Ghulam Nabi Azad: ಯಾವುದೇ ರಾಜ್ಯದ ಚುನಾವಣೆ ಗೆಲುವಿನ ಶ್ರೇಯ ಕಾಂಗ್ರೆಸ್ ಕೇಂದ್ರ ನಾಯಕತ್ವಕ್ಕೆ ಸಲ್ಲದು; ಗುಲಾಂ ನಬಿ ಆಜಾದ್
ಕಾಂಗ್ರೆಸ್ ಪಕ್ಷವು ಯಾವುದೇ ರಾಜ್ಯದಲ್ಲಿ ಚುನಾವಣೆಯಲ್ಲಿ ಗೆದ್ದರೆ ಅದರ ಶ್ರೇಯಸ್ಸು ಪಕ್ಷದ ಕೇಂದ್ರ ನಾಯಕತ್ವಕ್ಕೆ ಸಲ್ಲದು ಎಂದು ಹಿರಿಯ ನಾಯಕ, ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದ ಗುಲಾಂ ನಬಿ ಆಜಾದ್ ಅಭಿಪ್ರಾಯಟ್ಟಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷವು ಯಾವುದೇ ರಾಜ್ಯದಲ್ಲಿ ಚುನಾವಣೆಯಲ್ಲಿ ಗೆದ್ದರೆ ಅದರ ಶ್ರೇಯಸ್ಸು ಪಕ್ಷದ ಕೇಂದ್ರ ನಾಯಕತ್ವಕ್ಕೆ ಸಲ್ಲದು ಎಂದು ಹಿರಿಯ ನಾಯಕ, ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದ ಗುಲಾಂ ನಬಿ ಆಜಾದ್ (Ghulam Nabi Azad) ಅಭಿಪ್ರಾಯಟ್ಟಿದ್ದಾರೆ. ಕಾಂಗ್ರೆಸ್ ತೊರೆದ ಬಳಿಕ ‘ಡೆಮಾಕ್ರಟಿಕ್ ಆಜಾದ್ ಪಕ್ಷ’ ಸ್ಥಾಪಿಸಿರುವ ಅವರು, ತಮ್ಮ ಆತ್ಮಚರಿತ್ರೆ ಬಿಡುಗಡೆ ಹಿನ್ನೆಲೆಯಲ್ಲಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಬಹುದು ಎಂದು ಹೇಳಿದ್ದಾರೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಜತೆಗಿನ ಬಾಂಧವ್ಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಹೊಸ ಪಕ್ಷವನ್ನು ಸ್ಥಾಪಿಸಿದ ನಂತರ ನನಗೆ ತುಂಬಾ ನಿರಾಳತೆ ಒದಗಿದೆ. 70-80 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ನಾಯಕರ ಗುಂಪಿನಲ್ಲಿ ಒಬ್ಬನಾಗಿ ಇ.ಡಿ (ಜಾರಿ ಇಲಾಖೆ) ಕಚೇರಿಯ ಮುಂದೆ ನಿಲ್ಲಬೇಕಾದ ಅಥವಾ ಸೂರತ್‌ಗೆ ಹೋಗಬೇಕಾದ (ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಲು) ಅನಿವಾರ್ಯತೆಯಿಂದ ಪಾರಾಗಿದ್ದೇನೆ. ಇದಕ್ಕಾಗಿ ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದೀಗ, ನಾನು ಕಚೇರಿಯಿಂದ ಕಚೇರಿಗೆ ಚಲಿಸುವವನಾಗಿ ಉಳಿದಿಲ್ಲ. ಬದಲಿಗೆ ಜನರ ನಡುವೆ ಇದ್ದೇನೆ. ನಾನು ಕಾಂಗ್ರೆಸ್ ತೊರೆದ ನಂತರ ರಾಜ್ಯದಲ್ಲಿ ಸೃಷ್ಟಿಸಿದಂಥ ದೊಡ್ಡ ನೆಲೆಯನ್ನು ನನ್ನ ರಾಜ್ಯದಲ್ಲಿ ಹಿಂದೆಂದೂ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಮೋದಿ ಸರ್ವಾಧಿಕಾರಿಯೇ?
ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಎಂಬ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ರಾಜಕೀಯ ಪಕ್ಷದ ಯಾವ ನಾಯಕ ಸ್ವ ಪಕ್ಷದಲ್ಲಿ ಸರ್ವಾಧಿಕಾರಿಯಾಗಿಲ್ಲ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸರ್ವಾಧಿಕಾರಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕೇಂದ್ರ ನಾಯಕತ್ವ ಯಾವುದೇ ರೀತಿಯಲ್ಲೂ ಪ್ರಭಾವ ಬೀರುವುದಿಲ್ಲ; ಆಜಾದ್
ಭಾರತ್ ಜೋಡೋ ಯಾತ್ರೆ ಹಾಗೂ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡ ಬಳಿಕ ಏನಾದರೂ ಬದಲಾವಣೆಗಳು ಕಾಣಿಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾನು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದೇನೆ, ಸಂಪರ್ಕದಲ್ಲಿರಲು ಬಯಸುವುದೂ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಏನೂ ಬದಲಾವಣೆ ಆಗಿಲ್ಲ ಎಂದು ಹೇಳಬಹುದು. ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಹೇಳುವುದು ಬದಲಾವಣೆ ಎಂದರ್ಥವಲ್ಲ. ಚುನಾವಣೆ ಗೆಲ್ಲುವುದು ಸಂಪೂರ್ಣವಾಗಿ ವಿಭಿನ್ನವಾದ ವಿಚಾರವಾಗಿದೆ. ಕನಿಷ್ಠ ಪಕ್ಷ ಕಾಂಗ್ರೆಸ್‌ನಲ್ಲಿ, ಎಲ್ಲೆಲ್ಲಿ ಬಲಿಷ್ಠ ರಾಜ್ಯ ನಾಯಕರಿದ್ದಾರೋ ಅವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಇತರ ರಾಜಕೀಯ ಪಕ್ಷಗಳು, ಪ್ರಾದೇಶಿಕ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾದ ರಾಜ್ಯ ನಾಯಕತ್ವವನ್ನು ಹೊಂದಿದ್ದರೆ, ಅಲ್ಲೆಲ್ಲ ಕಾಂಗ್ರೆಸ್ ಸೋಲುತ್ತದೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಕೇಂದ್ರ ನಾಯಕತ್ವವು ಅವರಿಂದಲೇ ಪಕ್ಷ ರಾಜ್ಯಗಳಲ್ಲಿ ಗೆಲ್ಲುತ್ತದೆ ಅಥವಾ ಸೋಲುತ್ತದೆ ಎಂದು ಹೇಳಿಕೊಳ್ಳುವಂತಿಲ್ಲ. ಕಾಂಗ್ರೆಸ್‌ನಲ್ಲಿ ಕೇಂದ್ರ ನಾಯಕತ್ವ ಯಾವುದೇ ರೀತಿಯಲ್ಲೂ ಪ್ರಭಾವ ಬೀರುವುದಿಲ್ಲ. ಅವರು ಯಾರನ್ನೂ ಸೋಲಿಸಲು ಅಥವಾ ಗೆಲ್ಲಲು ಸಾಧ್ಯವಿಲ್ಲ. ರಾಜ್ಯ ನಾಯಕತ್ವ ಎಷ್ಟು ಪ್ರಬಲವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆಜಾದ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ