ಹಾಸನ, ಜ.19: ಕುಟುಂಬ ಸಹಿತವಾಗಿ ನಾನು ಅಯೋಧ್ಯೆ ರಾಮ ಮಂದಿರಕ್ಕೆ (Ayodhya Ram Mandir) ಹೋಗುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ನಾನು, ನನ್ನ ಪತ್ನಿ, ಮಗ ಹೆಚ್ಡಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಹಾಗೂ ನಿಖಿಲ್ ಹೋಗುತ್ತೇವೆ ಎಂದರು.
ಜನವರಿ 22ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ. ಅದರಲ್ಲೆ ಅಯೋಧ್ಯೆಗೆ ಹೋಗುತ್ತೇವೆ. ಸಂಜೆ ಒಕ್ಕಲಿಗರ ಒಂದು ಸಮಾವೇಶ ಇದೆ. ಎಸ್ ಎಂ ಕೃಷ್ಣ, ಡಿಕೆ ಶಿವಕುಮಾರ್, ನಾನು ನಮ್ಮ ಸ್ವಾಮಿಜಿ ಎಲ್ಲರೂ ಭಾಗಿಯಾಗುತ್ತೇವೆ ಎಂದರು.
ಮೀಸಲಾತಿ ಬಗ್ಗೆ ತಮ್ಮ ಅಧಿಕಾರವಧಿಯಲ್ಲಿ ಕೈಕೊಂಡ ತೀರ್ಮಾನಗಳ ಬಗ್ಗೆ ದೇವೇಗೌಡರು ಸ್ಮರಿಸಿದರು. ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿದೆ. ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿ ಕೋಟಾ ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟಿದ್ದು ನಾನು ಎಂದು ಹೆಚ್ಡಿ ದೇವೇಗೌಡರು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಂವಿದಾನ ಕೊಟ್ಟ ಮೀಸಲಾತಿ ಭರ್ತಿಮಾಡಲು ಆಗದಿದ್ದಾಗ ಉದ್ಯೋದದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದರು. ಶೇಕಡಾ 15 ಎಸ್ಸಿಗಳಿಗೆ, ಶೇಕಡಾ 3 ಎಸ್ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಅದನ್ನ ಶೇಕಡಾ 15 ರಿಂದ 18ಕ್ಕೆ ಮತ್ತು ಶೇಕಡಾ 3 ರಿಂದ 5ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಡಿದ್ದು ಎಂದರು.
ಅಂದು ಶೇಕಡಾ 23 ರಷ್ಟು ತೀರ್ಮಾನ ಮಾಡಿದ್ದು ಈಗಲೂ ಜಾರಿಯಲ್ಲಿ ಇದೆ. ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಇಷ್ಟು ವರ್ಷ ಕೆಲವೇ ಕೆಲವು ಕುಟುಂಬಗಳು ಫಲ ಅನುಭವಿಸಿವೆ. ನಾವು ಮಾಡಿರುವ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಈ ಮೀಸಲಾತಿಯ ಫಲ ಅನುಭವಿಸಿವೆ ಎಂದರು.
ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಪುಟ ಒಪ್ಪಿಗೆ: ಸಿಡಿದೆದ್ದ ಬಿಜೆಪಿ ನಾಯಕರು
ನಮ್ಮ ಅವದಿಯಲ್ಲಿ ತಿಪ್ಪೇಸ್ವಾಮಿ ಅವರು ಒಳ ಮೀಸಲಾತಿ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿದ್ದರು. ಅಂದು ಖರ್ಗೆ ಅವರು ವಿಪಕ್ಷದ ನಾಯಕರಾಗಿದ್ದರು. ಅವರು ತಮ್ಮ ಸೀಟ್ನಿಂದ ನೆಗೆದು ಬಂದು ಆ ನಿರ್ಣಯ ಪ್ರತಿಯನ್ನ ಹರಿದು ಹರಿದು ಅವರ ಮುಖಕ್ಕೆ ಎಸೆದಿದ್ದರು. ಇವತ್ತು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇವೇಗೌಡರು ಮಾಡಿದ ಕೆಲಸವನ್ನು ಮರೆ ಮಾಚೊಕೆಲಸವನ್ನು ಇಷ್ಟು ದಿನ ಮಾಡಿದ್ದೀರಿ. ಈ ಜಿಲ್ಲೆಯ ಉಸ್ತುವಾರಿ ಮಂತ್ರಿ ರಾಜಣ್ಣ. ಚುನಾವಣೆ ಮುಗಿಯುವ ವೇಳೆಯಲ್ಲಿ ನನಗೆ ಜ್ವರ ಬಂದು ಮಲಗಿದ್ದೆ. ಆಗ ಅವರು ನೀವು ಬಂದರೆ ನಾನು ಗೆಲ್ಲುತ್ತೇನೆ, ಇಲ್ಲವಾದರೆ ಗೆಲ್ಲಲ್ಲ ಎಂದಿದ್ದರು. ಅವರು ಜನರಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆಗ ಅವರು 700ಕ್ಕೂ ಹೆಚ್ಚು ಮತಗಳಿಂದ ಗೆದ್ದರು ಎಂದರು.
ರಾಜಣ್ಣರ ಬಗ್ಗೆ ನನಗೆ ತುಂಬಾ ಗೌರವ ಇದೆ. ನಾನು ತುಮಕೂರಿನಿಂದ ಸ್ಪರ್ದೆ ಮಾಡಿದಾಗ ನೀವು ಮುದ್ದು ಹನುಮೇಗೌಡರ ಸ್ಥಾನ ಕಿತ್ತುಕೊಂಡ್ರಿ ಅಂತಾ ಬಹಿರಂಗ ಸಭೆಯಲ್ಲಿ ಹೇಳಿದ್ದರು ಎಂದು ಹೇಳುವ ಮೂಲಕ 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಣ್ಣ ಮಾತನಾಡಿದ್ದ ಬಗ್ಗೆ ದೇವೇಗೌಡರು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಚರ್ಚೆ ನಡೆಯುತ್ತಿದ್ದು, ನಾಲ್ಕೈದು ಸ್ಥಾನಗಳು ನೀಡುವಂತೆ ಜೆಡಿಎಸ್ ಮನವಿ ಮಾಡಿದೆ. ಈ ಬಗ್ಗೆ ಮಾತನಾಡಿದ ದೇವೇಗೌಡರು, ನಮಗೆ ನಾಲ್ಕು ಸೀಟ್ ಕೊಡುತ್ತಾರೋ ಮೂರು ಕೊಡುತ್ತಾರೋ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು, 13 ತಿಂಗಳಿಗೆ ನನ್ನನ್ನು ಪ್ರದಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾರು ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಅಸಾಮಾಧಾನ ಜೊರಹಾಕಿದ ದೇವೇಗೌಡರು, ನನ್ನ ರಾಜಕೀಯ ಜೀವನದಲ್ಲಿ 60 ವರ್ಷ ದುಡಿದಿದ್ದೇನೆ. ಯಾವ ಯಾವ ಸಮುದಾಯಕ್ಕೆ ಮೀಸಲಾತಿ ಲಾಭ ಆಗಿದೆ. ಇದರ ಲಾಭವನ್ನು ಯಾರು ಪಡೆದಿದ್ದಾರೆ ಎಂಬುದರ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.
ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಹೊತ್ತುಹಾಕೊ ಕೆಲಸ ಮಾಡಿದಾರೆ. ಇದನ್ನೇ ಮುಂದಿಟ್ಟು ಈ ಚುನಾವಣೆಯಲ್ಲಿ ಹೋರಾಟ ಮಾಡುತ್ತೇನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ