ಚಿಕ್ಕಮಗಳೂರು, ನ.13: ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ರಚನೆಯಾಗಿ ಐದಾರು ತಿಂಗಳ ನಂತರ ಕರ್ನಾಟಕ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ (B.Y.Vijayendra) ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿರುವುದು ಆಕಾಂಕ್ಷಿಗಳಾದ ಸೋಮಣ್ಣ, ಬಸನಗೌಡಪಾಟೀಲ್ ಯತ್ನಾಳ್ ಸೇರಿದಂತೆ ಕೆಲವರಿಗೆ ಅಸಮಾಧಾನ ಉಂಟಾಗಿದೆ. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಿಟಿ ರವಿ (C.T. Ravi) ಮುನಿಸಿಕೊಂಡಿದ್ದಾರೆ.
ಈ ನಡುವೆ, ಸೋಮಣ್ಣ, ಸಿಟಿ ರವಿ, ಯತ್ನಾಳ್ ಸಹಿತ ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಜಯೇಂದ್ರ ಅವರು ಯತ್ನಿಸುತ್ತಿದ್ದಾರೆ. ನವೆಂಬರ್ 15 ರಂದು ನಡೆಯುವ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಸ್ಥಾನದ ಆಕಾಂಕ್ಷಿಗಳು, ಅದರಲ್ಲೂ ಇದ್ದ ಎಲ್ಲಾ ಅಧಿಕಾರಗಳು ಕೈತಪ್ಪಿ ಖಾಲಿಯಾಗಿರುವ ಸಿಟಿ ರವಿ ಅವರು ಆಗಮಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು.
ಇದನ್ನೂ ಓದಿ: ಆ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ: ಸಿಟಿ ರವಿ ಬಾಯಲ್ಲಿ ಇದೆಂಥಾ ಮಾತು…!
ಈ ಬಗ್ಗೆ ಸ್ವತಃ ಸಿಟಿ ರವಿ ಅವರೇ ಮಾತನಾಡಿದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ನಾನು ಹೋಗಲ್ಲ ಎಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ನನ್ನ ಜೊತೆ ಎರಡು ಬಾರಿ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಆದರೆ, ನ.15ರ ರಾತ್ರಿವರೆಗೂ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಇದೆ. ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲ್ಲ. ಈ ಬಗ್ಗೆ ಅವರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಾಧಿ ವಿಧಾನಸಭೆ ಚುನಾವಣಾ ಪೂರ್ವದಲ್ಲೇ ಮುಕ್ತಾಯಗೊಂಡಿದ್ದರೂ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗಿತ್ತು. ಯಾವಾಗ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತೋ ಅಂದಿನಿಂದ ಕಟೀಲ್ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು. ಅಧ್ಯಕ್ಷ ಸ್ಥಾನ ಬದಲಾವಣೆ ಕೂಗು ಕೇಳಿಬಂದಿದ್ದವು.
ಇದನ್ನೂ ಓದಿ: ಬಿಜೆಪಿಯ ಹಿಂದೂತ್ವ ಸಿದ್ಧಾಂತ ನಂಬಿಕೊಂಡು ಪಕ್ಷವನ್ನು ಸೇರಿ ಕಟ್ಟಿ ಬೆಳೆಸಿದ್ದು, ಅಧಿಕಾರದ ಲಾಲಸೆಗೆ ಅಲ್ಲ: ಸಿಟಿ ರವಿ
ಅಲ್ಲದೆ, ಹಲವರು ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು. ತನಗೆ ಅವಕಾಶಕೊಟ್ಟರೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಮರುಸಂಘಟಿಸುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದರು. ಇವರಲ್ಲದೆ, ಆರ್.ಅಶೋಕ, ಬಸನಗೌಡಪಾಟೀಲ್ ಯತ್ನಾಳ್ ಅವರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಶ್ರೀರಾಮುಲು ಕೂಡ ಕುರ್ಚಿಗಾಗಿ ಯತ್ನಿಸಿದ್ದರು. ಇವರೆಲ್ಲರ ನಡುವೆ ಅಧ್ಯಕ್ಷ ಸ್ಥಾನ ಸಿಟಿ ರವಿಗೆ ಸಿಗಲಿದೆ ಎಂದೇ ಹೇಳಲಾಗಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಕೈತಪ್ಪಿ, ಚುನಾವಣೆಯಲ್ಲೂ ಸೋಲುಂಡಿರುವ ಸಿಟಿ ರವಿ ಕೂಡ ಅದೇ ವಿಶ್ವಾಸದಲ್ಲಿದ್ದರು.
ಆದರೆ, ಅಚ್ಚರಿಯ ಬೆಳವಣಿಗೆಯಂತೆ, ಬಿಜೆಪಿ ಉಪಾಧ್ಯಕ್ಷರಾಗಿದ್ದ ಬಿವೈ ವಿಜಯೇಂದ್ರ ಅವರನ್ನು ರಾಜ್ಯಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರಿಂದ ಯಡಿಯೂರಪ್ಪ ಬಣದ ನಾಯಕರು ಸಂತಸಗೊಂಡಿದ್ದಾರೆ. ಒಂದಷ್ಟು ನಾಯಕರು ಯುವ ನಾಯಕನಿಗೆ ಬೆಂಬಲ ಸೂಚಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಕೆಲವರು ಇನ್ನೂ ಅಭಿನಂದಿಸಿಲ್ಲ ಎನ್ನಲಾಗುತ್ತಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ