ದೆಹಲಿ: ಮುಂಬರುವ 2022ರ ರಾಷ್ಟ್ರಪತಿ ಚುನಾವಣೆಯಲ್ಲಿ (Presidential Polls 2022) ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ರಾಷ್ಟ್ರಪತಿ ಚುನಾವಣೆಯ ರೇಸ್‌ನಲ್ಲಿ ನಾನಿಲ್ಲ ಎಂದು ಪವಾರ್ ಹೇಳಿದ್ದಾರೆ. “ನಾನು ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ ಎಂದು 81 ವರ್ಷದ ಮಾಜಿ ಕೇಂದ್ರ ಸಚಿವ ಮುಂಬೈನಲ್ಲಿ ನಿನ್ನೆ ಸಂಜೆ ನಡೆದ ಎನ್‌ಸಿಪಿ ಸಭೆಯಲ್ಲಿ ಹೇಳಿದ್ದಾರೆ ಎಂದು ಔಟ್ ಲುಕ್ ಇಂಡಿಯಾ ವರದಿ ಮಾಡಿದೆ. ಆದಾಗ್ಯೂ, ಶರದ್ ಪವಾರ್ನಿಂದ ಕಾಂಗ್ರೆಸ್ಗೆ ಅಧಿಕೃತವಾದ ಹೇಳಿಕೆ ಇನ್ನೂ ಲಭ್ಯವಾಗಿಲ್ಲ .ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ಮತಗಳನ್ನು ಪಡೆಯುತ್ತವೆ ಎಂಬ ವಿಶ್ವಾಸ ಪವಾರ್ ಅವರಿಗೆ ಇದ್ದಂತಿಲ್ಲ. ಹಾಗಾಗಿ ಚುನಾವಣೆಯಲ್ಲಿ ಸೋಲು ಅನುಭವಿಸುವುದು ಬೇಡ ಎಂದು ಅವರು ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೂನ್ 15 ರಂದು ಕರೆದ ವಿರೋಧ ಪಕ್ಷದ ಸಭೆಗೆ ಮುಂಚಿತವಾಗಿ, ವಿರೋಧ ಪಕ್ಷಗಳು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ತಮ್ಮ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಪರಿಗಣಿಸುತ್ತಿವೆ ಎಂದು ಹೇಳಲಾಗಿದೆ. ಶರದ್ ಪವಾರ್ ಅವರ ಹೆಸರು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಬಂದರೆ, ಮಹಾರಾಷ್ಟ್ರ ಕಾಂಗ್ರೆಸ್ ಅವರ ಜೊತೆಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.ಏತನ್ಮಧ್ಯೆ, ಎಎಪಿಯಿಂದ ಯಾವುದೇ ಹೇಳಿಕೆ ಬಂದಿಲ್ಲವಾದರೂ, ಎಎಪಿ ಶರದ್ ಪವಾರ್ಗೆ ಬೆಂಬಲ ನೀಡಲಿದೆ ಎಂದು ಮೂಲಗಳು ಹೇಳಿರುವುದಾಗಿ ಇಂಡಿಯಾ ಟುಡೇ ಮತ್ತು ಎಫ್‌ಪಿಜೆ ವರದಿ ಮಾಡಿದೆ. ಪವಾರ್ ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ನಡುವೆ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಪವಾರ್ ಪರವಾಗಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸೋನಿಯಾ ಅವರ ಸಂದೇಶವನ್ನು ತಿಳಿಸಲು ಖರ್ಗೆ ಇತ್ತೀಚೆಗೆ ಮುಂಬೈನಲ್ಲಿ ಪವಾರ್ ಅವರನ್ನು ಭೇಟಿಯಾದರು ಎಂದು ಪತ್ರಿಕೆಯು ಉನ್ನತ ಮೂಲಗಳನ್ನು ಉಲ್ಲೇಖಿಸಿದೆ. ಈ ಸಭೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಪ್ರತಿಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಂದೇಶವನ್ನು ಖರ್ಗೆ ಅವರು ರವಾನಿಸಿದ್ದಾರೆ .ಆದರೆ ಪವಾರ್ ಇದಕ್ಕೆ ಇನ್ನೂ ಒಪ್ಪಿಕೊಂಡಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ಪವರ್‌ಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಅವರಿಗೆ ಬೆಂಬಲವನ್ನು ಪಡೆಯಲು ಇತರ ಪಕ್ಷಗಳನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಪವಾರ್ ಅವರಿಗೆ 50 ವರ್ಷಗಳ ಚುನಾವಣಾ ರಾಜಕೀಯ ಅನುಭವವಿದೆ ಅವರು ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ರಕ್ಷಣಾ ಸಚಿವ ಮತ್ತು ಕೃಷಿ ಸಚಿವರಾಗಿದ್ದರು. ಅವರು ಮಹಾರಾಷ್ಟ್ರ ಮತ್ತು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವೃತ್ತಿಜೀವನದ ಅಂತ್ಯದಲ್ಲಿ ಅಂಥಾ ಮಹತ್ತರ ಹುದ್ದೆಗೆ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಉದ್ಧವ್ ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:14 pm, Tue, 14 June 22