ಬೆಂಗಳೂರು: ದೇಶ ಉಳಿಸಲು ಮುಸಲ್ಮಾನ ಬಾಂಧವರ ಮನೆ ಮನೆಗೆ ಜೆಡಿಎಸ್ ಪಕ್ಷವನ್ನು ತಲುಪಿಸಬೇಕು ಎಂದು 5ನೆ ದಿನದ ಜೆಡಿಎಸ್ ಕಾರ್ಯಾಗಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಸ್ಲಿಂ ಸಮುದಾಯದ ಮುಖಂಡರನ್ನುದ್ದೇಶಿಸಿ ಕರೆ ನೀಡಿದರು. ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ನವರು ಆರೋಪಿಸುತ್ತಾರೆ. ಆದರೆ ಅದು ಸುಳ್ಳೆಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಾಮಮಂದಿರ ಕಟ್ಟಲು ದೇಣಿಗೆ ನೀಡಿದ ಇಟ್ಟಿಗೆಗಳು ಈಗ ಎಲ್ಲಿ ಹೋದವೊ ತಿಳಿಯದು ಎಂದು ಅವರು ಟೀಕಿಸಿದರು.
19 ಪರ್ಸೆಂಟ್ ಇರುವ ಮುಸಲ್ಮಾನ್ ಬಂಧುಗಳನ್ನು ದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ನಮ್ಮ ಸಂವಿಧಾನದ ವ್ಯವಸ್ಥೆಯಲ್ಲಿ ನಾವೆಲ್ಲಾ ಒಂದು ಕುಟುಂಬದಂತೆ ಬದುಕಬೇಕು. ಕಾಂಗ್ರೆಸ್ ಸುದೀರ್ಘವಾಗಿ ಆಡಳಿತ ನಡೆಸಿದೆ. ತುರ್ತು ಪರಿಸ್ಥಿತಿಯವರೆಗೆ ಕಾಂಗ್ರೆಸ್ ಹತ್ತಿರಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕಾಂಗ್ರೆಸ್ ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ. ಕಾಂಗ್ರೆಸ್ ಸ್ವಯಂಕೃತ್ಯ ಅಪರಾಧವೇ ಅದಕ್ಕೆ ಕಾರಣ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇದೀಗ ವಿವಿಧ ರಾಜ್ಯಗಳಲ್ಲಿ ನಶಿಸುತ್ತಿದೆ. ನಾನು ಕಾಂಗ್ರೆಸ್ಗೆ ಮತ ಹಾಕಬೇಡಿ ಎನ್ನಲ್ಲ, ಜೆಡಿಎಸ್ ಬಲವಿದ್ದಲ್ಲಿ ಜೆಡಿಎಸ್ಗೆ ಮತ ಹಾಕಿ, ಇತರೆಡೆ ಕಾಂಗ್ರೆಸ್ಗೆ ಮತ ಚಲಾಯಿಸಬಹುದು ಎಂದು ಅವರು ಕಾಂಗ್ರೆಸ್ ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದರು.
ಈ ದೇಶ ಈ ಪರಿಸ್ಥಿತಿಗೆ ಬರಲು ಕಾರಣ ಏನು ಅಂತ ಯೋಚನೆ ಮಾಡಿ. ಕಾಂಗ್ರೆಸ್ ಪಕ್ಷ ನಮ್ಮನ್ನು ಗುಲಾಮರಂತೆ ನೋಡಿತು. ಮುಸ್ಲಿಂ ಸಮುದಾಯದವರ ಮುಗ್ಧತೆಯನ್ನು ಬಳಸಿಕೊಂಡಿತು. 2004 ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಾಗಿತ್ತು. ಆಗಲೂ ನಮಗೆ ಅಧಿಕಾರ ಮಾಡಲು ಬಿಡಲಿಲ್ಲ. ಪಕ್ಷದ ಕಾರ್ಯಕ್ರಮ ಬಿಟ್ಟು ಅಹಿಂದ ಅಂತಾ ಸಿದ್ದರಾಮಯ್ಯ ಹೊರಟರು.. ಮತ್ತೆ ಚುನಾವಣೆಗೆ ಹೋಗಬೇಕು ಅಂದುಕೊಂಡಿದ್ದೆವು. ಆದರೆ ನಮ್ಮ ಶಾಸಕರು ಕೈ ಮುಗಿದು ಬೇಡಿ ಮತ್ತೆ ಚುನಾವಣೆ ಬೇಡ ಅಂದ್ರು. ಬಿಜೆಪಿಯವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದು. ಬಿಜೆಪಿಯವರು ಸಹ ನಮ್ಮನ್ನು ಅವರಿಗೆ ಬೇಕಾದಾಗ ಬಳಸಿಕೊಂಡರು ಎಂದು ಎಚ್ಡಿಕೆ ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.
ಇದನ್ನೂ ಓದಿ:
ಬಹಿರಂಗ ಹೇಳಿಕೆ ನೀಡದಂತೆ ಜೆಡಿಎಸ್ ಶಾಸಕರಿಗೆ ಹೆಚ್ ಡಿ ಕುಮಾರಸ್ವಾಮಿ ಸೂಚನೆ
ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ
Published On - 5:42 pm, Sun, 3 October 21