HD Kumaraswamy: ಸುಧಾಕರ್ ಹಣದ ದಾಹ ಪ್ರತಿ ಹಳ್ಳಿಗೂ ಗೊತ್ತಿದೆ; ಹೆಚ್​ಡಿ ಕುಮಾರಸ್ವಾಮಿ ತಿರುಗೇಟು

|

Updated on: Apr 04, 2023 | 6:20 PM

ಸಚಿವ ಡಾ. ಕೆ ಸುಧಾಕರ್ ಹಣದ ದಾಹ ಪ್ರತಿ ಹಳ್ಳಿಗೂ ಗೊತ್ತಿದೆ ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು: ಸಚಿವ ಡಾ. ಕೆ ಸುಧಾಕರ್ (K Sudhakar) ಹಣದ ದಾಹ ಪ್ರತಿ ಹಳ್ಳಿಗೂ ಗೊತ್ತಿದೆ ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​​ (JDS) 120 ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದೇ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಸಚಿವ ಡಾ. ಕೆ ಸುಧಾಕರ್ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಅವರು, ಸುಧಾಕರ್ ಅವರ ಹಣದ ದಾಹ ಪ್ರತಿ ಹಳ್ಳಿಗೂ ಗೊತ್ತಿದೆ. ಜನರಿಗೆ ಟಿವಿ, ರೆಫ್ರಿಜರೇಟರ್, ಸ್ಟೌವ್ ಎಲ್ಲವನ್ನೂ ಕೊಟ್ಟಿದ್ದಾರೆ ಪಾಪ. ಆರೋಗ್ಯ ಸಚಿವರು​ ಸಂಪತ್ಭರಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇವರು (ಸುಧಾಕರ್) ಇಷ್ಟೆಲ್ಲ ಮಾಡಿದ್ದಾರಲ್ಲ ಎಂಬುದಾಗಿ ಜನರು ಈ ಬಾರಿ ಮನೆಯಲ್ಲೇ ಕುಳಿತುಕೊಳ್ಳುವಂತೆ ಮಾಡಿದರೆ? ಆಗ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲವಲ್ಲಾ? ಆ ರೀತಿ ಆದರೆ ಅವರು ಏನು ಮಾಡುತ್ತಾರೆ, ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​​ 100 ಸ್ಥಾನ ಗಳಿಸಲ್ಲ. ಒಂದು ವೇಳೆ ಆ ಪಕ್ಷ 120 ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದೇ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದರು. ಹಲವು ಬಾರಿ ಸಮ್ಮಿಶ್ರ ಸರ್ಕಾರಗಳ ಆಡಳಿತವನ್ನು ಕಂಡು ರೋಸಿಹೋಗಿರುವ ರಾಜ್ಯದ ಜನತೆ, ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದ್ದಾರೆ ಎಂದೂ ಹೇಳಿದ್ದರು.

ಇದನ್ನೂ ಓದಿ: K Sudhakar: ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯವಾಗಿ ನಿವೃತ್ತಿ; ಸಚಿವ ಕೆ ಸುಧಾಕರ್

ಕೆಲವು ಕಡೆ ಜೆಡಿಎಸ್ ಬಲಿಷ್ಠವಾಗಿಲ್ಲ; ಹೆಚ್​ಡಿಕೆ

ರಾಜ್ಯದ ಕೆಲವು ಕಡೆಗಳಲ್ಲಿ ಜೆಡಿಎಸ್​ ಸ್ಪಲ್ಪ ದುರ್ಬಲವಾಗಿದೆ, ಅದನ್ನು ಒಪ್ಪಿಕೊಳ್ಳುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ನಮಗೆ ಮತ ಹಾಕಲು ಜನ ಸಿದ್ಧರಿದ್ದಾರೆ. ಅವರನ್ನು ಸಮರ್ಥವಾಗಿ ಸೆಳೆಯಲು ಜೆಡಿಎಸ್ ಅಭ್ಯರ್ಥಿಗಳ ಕೊರತೆಯಿದೆ. ಅಂತಹ ಕಡೆ ಮತವಾಗಿ ಪರಿವರ್ತಿಸುವ ನಾಯಕರು ಬಂದಾಗ ಚಿಂತನೆ ಮಾಡಲಾಗುವುದು. ಕೆಲವೆಡೆ ಸಂಘಟನೆ, ಮತವಾಗಿ ಪರಿವರ್ತಿಸುವ ಅಭ್ಯರ್ಥಿ ಕೊರತೆಯಿದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿಯವರು ಅವರ ದೌರ್ಬಲ್ಯ ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ? ಅವರ ಪರಿಸ್ಥಿತಿ ಏನು ಎಂಬುದು ನನಗೂ ತಿಳಿದಿದೆ. ಸಮರ್ಥವಾದ ಅಭ್ಯರ್ಥಿಗಳು ಇರುವ ಕಡೆ ಘೋಷಣೆ ಮಾಡಿದ್ದೇವೆ. ಮತ ಪರಿವರ್ತಿಸುವುದಾಗಿ ಬರುವವರಿದ್ದರೆ ಜೆಡಿಎಸ್​ಗೆ ಸೇರಿಸಿಕೊಳ್ಳುತ್ತೇವೆ ಎಂದು ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಎರಡನೇ ಪಟ್ಟಿಯಲ್ಲೇ ಹಾಸನ ಟಿಕೆಟ್ ಘೋಷಣೆ

ಜೆಡಿಎಸ್​ನ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲೇ ಹಾಸನ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗುವುದು. ಆ ಬಗ್ಗೆ ನಮಗಿಂತ ಹೆಚ್ಚಾಗಿ ನಿಮಗೇ ಕುತೂಹಲವಿದೆ. ಹಾಸನ ಬಿಟ್ಟು ಉಳಿದ ಕಡೆಗಳ ಪಟ್ಟಿ ಬಿಡುಗಡೆ ಮಾಡಿದ್ರೆ ಏನೇನೋ ಕತೆ ಶುರುವಾಗುತ್ತದೆ. ಹೀಗಾಗಿ 2ನೇ ಪಟ್ಟಿಯಲ್ಲೇ ಹಾಸನ ಟಿಕೆಟ್ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Tue, 4 April 23