JDS ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ: ಜ.15ರವರೆಗೆ ಸಮಯ ಕೇಳಿದ್ದಾರೆ ಎಂದ ರೇವಣ್ಣ
ಶಾಸಕ ಶಿವಲಿಂಗೇಗೌಡ ಜನವರಿ 15ರವರೆಗೆ ಸಮಯ ಕೇಳಿದ್ದಾರೆ. ಜನವರಿ 17ಕ್ಕೆ ಶನಿ ಬಿಡುಗಡೆ ಆಗುತ್ತದೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದರು.
ಹಾಸನ: ಜಿಲ್ಲೆಯ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalingegowda) ಕಾಂಗ್ರೆಸ್ (Congress) ಸೇರ್ಪಡೆ ಬಹುತೇಕ ನಿಶ್ಚಿತವಾಗಿದೆ. ಇತ್ತೀಚೆಗೆ ಮಾಜಿ ಸಚಿವ ರೇವಣ್ಣ (HD Revanna) ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಶಾಸಕ ಶಿವಲಿಂಗೇಗೌಡ ಜನವರಿ 15ರವರೆಗೆ ಡೆಡ್ಲೈನ್ ನೀಡಿದ್ದರು. ಸದ್ಯ ಈ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಶಾಸಕ ಶಿವಲಿಂಗೇಗೌಡ ಜನವರಿ 15ರವರೆಗೆ ಸಮಯ ಕೇಳಿದ್ದಾರೆ. ಜನವರಿ 17ಕ್ಕೆ ಶನಿ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಶಿವಲಿಂಗೇಗೌಡಗೆ ಒಳ್ಳೆಯದಾಗುವುದಾದರೆ ತೀರ್ಮಾನ ಕೈಗೊಳ್ಳಲಿ. ಪಕ್ಷ ಬಿಡುವುದಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ನನ್ನ ಬಳಿ ಹೇಳಿದ್ದಾರೆ. ಇದರ ಮೇಲೆ ಮುಂದಿನ ತೀರ್ಮಾನ ಶಿವಲಿಂಗಗೌಡಗೆ ಬಿಟ್ಟಿದ್ದು ಎಂದು ಹೇಳಿದರು.
ದತ್ತ ಅವರ ಬಗ್ಗೆ ನಾನು ಮಾತಾಡಲ್ಲ
ಇನ್ನು ಜೆಡಿಎಸ್ ಹಿರಿಯ ನಾಯಕ ವೈ.ಎಸ್‌ವಿ ದತ್ತ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ದತ್ತ ಅವರ ಬಗ್ಗೆ ನಾನು ಮಾತಾಡಲ್ಲ. ದತ್ತಾ ಅವರನ್ನು ಒಮ್ಮೆ ಎಂಎಲ್ಸಿ ಮಾಡಿ ಆಗಿದೆ. ಚಿಕ್ಕಮಗಳೂರಿ ನಮ್ಮಮಾಜಿ ಶಾಸಕ ದಿವಂಗತ ಲಕ್ಷ್ಮಣ ಅವರ ಮಗನನ್ನ ಬಿಟ್ಟು ಅವರಿಗೆ ಅವಕಾಶ ನೀಡಲಾಗಿತ್ತು. ಅವರು ಕಾಂಗ್ರೆಸ್ಗೆ ಹೋಗೋದಾದ್ರೆ ಹೋಗಲಿ. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹರೈಸುತ್ತೇನೆ. ಜೆಡಿಎಸ್ನಿಂದ ಕಾಂಗ್ರೆಸ್ ಅಥವಾ ಬಿಜೆಪಿಗೆ ಹೋಗುವವರಿಗೆ ಶುಭ ಹಾರೈಸುತ್ತೇನೆ. ಭಗವಂತ ಒಳ್ಳೆಯದು ಮಾಡಿ ಅವರ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಎಂದು ಹೇಳಿದರು.
ಇದನ್ನೂ ಓದಿ: ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಕಾರ್ಯಕರ್ತರ ಪಟ್ಟು: ಶಿವಲಿಂಗೇಗೌಡಗೆ ಜ.15 ಡೆಡ್ಲೈನ್
ಯೋಗೇಶ್ವರ್ ವಿರುದ್ಧ ರೇವಣ್ಣ ಲೇವಡಿ
ಜೆಡಿಎಸ್ ನಾಯಕರ ಬಗ್ಗೆ ಬಿಜೆಪಿ ನಾಯಕ ಯೋಗೇಶ್ವರ್ ಮಾತನಾಡಿದ್ದಾರೆನ್ನಲಾದ ಆಡಿಯೊ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅವರು ದೊಡ್ಡವರು ಅವರ ಮಾತಾಡಲ್ಲ, ಚಾಲೆಂಜ್ ತಗೊಂಡು ಮಾಡೋಕೆ ಹೇಳಿ ಎಂದು ಲೇವಡಿ ಮಾಡಿದರು. ಯಾರು ಸೋಲ್ತಾರೆ ಗೆಲ್ತಾರೆ ಎಂದು ಜನ ತೀರ್ಮಾನ ಮಾಡ್ತಾರೆ. ಕೋಲಾರದಲ್ಲಿ ಹಲವು ಬಾರಿ ಗೆದ್ದ ಒಬ್ಬ ದಲಿತ ನಾಯಕನ ಸೋಲಿಸಿದ್ರು. ಯಾರ ಜೊತೆ ಸೇರಿಸಿದ್ರು ಹೇಳಿ ಸ್ವಾಮಿ. ಮಂಡ್ಯದಲ್ಲಿ ಏನಾಯ್ತು, ತುಮಕೂರಲ್ಲಿ ಏನಾಯ್ತು ಎಂದು ಪ್ರಶ್ನಿಸಿದರು. ನಮ್ಮದು ಒಳ ಒಪ್ಪಂದ ಅಂತಾರೆ ಆದರೆ ಈ ರಾಜ್ಯದಲ್ಲಿ ಒಳ ಒಪ್ಪಂದ ಇರೋದು ಕಾಂಗ್ರೆಸ್, ಬಿಜೆಪಿ ನಡುವೆ ಎಂದು ರೇವಣ್ಣ ಗುಡುಗಿದರು.
ಇದನ್ನೂ ಓದಿ: ಜೆಡಿಎಸ್ನ ಮತ್ತೊಂದು ವಿಕೆಟ್ ಪತನ ಬಹುತೇಕ ನಿಶ್ಚಿತ, ಹಾಲಿ ಶಾಸಕ ಕಾಂಗ್ರೆಸ್ ಸೇರ್ಪಡೆ ಸುಳಿವು ಕೊಟ್ಟ ಧ್ರುವನಾರಾಯಣ
ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಟಾಂಗ್
ರಾಜ್ಯದಲ್ಲಿ JDS ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅನ್ನೋದನ್ನು ಈ ರೀತಿ ಹೇಳಿರಬೇಕು. ಸಿದ್ದರಾಮಯ್ಯ ಎಲ್ಲಾ ಭಾಗ್ಯ ಕೊಟ್ಟರೂ 120ರಿಂದ 80ಕ್ಕೆ ಕುಸಿದಿದ್ದೇಕೆ? 2018ರ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನಕ್ಕೆ ಕುಸಿದಿದ್ದು ಯಾಕೆ? JDS ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂದ್ರೆ ನಮ್ಮವರನ್ಯಾಕೆ ಕರೆದುಕೊಳ್ತೀರಿ ಎಂದು ಪ್ರಶ್ನಿಸಿದರು.
2 ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗಿಲ್ಲ. ಕೆಲವರು ನಮ್ಮ ಬಸ್ ಹತ್ತಿ ಎಂದು ಕರೆಯುತ್ತಿದ್ದಾರೆ. ಅಲ್ಲದೇ ಕೆಲವರು ಬಸ್ ಹತ್ತುವುದಕ್ಕೂ ಕೂಡ ಚಾರ್ಜ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Sat, 14 January 23