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಉದ್ದೇಶ ಹೊಂದಿದೆ. ನಾನು ಅಧ್ಯಕ್ಷನಾದ ಮೊದಲಿಗೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಟ್ಟೆ. ನಮ್ಮಲ್ಲಿ ಬೂತ್ ಅಧ್ಯಕ್ಷರಿಗೂ ಒಂದೇ ಗೌರವ, ಪಕ್ಷದ ನಾಯಕರಿಗೂ ಒಂದೇ ಗೌರವ ಸೀಗಬೇಕು. ದೇಶದ ಭವಿಷ್ಯವನ್ನ ರೂಪಿಸುವ ಲೋಕಸಭಾ ಚುನಾವಣೆ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ ಎಂದರು.

ಇದನ್ನೂ ಓದಿ: ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಿಷ್ಟು

ಇಂಡಿಯಾ ಹೆಸರಿನ ಮಿತ್ರ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಒಂದಾಗುತ್ತಿವೆ. ಇಂಡಿಯಾ ಮಿತ್ರ ಕೂಟಕ್ಕೆ ದೇಶದ ಬಗ್ಗೆ ಕಾಳಜಿಯಿಲ್ಲ. ರಾಜ್ಯ ಸರಕಾರ ಬಂದು ಆರು ತಿಂಗಳಾಗಿದೆ. ಶಾಸಕರಿಗೆ ಒಂದು ರೂಪಾಯಿ ಅನುದಾನ ಕೊಡಲು ಯೋಗ್ಯತೆ ಇಲ್ಲ. ಸರ್ಕಾರದ ಮಂತ್ರಿಗಳು ಉದ್ಧಟತನದಿಂದ ನಡೆದು ಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಬೈಯುವುದು ಒಂದೇ ರಾಜ್ಯ ಸರ್ಕಾರದ ಕೆಲಸವಾಗಿ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ಶಕ್ತಿ ಬಿಜೆಪಿಗಿದೆ: ಸಂಸದ ಪ್ರತಾಪ್ ಸಿಂಹ

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ಶಕ್ತಿ ಬಿಜೆಪಿಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಇನ್ನಷ್ಟು ಬಲ ಸಿಕ್ಕಿದೆ. ಅಯೋಧ್ಯೆಯಲ್ಲಿ ರಾಮಮಂದಿರವೂ ಕೂಡ ನಿರ್ಮಾಣ ಆಗುತ್ತಿದೆ. ವಿಜಯೇಂದ್ರ ನೇತೃತ್ವದಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.

ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣ ವಿಜಯೇಂದ್ರರಿಗಿದೆ: ಮಾಜಿ ಸಚಿವ ಎನ್​ ಮಹೇಶ್​ 

ಮಾಜಿ ಸಚಿವ ಎನ್​ ಮಹೇಶ್​ ಮಾತನಾಡಿ, ಯಾರು ಜನರನ್ನ ತನ್ನತ್ತ ಸೆಳೆದುಕೊಂಡು ಹೋಗ್ತಾರೆ ಅವರು ಲೀಡರ್. ಅಂತಹ ಶಕ್ತಿ ಇರುವಂತಹ ನಾಯಕ ವಿಜಯೇಂದ್ರ. ಅತಿ ಹೆಚ್ಚು ಯುವಕರನ್ನ ಹೊಂದಿರುವ ದೇಶ ನಮ್ಮದು. ಯುವಕರನ್ನ ಪ್ರತಿನಿಧಿಸುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಹೈಕಮಾಂಡ್ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದರು.

ವಿಜಯೇಂದ್ರರಿಗೆ ಹಿರಿಯರು, ಕಿರಿಯರು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣವಿದೆ. ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ 15 ಸೀಟು ಗೆದ್ದಾಗಿದೆ. ಇನ್ನು 13 ಕ್ಷೇತ್ರ ಗೆಲ್ಲಲು ನಾವು ಸಿದ್ದರಾಗಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:35 pm, Mon, 20 November 23