ಬೆಂಗಳೂರು: ಲಂಚ ಪ್ರಕರಣದ ಆರೋಪಿ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ
ಹೈಕೋರ್ಟ್ನ ಏಕ ಸದಸ್ಯ ಪೀಠ ವಜಾಗೊಳಿಸಿದ ಬೆನ್ನಲ್ಲೆ ಅವರನ್ನು ಲೋಕಾಯುಕ್ತ ಪೊಲೀಸರು ಇಂದು (ಮಾ. 27) ಸಂಜೆ ಬಂಧಿಸಿದ್ದಾರೆ. ಮಗನ ಮನೆಗೆ ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆ ನಾಪತ್ತೆಯಾಗಿದ್ದ ಶಾಸಕ ಮಾಡಾಳ್, ಅಜ್ಞಾತಸ್ಥಳದಲ್ಲೇ ಕುಳಿತು, ಮಧ್ಯಂತರ ಜಾಮೀನು ಪಡೆದಿದ್ದರು. ಅಷ್ಟೇ ಅಲ್ಲದೇ ಜಾಮೀನು ಸಿಗುತ್ತಿದ್ದಂತೆ, ಚನ್ನಗಿರಿ ಬಂದು ಯುದ್ಧ ಗೆದ್ದವರಂತೆ ವಿಜಯೋತ್ಸವವನ್ನೂ ಮಾಡಿದ್ದರು. ಅರ್ಜಿ ವಜಾಗೊಂಡ ವೇಳೆ ಚನ್ನಗಿರಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಕ್ಷಣಮಾತ್ರದಲ್ಲಿ ಅಲ್ಲಿಂದ ತೆರಳಿ ನಾಪತ್ತೆಯಾಗಿದ್ದರು. ಅವರನ್ನು ಬಂಧಿಸುವುದಕ್ಕಾಗಿ ಲೋಕಾಯುಕ್ತ ಪೊಲೀಸರ ತಂಡ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಅಷ್ಟರಲ್ಲೇ ಅವರು ಬೆಂಗಳೂರಿಗೆ ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗಿತ್ತು. ಇದೀಗ ಕೊನೆಗೂ ಅವರನ್ನು ಚನ್ನಗಿರಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಬಂಧಿಸಲಾಗಿದೆ. ಹಾಗಾದರೆ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಹೇಗೆ, ಕಾರ್ಯಾಚರಣೆ ಹೇಗೆ ನಡೆಯಿತು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ದಾವಣಗೆರೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಮಾಡಾಳ್ ಅವರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಧಾವಿಸಿದ್ದರು. ಆರು ಜನ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಹುದ್ದೆಯ ಅಧಿಕಾರಿಗಳು ಮನೆಗೆ ತೆರಳಿದ್ದರು. ಅಷ್ಟರಲ್ಲಿ ಬಿಳಿ ಇನ್ನೋವಾ ಕಾರಿನಲ್ಲಿ ಮಾಡಾಳ್ ಬೆಂಗಳೂರು ಕಡೆ ತೆರಳಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಅದರಂತೆಯೇ ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Madal Virupakshappa: ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಮಾಡಾಳ್ ವಿರೂಪಾಕ್ಷಪ್ಪ
ಚನ್ನಗಿರಿ ಪಟ್ಟಣದಲ್ಲಿ ಬಂಧನಕ್ಕೆ ದಾವಣಗೆರೆ ಲೋಕಾಯುಕ್ತ ಎಸ್‌ಪಿ M.S.ಕೌಲಾಪುರೆ ನೇತೃತ್ವದ ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ತವರಿನಲ್ಲಿ ಬಂಧನವಾಗುವುದು ಬೇಡವೆಂದು ನಿರ್ಧರಿಸಿದ್ದ ಮಾಡಾಳ್ ಬೆಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಇನ್ನು ತವರು ಕ್ಷೇತ್ರ ಚನ್ನಗಿರಿಯಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿದ್ದ ಮಾಡಾಳ್, ಆರೋಪ ಮುಕ್ತನಾಗಿ ಬರುವೆ ಎಂದು ಭಾವುಕರಾಗಿದ್ದರು. ಹೇಳಿಕೆ ನೀಡಿದ ಕೇವಲ ಎರಡು ಗಂಟೆಯಲ್ಲೇ ಮಾಡಾಳ್ ಬಂಧನಕ್ಕೊಳಗಾಗಿದ್ದಾರೆ.
ಈಗಾಗಲೇ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಪುತ್ರ ಪ್ರಶಾಂತ್ ಇದ್ದು, ಮಾಡಾಳ್ ಜಾಮೀನಿನ ಮೇಲೆ ಹೊರಗಿದ್ದ ಪ್ರಕರಣದ ಎ1 ಆರೋಪಿಯಾಗಿದ್ದರು. ಬಹುಕಾಲ ಕಾಂಗ್ರೆಸ್‌ನಲ್ಲಿದ್ದ ಮಾಡಾಳ್ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2008 ಹಾಗೂ 2018ರಲ್ಲಿ ಬಿಜೆಪಿಯಿಂದ ಚನ್ನಗಿರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಸಿಎಂ ಬಿಎಸ್‌ವೈರವರ ಪರಮಾಪ್ತರಾಗಿದ್ದು, ಕೆಜೆಪಿ ಸ್ಥಾಪಿಸಿದ್ದಾಗ ಯಡಿಯೂರಪ್ಪ ಜೊತೆ ಹೋಗಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಇದನ್ನೂ ಓದಿ: Madal Virupakshappa: ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನ ಭೀತಿ; ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಮಾಡಾಳ್ ವಿರೂಪಾಕ್ಷಪ್ಪ ಬಂಧನ ಬಳಿಕ ಬೆಂಗಳೂರಿಗೆ ಕರೆದುಕೊಂಡ ಬಂದ ಪೋಲಿಸರು ಬೆಂಗಳೂರಿನ ಶಿವಾಜಿನಗರದಲ್ಲಿರುವ ಲೇಡಿಕರ್ಜನ್ ಬೌರಿಂಗ್ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಬೌರಿಂಗ್ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ ರೂಮ್‌ನಲ್ಲಿ ವಿರೂಪಾಕ್ಷಪ್ಪ ಊಟ ಸೇವಿಸಿದರು. ಈ ವೇಳೆ ಮಾಡಾಳ್ ಹೈಡ್ರಾಮಾ ಶುರುಮಾಡಿದ್ದು, ನನಗೆ ಎದೆ ನೋವು. ನಾನು ಹೃದ್ರೋಗಿ, ನನಗೆ ಎದೆ ನೋವು ಬರ್ತಿದೆ ಎಂದರು. ಮಾಡಾಳ್‌ರನ್ನು ಬಹುತೇಕ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆಯಿದ್ದು, ವೈದ್ಯಕೀಯ ತಪಾಸಣೆ ಬಳಿಕ ಲೋಕಾಯುಕ್ತ ಪೊಲೀಸರು ನಿರ್ಧರಿಸಲಿದ್ದಾರೆ.
ಮಾರ್ಚ್ – 2
ಮಾರ್ಚ್ – 3
ಮಾರ್ಚ್ – 7
ಮಾರ್ಚ್ – 9
ಮಾರ್ಚ್ – 15
ಮಾರ್ಚ್ – 27
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:00 pm, Mon, 27 March 23