Madal Virupakshappa: ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನ ಭೀತಿ; ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿ ಸೋಮವಾರ ಆದೇಶ ನೀಡಿದೆ. ಪರಿಣಾಮವಾಗಿ ವಿರೂಪಾಕ್ಷಪ್ಪ ಬಂಧನ ಭೀತಿ ಎದುರಿಸುತ್ತಿದ್ದಾರೆ.
ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಏಕಸದಸ್ಯ ಪೀಠ ವಜಾಗೊಳಿಸಿ ಸೋಮವಾರ ಆದೇಶ ನೀಡಿದೆ. ಪರಿಣಾಮವಾಗಿ ವಿರೂಪಾಕ್ಷಪ್ಪ ಬಂಧನ ಭೀತಿ ಎದುರಿಸುತ್ತಿದ್ದಾರೆ. ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀರ ಬಲೆಗೆ ಬಿದ್ದಿದ್ದರು. ನಂತರ ಮಾಡಾಳ್ ವಿರೂಪಾಕ್ಷಪ್ಪ ಅವರ ದಾವಣಗೆರೆ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿತ್ತು. ಅಲ್ಲಿಯೂ ಕೋಟ್ಯಂತರ ರೂ. ನಗದು ಪತ್ತೆಯಾಗಿತ್ತು. ಬಳಿಕ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ದೊರೆತ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರಿಗೆ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಜೆಐಗೂ ಪತ್ರ ಬರೆಯಲಾಗಿತ್ತು.
ಜಾಮೀನಿನಲ್ಲಿದ್ದರೂ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿ
ಈ ಮಧ್ಯೆ, ಲೋಕಾಯುಕ್ತ ಪ್ರಕರಣದ ಬಗ್ಗೆ ದಾವಣಗೆರೆಯಲ್ಲಿ ಕೇಳಲಾದ ಪ್ರಶ್ನೆಗೆ ಕೈ ಮುಗಿದು ಉತ್ತರಿಸಿದ ಮಾಡಾಳ್, ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದರು. ಲೋಕಾಯುಕ್ತ ಪ್ರಕರಣದಲ್ಲಿ ಜಾಮೀನಿನಲ್ಲಿದ್ದರೂ ಅವರು, 351 ಕೋಟಿ ವೆಚ್ಚದ ವಿವಿಧ ಕಾಮಗಾರಿ ಹಾಗೂ ಶಂಕುಸ್ಥಾಪನಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಿದರು. ಇದೀಗ ವಿವಿಧ ಫಲಾನುಭವಿಗಳಿಗೆ ಪರಿಕರಗಳ ವಿತರಣೆ ಮಾಡಲಿದ್ದಾರೆ.
ಇದನ್ನೂ ಓದಿ: Madal Virupakshappa: ಪಕ್ಷದಿಂದ ಉಚ್ಚಾಟಿಸುವುದಾಗಿ ಸಿಎಂ ಹೇಳಿದ್ದರು; ಮಾಡಾಳ್ ವಿರೂಪಾಕ್ಷಪ್ಪ
ನಮ್ಮ ಅವಧಿಯಲ್ಲಿ ನಡೆದ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಇನ್ನೆರಡು ದಿನಗಳು ಕಳೆದರೆ ನೀತಿ ಸಂಹಿತೆ ಜಾರಿಯಾಗುತ್ತದೆ. ಅದ್ದರಿಂದ ಉದ್ಘಾಟನೆ, ಶಂಕುಸ್ಥಾಪನೆ ಈಗಲೇ ಮಾಡುತ್ತಿದ್ದೇವೆ. ತರಾತುರಿಯಲ್ಲಿ ಯಾವುದೇ ಕಾಮಗಾರಿ ಉದ್ಘಾಟನೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಚುನಾವಣೆಯ ಬಗ್ಗೆ ಕೇಳಿದಾಗ ಉತ್ತರಿಸದೆ ಕೈಮುಗಿದು ಹೊರಟು ಹೋಗಿದ್ದಾರೆ. ಬೇರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಮಾಡಾಳ್ ಪುತ್ರ ಪ್ರಶಾಂತ್ ಬೆಂಗಳೂರು ಜಲಪೂರೈಕೆ ಮತ್ತು ಒಳಚರಂಡಿ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎಂಬ ಆರೋಪ ಅವರ ಮೇಲಿದೆ. ಲೋಕಾಯುಕ್ತ ದಾಳಿ ವೇಳೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Mon, 27 March 23