ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲ್ಲ, ಆದರೆ: ಮೋದಿ ಭೇಟಿ ಬಳಿಕ ಹೆಚ್​ಡಿ ಕುಮಾರಸ್ವಾಮಿ ಕೊಟ್ಟ ಸುಳಿವು ಏನು?

ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಕ್ಷೇತ್ರದಲ್ಲಿ ಯಾರು ನಿಲ್ಲಬೇಕು ಎಂಬ ಬಗ್ಗೆ ಅಂತಿಮ ನಿರ್ಣಯ ಮಾಡುತ್ತೇವೆ. ವಿಶ್ವಾಸ ಎರಡು ಪಕ್ಷಗಳ ನಡುವೆ ಮೂಡಬೇಕು. ಅದಕ್ಕೆ ನಾನು ಆದ್ಯತೆ ನೀಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಭೇಟಿ ಬಳಿಕ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜತೆಗೆ, ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲ್ಲ ಎಂದೂ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲ್ಲ, ಆದರೆ: ಮೋದಿ ಭೇಟಿ ಬಳಿಕ ಹೆಚ್​ಡಿ ಕುಮಾರಸ್ವಾಮಿ ಕೊಟ್ಟ ಸುಳಿವು ಏನು?
ಪ್ರಧಾನಿ ಮೋದಿ ಜತೆ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ
Updated By: Ganapathi Sharma

Updated on: Dec 21, 2023 | 1:24 PM

ನವದೆಹಲಿ, ಡಿಸೆಂಬರ್ 21: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಕೊನೆಗೂ ಮೌನ ಮುರಿದಿದ್ದಾರೆ. ದೆಹಲಿಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮೇಲಿನ ಅಭಿಮಾನದಿಂದ ಕೆಲವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷ ಮತ್ತು ಬಿಜೆಪಿಯಲ್ಲಿ ಕೆಲವರು ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಮಂತ್ರಿಯಾದರೆ ರಾಜ್ಯಕ್ಕೆ ಆದ್ಯತೆ ಸಿಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ತುದಿಗಾಲಲ್ಲಿ‌ ನಿಂತಿಲ್ಲ. ಆ ಬಗ್ಗೆ ತಿರ್ಮಾನವೂ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಿಖಿಲ್ ಸ್ಪರ್ಧೆ ಮಾಡಲ್ಲ: ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಸ್ಪರ್ಧೆಯಲ್ಲಿ ಇರಲ್ಲ. ಆದರೆ, 28 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಸ್ಪರ್ಧೆ ಮಾಡಲ್ಲ ಅಂತಾ ಅವರೇ ಸ್ಪಷ್ಟಪಡಿಸಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ನಮ ಪಕ್ಷದಲ್ಲಿ ತಿರ್ಮಾನ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ: ಲೋಕಸಭೆ ಟಿಕೆಟ್ ಹಂಚಿಕೆ ಚರ್ಚೆ

ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಕ್ಷೇತ್ರದಲ್ಲಿ ಯಾರು ನಿಲ್ಲಬೇಕು ಎಂಬ ಬಗ್ಗೆ ಅಂತಿಮ ನಿರ್ಣಯ ಮಾಡುತ್ತೇವೆ. ವಿಶ್ವಾಸ ಎರಡು ಪಕ್ಷಗಳ ನಡುವೆ ಮೂಡಬೇಕು. ಅದಕ್ಕೆ ನಾನು ಆದ್ಯತೆ ನೀಡುತ್ತಿದ್ದೇನೆ. ಸೀಟು ಹಂಚಿಕೆ ಆಮೇಲೆ, ಅದರಲ್ಲಿ ಹೆಚ್ಚು ಕಮ್ಮಿ ಆಗುತ್ತೆ. ಜನವರಿ ಅಂತ್ಯದೊಳಗೆ ಸರ್ಕಾರದ ವೇದಿಕೆ ಸಿದ್ಧ ಮಾಡುತ್ತೇವೆ ಎಂದು ಅವರು ಹೇಳಿದರು.

ಮೈತ್ರಿ ಬಗ್ಗೆ ಅಸಮಾಧಾನ ಇಲ್ಲ: ಕುಮಾರಸ್ವಾಮಿ

ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಬಗ್ಗೆ ಯಾರಿಗೂ ಅಸಮಧಾನ ಇಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ಸಮಸ್ಯೆ ಇರಬಹುದು. ದೆಹಲಿ ಮತ್ತು ರಾಜ್ಯ ನಾಯಕರಿಗೆ ಇದನ್ನು‌ ನಿಭಾಯಿಸುವ ಸಾಮರ್ಥ್ಯ ಇದೆ. ಚುನಾವಣೆ ಮೇಲೆ ಇದು ಪರಿಣಾಮ ಬೀರಲ್ಲ. ಇಂದು ಅಥಾವ ನಾಳೆ‌ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ