ಬರ ಛಾಯೆ: ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ಕರ್ನಾಟಕ ಸರ್ಕಾರಕ್ಕೆ ಹೆಚ್​ಡಿ ರೇವಣ್ಣ ಒತ್ತಾಯ

| Updated By: Rakesh Nayak Manchi

Updated on: Sep 03, 2023 | 7:05 PM

ಹಾಸನ ಜಿಲ್ಲೆಯ ಲೋಕಸಭಾ ಕ್ಷೇತ್ರ ಹಾಗೂ ಏಳು ವಿಧಾನಸಭಾ ಕ್ಷೇತ್ರದಗಳಲ್ಲಿ ಮಳೆಯಿಲ್ಲದೆ ಬೆಳೆ ಹಾನಿಯಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಕೂಡಲೇ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಬರ ಎಂದು ಅಧಿಕೃತವಾಗಿ ಘೋಷಿಸಲಿ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಒತ್ತಾಯಿಸಿದರು.

ಬರ ಛಾಯೆ: ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ಕರ್ನಾಟಕ ಸರ್ಕಾರಕ್ಕೆ ಹೆಚ್​ಡಿ ರೇವಣ್ಣ ಒತ್ತಾಯ
ಮಾಜಿ ಸಚಿವ ಹೆಚ್​ ಡಿ ರೇವಣ್ಣ
Follow us on

ಹಾಸನ, ಸೆ.3: ಜಿಲ್ಲೆಯ ಲೋಕಸಭಾ ಕ್ಷೇತ್ರ ಹಾಗೂ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆಯಿಲ್ಲದೆ ಬೆಳೆ ಹಾನಿಯಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಕೂಡಲೇ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಬರ ಎಂದು ಅಧಿಕೃತವಾಗಿ ಘೋಷಿಸುವಂತೆ ಮಾಜಿ ಸಚಿವ ಹೆಚ್​ಡಿ ರೇವಣ್ಣ (H.D.Revanna) ಒತ್ತಾಯಿಸಿದರು. ಹಾಸನದಲ್ಲಿ ಮಾತನಾಡಿದ ಅವರು, ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದರು.

ಕಳೆದ ಒಂದೂವರೆ ತಿಂಗಳಿಂದ 16 ಟಿಎಂಸಿ ನೀರು ಬಿಟ್ಟಿದ್ದಾರೆ. ಈ ನೀರಿನಲ್ಲಿ ನಮ್ಮ ಜಿಲ್ಲೆಯ ರೈತರು ಒಂದು ಬೆಳೆ ಬೆಳೆಯುತ್ತಿದ್ದರು. ನೀರಾವರಿ ಸಲಹಾ ಸಮಿತಿ ಸಭೆ ಮಾಡದೆ ಹೇಗೆ ನೀರು ಬಿಟ್ಟಿದ್ದಾರೆ? ಬೆಂಗಳೂರಿನಲ್ಲಿ ಕುಳಿತು ನೀವು ತೀರ್ಮಾನ ಮಾಡಿದರೆ ಹೇಗೆ ಎಂದು ರೇವಣ್ಣ ಪ್ರಶ್ನಿಸಿದರು.

ಚುನಾವಣೆ ಕಾರಣಕ್ಕೆ ತಮಿಳುನಾಡಿಗೆ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರ

ರಾತ್ರೋರಾತ್ರಿ ಹೇಮಾವತಿ ಜಲಾಶಯದಿಂದ ನೀರು ಬಿಡುತ್ತಿದ್ದಾರೆ. ಬಹುಶಃ ಇವರು ತಮಿಳುನಾಡಿನ ಜೊತೆ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಕರ್ನಾಟಕ ಕಾಗ್ರೆಸ್ ಮತ್ತು ತಮಿಳುನಾಡಿನವರು ಇಂಡಿಯಾ ಮೈತ್ರಿಯಲ್ಲಿ ಪಾಟ್ನರ್ಸ್ ಆಗಿದ್ದಾರೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀರು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಕಾರಣದಿಂದ ತಮಿಳುನಾಡಿಗೆ ನೀರು ಬಿಟ್ಟಿದಾರೆ ಎಂದು ಕಿಡಿಕಾರಿದ ರೇವಣ್ಣ, ಕೆಲವು ಕಡೆ ನೀರಾವರಿ ಅಚ್ಚುಕಟ್ಟು ಪ್ರದೇಶ ಇಲ್ಲದ ಕಡೆಯು ನೀರು‌ ಹರಿಯುತ್ತಿದೆ. ಹೀಗಾಗಿ ವಿಶೇಷ ಅಧಿವೇಶ ಕರೆದು ಯಾವ ನಾಲೆಗೆ ಎಷ್ಟು ನೀರು ಬಿಟ್ಟಿದ್ದಾರೆ ಅಂಕಿ ಅಂಶ ನೀಡಲಿ ಎಂದು ರೇವಣ್ಣ ಒತ್ತಾಯಿಸಿದರು.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಸುಪ್ರೀಂಕೋರ್ಟ್​​​ನ ಮೊರೆ ಹೋಗಬೇಕು; ಹೆಚ್​ಡಿ ದೇವೇಗೌಡ

ನೀರು ಬಿಟ್ಟ ಮೇಲೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಏನು ಪ್ರಯೋಜನ ಎಂದು ಪ್ರಶ್ನಿಸಿದ ರೇವಣ್ಣ, ನಿಯೋಗ ಕಡೆದುಕೊಂಡು ಹೋದರೆ ತಮಿಳು‌ನಾಡಿಗೆ ಬಿಟ್ಟಿರುವ ನೀರನ್ನು ವಾಪಾಸ್ ಕೊಡುತ್ತಾರಾ? ನೀರು ವಾಪಸ್ ತರೊ ಮೆಷಿನ್ ಇದೆಯಾ? ನೀರು ಬಿಟ್ಟಾದ ಮೇಲೆ ಇನ್ನೆಂತಾ ನಿಯೋಗ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ರಾಜ್ಯದ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದರು.

ಹಾಸನ ನಿಮ್ಮ ಗ್ಯಾರಂಟಿ ‌ಮಾಡಿಕೊಂಡು ಕೂತು ನಮ್ಮ ರೈತರನ್ನು ಹಾಳುಮಾಡಬೇಡಿ. ರೈತರ ಬೆಳೆ ಹಾಳಾಗಿ ಹೋಗಿದೆ. ಹಾಗಾಗಿ ಕೂಡಲೇ ಅದಿವೇಶನ ಕರೆದು ಚರ್ಚೆ ಮಾಡಿ ಎಂದು ರೇವಣ್ಣ ಒತ್ತಾಯಿಸಿದರು. ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಎಲ್ಲರೂ ಒಂದಾಗಿದ್ದಾರೆ. ಕಾವೇರಿ ಕೊಳ್ಳದ ಶಾಸಕರನ್ನ ಸಭೆಗೆ ಕರೆಯದೆ ಹೇಗೆ ಸಭೆ ಮಾಡುತ್ತೀರಿ? ನಾವೂ ಆರುಬಾರಿ ಶಾಸಕರಾದವರು. ನಮ್ಮ ಅಭಿಪ್ರಾಯ ಕೂಡ ಹೇಳಬಹುದಿತ್ತು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ