ಸ್ಪೀಕರ್​ಗೆ ಸಿಗುವುದು ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ: ಜಮೀರ್​​ ಹೇಳಿಕೆಗೆ ಸಿಟಿ ರವಿ ಕಿಡಿ

ಸ್ಪೀಕರ್ ಸ್ಥಾನ ಎಂಬುದು ಸಾಂವಿಧಾನಿಕ ಹುದ್ದೆ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ. ಸಂವಿಧಾನದ ಬಗ್ಗೆ ಅರ್ಥ ಆಗದ ನಿಮ್ಮಂತವರು (ಜಮೀರ್) ಸಚಿವರಾದರೆ ಹೀಗೆಯೇ ಆಗೋದು ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಸ್ಪೀಕರ್​ಗೆ ಸಿಗುವುದು ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ: ಜಮೀರ್​​ ಹೇಳಿಕೆಗೆ ಸಿಟಿ ರವಿ ಕಿಡಿ
ಸಿಟಿ ರವಿ
Follow us
| Updated By: ಗಣಪತಿ ಶರ್ಮ

Updated on: Nov 18, 2023 | 2:46 PM

ಉಡುಪಿ, ನವೆಂಬರ್ 18: ‘ವಿಧಾನಸಭೆಯ ಸ್ಪೀಕರ್​​ ಸ್ಥಾನ ಎಂಬುದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ. ಸ್ಪೀಕರ್​ಗೆ ಸಿಗುವುದು ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ’ ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi) ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಸ್ಥಾನ ಎಂಬುದು ಸಾಂವಿಧಾನಿಕ ಹುದ್ದೆ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ. ಸಂವಿಧಾನದ ಬಗ್ಗೆ ಅರ್ಥ ಆಗದ ನಿಮ್ಮಂತವರು ಸಚಿವರಾದರೆ ಹೀಗೆಯೇ ಆಗೋದು ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರ ಘನತೆಯನ್ನು ಹಾಳು ಮಾಡಬೇಡಿ ಎಂದು ಸಿಟಿ ರವಿ ಜಮೀರ್ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ.

ಬಿಜೆಪಿಯಿಂದ ಉತ್ತರ ಕರ್ನಾಟಕ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಯಕರ ಆಯ್ಕೆಯಲ್ಲಿ ಯಾವ ಭಾಗ ಎಂಬುದು ಬರಲ್ಲ. ಉತ್ತರ ಕರ್ನಾಟಕದವರಾದ ಬೊಮ್ಮಯಿ ಎರಡು ವರ್ಷ ಸಿಎಂ ಆಗಿದ್ದರು. ವಿಪಕ್ಷ ನಾಯಕನ, ರಾಜ್ಯಧ್ಯಕ್ಷರ ಆಯ್ಕೆ ಸಮಗ್ರ ಕರ್ನಾಟಕಕ್ಕೆ ನಡೆದ ಆಯ್ಕೆಯಾಗಿದೆ. ರಾಜ್ಯ ಬಿಜೆಪಿಗೆ ನಾಯಕನನ್ನು ಆಯ್ಕೆ ಮಾಡಲಾಗಿದೆ. ಅಶೋಕ ಸಮರ್ಥ ವಿಪಕ್ಷ ನಾಯಕನಾಗಿ ಎಲ್ಲಾ ಟೀಕೆಗೆ ಉತ್ತರಿಸುತ್ತಾರೆ. ನಾಯಕರಾದ ನಿರ್ಮಲಾ ಸೀತಾರಾಮನ್, ದುಷ್ಯಂತ್ ಜೊತೆ ನಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಮ್ಮೆಲ್ಲ ಶಾಸಕರ ಜೊತೆ ಮಾತನಾಡಿ ನಿರ್ಣಯವಾಗಿದೆ ಎಂದು ಸಿಟಿ ರವಿ ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನೀವು ಟಿಕೆಟ್ ಆಕಾಂಕ್ಷಿಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು 1994 ರ ನಂತರ ಯಾವುದೇ ಸ್ಥಾನ ಕೇಳಿ ಪಡೆದಿಲ್ಲ. ನಾನು ಆಕಾಂಕ್ಷಿಯಲ್ಲ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷದ ಗೆಲುವಿಗೆ ಶಕ್ತಿಮೀರಿ ಶ್ರಮ ಹಾಕುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಬಿಜೆಪಿ ಶಾಸಕರು ಕೂಡ ನಮಸ್ಕಾರ್​ ಸಾಬ್​’ ಹೇಳಿಕೆ ವಿವಾದ; ಯುಟರ್ನ್​ ಹೊಡೆದ ಸಚಿವ ಜಮೀರ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಅಸಮಾಧಾನ ಹೊಂದಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ರವಿ, ನಾನು ರೇಸ್​ನಲ್ಲಿ ಇಲ್ಲ ಎಂದು ಮೂರು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದೆ. ರೇಸಲ್ಲೇ ಇಲ್ಲ ಅಂದಮೇಲೆ ಬೇಸರದ ಪ್ರಶ್ನೆ ಬರಲ್ಲ. ಜವಾಬ್ದಾರಿ ಯಾವಾಗ ಯಾರಿಗೆ ಕೊಡಬೇಕು ಎಂದು ವರಿಷ್ಠರು ತೀರ್ಮಾನಿಸುತ್ತಾರೆ. ನಾವು ತಂಡವಾಗಿ ಕೆಲಸ ಮಾಡುತ್ತೇವೆ, ಚರ್ಚೆ ಮಾಡಲು ಬಯಸಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ