100 ದಿನ ಅವಕಾಶ ಕೊಟ್ಟು ನೋಡಿ, ರಾಜ್ಯಾಧ್ಯಕ್ಷ ಹೇಗಿರಬೇಕೆಂದು ತೋರಿಸುತ್ತೇನೆ: ವಿ ಸೋಮಣ್ಣ

|

Updated on: Jun 23, 2023 | 3:16 PM

ನಾನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಕೇಳಿದ್ದು ನಿಜ. ಬಿಜೆಪಿ ನಾಯಕರಿಗೆ ಪತ್ರ ಬರೆದು 100 ದಿನ ಅವಕಾಶ ಕೊಡಿ ಎಂದು ಕೇಳಿರುವುದಾಗಿ ಮಾಜಿ ಸಚಿವ ವಿ ಸೋಮಣ್ಣ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

100 ದಿನ ಅವಕಾಶ ಕೊಟ್ಟು ನೋಡಿ, ರಾಜ್ಯಾಧ್ಯಕ್ಷ ಹೇಗಿರಬೇಕೆಂದು ತೋರಿಸುತ್ತೇನೆ: ವಿ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೋರಿ ಹೈಕಮಾಂಡ್​ಗೆ ಪತ್ರ ಬರೆದ ವಿ ಸೋಮಣ್ಣ
Follow us on

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮುಂದಿನ ರಾಜ್ಯಾಧ್ಯಕ್ಷ (BJP State President) ಹಾಗೂ ವಿಪಕ್ಷ ಯಾರಾಗಲಿದ್ದಾರೆ ಎಂಬ ಚರ್ಚೆ ಪಕ್ಷದೊಳಗೆ ಜೊರಾಗಿಯೇ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವರ ಹೆಸರು ಮುನ್ನೆಲೆಯಲ್ಲಿದೆ. ಈ ನಡುವೆ ವಿ ಸೋಮಣ್ಣ (V Somanna) ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಲು ಆರಂಭಿಸಿದ್ದು, 100 ದಿನ ಅವಕಾಶ ಕೊಟ್ಟು ನೋಡಿ ಅಂತ ಬಿಜೆಪಿ ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಕೇಳಿದ್ದು ನಿಜ. ನಾನು ಕೂಡ ಪಕ್ಷವನ್ನು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದೇನೆ. ನನಗೆ ನನ್ನದೇ ಆದಂತ 45 ವರ್ಷದ ಅನುಭವವಿದೆ. ಬಿಜೆಪಿ ಕೊಟ್ಟ ಅನೇಕ ಟಾಸ್ಕ್​ಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಕೆಟ್ಟ ಪರಿಸ್ಥಿತಿಯಲ್ಲಿ ಒಂದು ಅವಕಾಶ ಕೊಡಿ ಅಂತಾ ಕೇಳಿದ್ದೇನೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಅವಕಾಶ ಕೇಳಿದ್ದೇನೆ ಎಂದರು.

ಇದನ್ನೂ ಓದಿ: ಕೊನೆಗೂ ವಿರೋಧ ಪಕ್ಷ ನಾಯಕನ ಆಯ್ಕೆಗೆ ಕೂಡಿಬಂತು ಮುಹೂರ್ತ, ಬಿಜೆಪಿಯಲ್ಲಿ ಯಾರಾಗ್ತಾರೆ ಪ್ರತಿಪಕ್ಷದ ನಾಯಕ?

ನಾನು ಅವಕಾಶ ಕೇಳಿದ್ದು ಕೇವಲ 100 ದಿನ ಮಾತ್ರ. ಒಬ್ಬ ರಾಜ್ಯಾಧ್ಯಕ್ಷ ಯಾವ ರೀತಿ ಸಂಚಲನವನ್ನು ಮೂಡಿಸಬೇಕು ಎಂದು ತೋರಿಸುತ್ತೇನೆ. ನಾನು ಸ್ವಲ್ಪ ಜೋರಾಗಿ ಮಾತಾಡುತ್ತೇನೆ ಸತ್ಯ ಮಾತಾಡುತ್ತೇನೆ ಗಲಾಟೆ ಮಾಡುತ್ತೇನೆ ನಿಜ. ಆದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂಥ ಸಾಮರ್ಥ್ಯವಿದೆ. ಅವಕಾಶ ಕೊಟ್ಟರೆ ಎಲ್ಲರ ಮನೆಗೆ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ. ನಮ್ಮಲ್ಲೂ ಕೂಡ ಪ್ರತಿಭೆ ಇದೆ, ಶಕ್ತಿ ಇದೆ, ದೂರದೃಷ್ಟಿ ಚಿಂತನೆ ಇದೆ ಎಂದು ಸೋಮಣ್ಣ ಹೇಳಿದ್ದಾರೆ.

ಇವತ್ತಿನ ಸಂದರ್ಭದಲ್ಲಿ ನನಗಿಂತ ಯಾರಾದರೂ ಸಮರ್ಥರು ಇದ್ದರೆ ಅವರ ಜೊತೆ ಕೂತು ಮಾತನಾಡಿಸಿ. ಅದನ್ನು ಮಾಡದೆ ನಾಲ್ಕು ಗೋಡೆಗಳ ಮಧ್ಯೆ ಇನ್ನೇನೂ ಆಗುವುದು ಬೇಡ. ಇವತ್ತಿನ ಸಂದರ್ಭ ಅರ್ಥ ಮಾಡಿಕೊಂಡು ಕೆಲಸ ಮಾಡುವವನಿಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಪಕ್ಷ ಅವಕಾಶ ಕೊಟ್ಟರೆ ಈಗ ಏನು 3-4 ತಿಂಗಳಿಂದ ಮಲಗಿದ್ದೇವೆ ಯಾರನ್ನು ಬಿಡದೆ ಎಲ್ಲರ ಮನೆಗೆ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ನಾನು ಇದ್ದೇನೆ ಅಂದಾಕ್ಷಣ ನಾಲ್ಕಾರು ಜನಕ್ಕೆ ಮುಜುಗರ ಆಗಬಹುದು ಅಷ್ಟೇ. ಎಂಥ ವಿರೋಧ ಬಂದರೂ ನಾನು ಎದುರಿಸಿ ಹೋಗುತ್ತೇನೆ. ಯಾರ್ಯಾರಿಗೆ ಎಲ್ಲೆಲ್ಲಿ ಇಂಜೆಕ್ಷನ್ ಕೊಡಬೇಕು ನನಗೆ ಗೊತ್ತಿದೆ. ಇವರು ಎಲ್ಲೋ ಕುಳಿತುಕೊಂಡು ಇಂಜೆಕ್ಷನ್ ಕೊಡುತ್ತಾರೆ ನಾನು ಓಡಾಡಿಕೊಂಡು ಕೊಡುತ್ತೇನೆ. ಪಕ್ಷ ಅಂತಿಮ, ಪಕ್ಷ ಸಂಘಟನೆ ಮಾಡುವ ಕೆಲಸ ಬೇಕು ಮಾಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Fri, 23 June 23