ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ

Karnataka Politics: ಬಿಜೆಪಿಗೆ ಅನುಕೂಲ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುತ್ತಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ


ಬೆಂಗಳೂರು: ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿ ಕಾಂಗ್ರೆಸ್ ಸೋಲಿಸುವ ಕೆಲಸ ಮಾಡುತ್ತಿದೆ. ಬಸವಕಲ್ಯಾಣದಲ್ಲೂ ಅದನ್ನೇ ಮಾಡಿದ್ರು. ಮುಸ್ಲಿಮರ ಬಗ್ಗೆ ಜೆಡಿಎಸ್‌ನವರಿಗೆ ಅಷ್ಟೊಂದು ಕಾಳಜಿ ಇದ್ರೆ, ಸಂಪುಟದಲ್ಲಿ ಯಾಕೆ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಏಕೆ ಟಿಕೆಟ್ ಕೊಡಲ್ಲ? ಬಿಜೆಪಿಗೆ ಅನುಕೂಲ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುತ್ತಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಈ ಹೇಳಿಕೆಗೆ ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನನಗೆ ಆರ್ಡರ್ ಮಾಡುವುದಕ್ಕೆ ಸಿದ್ದರಾಮಯ್ಯ ಯಾರು? ಎಲ್ಲಿ ಯಾವ ಅಭ್ಯರ್ಥಿ ಹಾಕಬೇಕೆಂದು ಇವರನ್ನ ಕೇಳಬೇಕಾ? ಇವರ ಮುಂದೆ ನಾನು ಅರ್ಜಿ ಹಿಡಿದುಕೊಂಡು ನಿಲ್ಲಬೇಕಾ? ನಮ್ಮ ಪಕ್ಷದ ವಿಚಾರಕ್ಕೆ ತಲೆ ಹಾಕುವುದಕ್ಕೆ ಅವರು ಯಾರು? ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸಿಂದಗಿ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯನ್ನಾಗಿ ನಾಜಿಯಾ ಶಕೀಲಾ ಅಂಗಡಿ ಅವರನ್ನು ಆಯ್ಕೆ ಮಾಡಿದ್ದಾರೆ. ಈಗಾಗಲೇ ಹಾನಗಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ ನಿಯಾಜ್ ಶೇಕ್ ಅವರನ್ನು ಹೆಚ್.ಡಿ.ಕುಮಾರಸ್ವಾಮಿ ಆಯ್ಕೆ ಮಾಡಿದ್ದಾರೆ.

ದಲಿತ ಮುಖ್ಯಮಂತ್ರಿ ವಿಚಾರ; ಸಿದ್ದರಾಮಯ್ಯ ಪ್ರತಿಕ್ರಿಯೆ
ಕಾಂಗ್ರೆಸ್ ನಾಯಕ ಡಾ.ಜಿ. ಪರಮೇಶ್ವರ್‌ರಿಂದ ದಲಿತ ಸಿಎಂ ಅಸ್ತ್ರ ವಿಚಾರವಾಗಿ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿ ಇದ್ದೇವೆ ಎಂದು ಹೇಳಿದ್ದಾರೆ. ಪಂಜಾಬ್​ನಲ್ಲಿ ದಲಿತರನ್ನ ಮುಖ್ಯಮಂತ್ರಿ ಮಾಡಿದ್ದಾರೆ. ನಮ್ಮಲ್ಲೂ ದಲಿತ ಸಿಎಂ ಬೇಕೆಂದು ಕೇಳುವಂತಾಗಬಹುದು ಎಂದು ಇದಕ್ಕೂ ಮೊದಲು ತುಮಕೂರಿನಲ್ಲಿ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ ಅನಿಸುತ್ತಿದೆ: ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲು ಹೇಳಿಕೆ

ಇದನ್ನೂ ಓದಿ: ಕುಮಾರಸ್ವಾಮಿ ಅವರಲ್ಲಿ ಇಷ್ಟವಾದ ಗುಣಗಳೇನು? ಜೆಡಿಎಸ್ ಸಂಘಟನಾ ಕಾರ್ಯಗಾರದಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಕಠಿಣ ಪರೀಕ್ಷೆ!

Read Full Article

Click on your DTH Provider to Add TV9 Kannada