ಕರ್ನಾಟಕದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಕುಮಾರಸ್ವಾಮಿ ನೇತೃತ್ವ: ಅಮಿತ್ ಶಾ ಆಹ್ವಾನ
ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಕ್ಷೇತ್ರ ಹಂಚಿಕೆಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಜೆಡಿಎಸ್ ಗೆಲ್ಲಲು ಅವಕಾಶ ಇರುವ ಮೂರು ಕ್ಷೇತ್ರಗಳನ್ನು ಕುಮಾರಸ್ವಾಮಿ ಕೇಳಿದ್ದಾರೆ. ಇದರ ಜೊತೆಗೆ ರಾಜ್ಯಸಭಾ ಸ್ಥಾನ ಅಥವಾ ಮಂತ್ರಿಸ್ಥಾನ ನೀಡುವ ಭರವಸೆಯನ್ನೂ ಅವರಿಗೆ ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಜನವರಿ 19: ಲೋಕಸಭೆ ಚುನಾವಣೆಗೆ (Lok Sabha Elections 2024) ಕರ್ನಾಟಕದಲ್ಲಿ ಎನ್ಡಿಎ (NDA) ಮೈತ್ರಿಕೂಟದ ನೇತೃತ್ವ ವಹಿಸುವಂತೆ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಗೆ (HD Kumaraswamy) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಹ್ವಾನ ಕೊಟ್ಟಿದ್ದಾರೆ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಬುಧವಾರ ರಾತ್ರಿ ದೆಹಲಿಯಲ್ಲಿ ಮಾತುಕತೆ ನಡೆಸಿದ ವೇಳೆ ಈ ವಿಚಾರ ಪ್ರಸ್ತಾಪವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರ ಜತೆ ಸಮನ್ವಯ ಸಾಧಿಸಲು ಹೆಚ್ಡಿಕೆ ನೇತೃತ್ವ ವಹಿಸಲಿ ಎಂಬ ಅಭಿಪ್ರಾಯವನ್ನು ಅಮಿತ್ ಶಾ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಕ್ಷೇತ್ರ ಹಂಚಿಕೆಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಜೆಡಿಎಸ್ ಗೆಲ್ಲಲು ಅವಕಾಶ ಇರುವ ಮೂರು ಕ್ಷೇತ್ರಗಳನ್ನು ಕುಮಾರಸ್ವಾಮಿ ಕೇಳಿದ್ದಾರೆ. ಇದರ ಜೊತೆಗೆ ರಾಜ್ಯಸಭಾ ಸ್ಥಾನ ಅಥವಾ ಮಂತ್ರಿಸ್ಥಾನ ನೀಡುವ ಭರವಸೆಯನ್ನೂ ಅವರಿಗೆ ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ.
ಚುನಾವಣೆಗೂ ಮುನ್ನ ಕೇಂದ್ರ ಸಚಿವ ಸ್ಥಾನದ ಆಫರ್
ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸಚಿವರಾಗಲು ಕುಮಾರಸ್ವಾಮಿಗೆ ಅಮಿತ್ ಶಾ ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ. ಆದರೆ, ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಿಸುವ ಕೆಲಸ ಮಾಡುತ್ತೇವೆ. ಸದ್ಯಕ್ಕೆ ಕೇಂದ್ರ ಮಂತ್ರಿ ಸ್ಥಾನ ಬೇಡ ಎಂದು ಕುಮಾರಸ್ವಾಮಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಬುಧವಾರ ರಾತ್ರಿ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ, ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದರು. ರಾಮಮಂದಿರ ಉದ್ಘಾಟನೆ ನಂತರ ಸೀಟು ಹಂಚಿಕೆ ಚರ್ಚೆ ನಡೆಯಲಿದೆ ಎಂದು ಸಭೆಯ ನಂತರ ಕುಮಾರಸ್ವಾಮಿ ತಿಳಿಸಿದ್ದರು.
ಇದನ್ನೂ ಓದಿ: ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾದ ಕುಮಾರಸ್ವಾಮಿ: ಲೋಕಸಭೆ ಸೀಟು ಹಂಚಿಕೆ ಯಾವಾಗ ಫೈನಲ್?
ಈ ಮಧ್ಯೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಂಡ್ಯದಿಂದ ಕಣಕ್ಕಿಳಿಯುವಂತೆ ಜೆಡಿಎಸ್‌ನ ಹಲವು ಮುಖಂಡರು ಕುಮಾರಸ್ವಾಮಿ ಅವರನ್ನು ಒತ್ತಾಯಿಸುತ್ತಿದ್ದರೂ ಅವರ ಉಮೇದುವಾರಿಕೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 am, Fri, 19 January 24