ಬೆಂಗಳೂರು: ರಾಜ್ಯಸಭೆ ಚುನಾವಣಾ (Rajya Sabha Elections) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ನ ಗಾಳದಿಂದ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಜೆಡಿಎಸ್ (JDS) ಹೊಟೆಲ್ ವಾಸ್ತವ್ಯದ ಮೊರೆ ಹೋಗಿದೆ. ಅದರಂತೆ ಇಂದು ಮತ್ತು ನಾಳೆ ಜೆಡಿಎಸ್ ಶಾಸಕರು ಹೊಟೆಲ್ನಲ್ಲಿ ಉಳಿದುಕೊಳ್ಳಲಿದ್ದಾರೆ. ಇದಕ್ಕಾಗಿ ಬೆಂಗಳೂರು ಹೊರವಲಯದ ಹೋಟೆಲ್ ಒಂದನ್ನು ಗುರುತಿಸಲಾಗಿದ್ದು, ಎಲ್ಲ ಶಾಸಕರಿಗೂ ಹೋಟೆಲ್ಗೆ ಬರುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸೂಚಿಸಿದ್ದಾರೆ. ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ತಮ್ಮ 2ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಜೆಡಿಎಸ್ ಮತಗಳನ್ನು ನೆಚ್ಚಿಕೊಂಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಕೌಂಟರ್ ಕೊಡಲು ಜೆಡಿಎಸ್ ತಂತ್ರ ರೂಪಿಸಿದೆ.
ಮೂರೂ ಪಕ್ಷಗಳಲ್ಲಿ ತಳಮಳ
ರಾಜ್ಯಸಭಾ ಚುನಾವಣೆಗೆ (Rajyasabha Elections) ದಿನಗಣನೆ ಆರಂಭವಾಗಿದೆ. ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ (Karnataka Politics) ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಜೆಡಿಎಸ್ಗೆ ತನ್ನ ಕೈಲಿರುವ 32 ಪ್ರಥಮ ಪ್ರಶಸ್ತ್ಯ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಪಕ್ಷದ ನಾಲ್ವರು ಶಾಸಕರ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy), ಬಹಿರಂಗವಾಗಿಯೇ ಅನುಮಾನ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದರು. ಎಚ್ಡಿಕೆ ಆಕ್ರೋಶಕ್ಕೆ ತುತ್ತಾಗಿದ್ದ ನಾಲ್ವರೂ ಈ ಹಿಂದೆಯೇ ಪಕ್ಷದ ಉನ್ನತ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ನಂತರದ ದಿನಗಳಲ್ಲಿ ವರಸೆ ಬದಲಿಸಿದ ಕುಮಾರಸ್ವಾಮಿ, ನಮ್ಮ ಎಲ್ಲ ಶಾಸಕರೂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದರು.
ಕಾಂಗ್ರೆಸ್‌ನಲ್ಲಿ ಮೊದಲ ಅಭ್ಯರ್ಥಿಗೆ ನೀಡಿದ ಎಲ್ಲ ಮತಗಳೂ ಸಿಂಧುವಾದರೆ, ಎರಡನೇ ಅಭ್ಯರ್ಥಿಗೆ 25 ಉಳಿಕೆ ಮತಗಳು ಇರುತ್ತವೆ. ಮೊದಲ ಅಭ್ಯರ್ಥಿಗೆ 45 ಮತ ಹಾಕದವರಿಂದ ಮನ್ಸೂರ್ ಖಾನ್‌ಗೆ ಎರಡನೇ ಪ್ರಾಶಸ್ತ್ಯದ ಮತ ಸಿಗುವ ಸಾಧ್ಯತೆಯಿದೆ. ಅಡ್ಡಮತದಾನದಲ್ಲಿ ಹೆಚ್ಚುವರಿಯಾಗಿ ಮತಗಳು ಬರಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಇದೆ. 8ಕ್ಕಿಂತ ಹೆಚ್ಚು ಹೆಚ್ಚುವರಿ ಮತ ಬಂದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಸುರಕ್ಷಿತರಾಗಿರುತ್ತಾರೆ. 3ರಿಂದ 4 ಹೆಚ್ಚುವರಿ ಮತಗಳು ಬಂದರೆ ಕಾಂಗ್ರೆಸ್ನ ಮನ್ಸೂರ್ ಖಾನ್ ಸೋಲಿನ ಸುಳಿಗೆ ಸಿಲುಕುತ್ತಾರೆ.
ಮೊದಲ ಅಭ್ಯರ್ಥಿಗಳ ಗೆಲವಿನ ನಂತರ ಬಿಜೆಪಿಗೆ 32 ಉಳಿಕೆ ಮತಗಳು ಇರುತ್ತವೆ. 50 ಶಾಸಕರ ಮತಗಳನ್ನು ಹಂಚಿಕೆ ಮಾಡುವಂತೆ ರಾಜ್ಯಸಭೆಗೆ ಕರ್ನಾಟಕದಿಂದ ಸ್ಪರ್ಧಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರಾಜ್ಯ ನಾಯಕರಿಗೆ ಮನವಿ ಮಾಡಿದ್ದಾರೆ. 47ಕ್ಕಿಂತ ಹೆಚ್ಚು ಮತ ಬಂದರೆ ಮತ ವರ್ಗಾವಣೆಗೆ ಅವಕಾಶವಿದೆ. 5 ಹೆಚ್ಚುವರಿ ಮತಗಳನ್ನು ಮೂರನೇ ಅಭ್ಯರ್ಥಿಗೆ ವರ್ಗಾವಣೆ ಮಾಡಬಹುದು. ಮೊದಲ ಪ್ರಾಶಸ್ತ್ಯದ ಐದು ಮಗಳು ಲೆಹರ್ ಸಿಂಗ್ಗೆ ಸಿಗುತ್ತವೆ. ಯಾವುದೇ ಮತಗಳು ಅಸಿಂಧು ಆಗದಿದ್ದರೆ 3ನೇ ಅಭ್ಯರ್ಥಿಗೆ 32 ಮತಗಳು ಸಿಗುತ್ತವೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Wed, 8 June 22