ಕರ್ನಾಟಕದ ದಲಿತ ನಾಯಕರು, ರೈತರ ತೆಲಂಗಾಣ ಯಾತ್ರೆ ಶೀಘ್ರ: ಬಿಆರ್​ಎಸ್ ಮೈತ್ರಿ ಬಗ್ಗೆ ಎಚ್​ಡಿಕೆ ಕೊಟ್ಟ ವಿವರಗಳಿವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 06, 2022 | 2:54 PM

ಕರ್ನಾಟಕದಿಂದ ಪ್ರತಿ ಜಿಲ್ಲೆಯಿಂದಲೂ 500 ಪ್ರಗತಿಪರ ರೈತರು, ದಲಿತ ಸಂಘಟನೆ ಕಾರ್ಯಕರ್ತರನ್ನು ತೆಲಂಗಾಣಕ್ಕೆ ಕಳುಹಿಸಿ ಅಲ್ಲಿನ ಸರ್ಕಾರದ ಯೋಜನೆಗಳನ್ನು ಪರಿಚಯಿಸಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಕರ್ನಾಟಕದ ದಲಿತ ನಾಯಕರು, ರೈತರ ತೆಲಂಗಾಣ ಯಾತ್ರೆ ಶೀಘ್ರ: ಬಿಆರ್​ಎಸ್ ಮೈತ್ರಿ ಬಗ್ಗೆ ಎಚ್​ಡಿಕೆ ಕೊಟ್ಟ ವಿವರಗಳಿವು
ಹೈದರಾಬಾದ್​ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಗೆ (CM Basavaraj Bommai) ಮೆಚ್ಯೂರಿಟಿ ಇಲ್ಲ. ಕಲಾವಿದರ ಕೋಟಾದಲ್ಲಿ ಆಯ್ಕೆಯಾದವರಿಗೆ ₹ 50 ಕೋಟಿ ಅನುದಾನ ಕೊಟ್ಟ ಉದಾಹರಣೆ ಎಲ್ಲಾದರೂ ಇದೆಯೇ? ಯಾವ ಉದ್ದೇಶಕ್ಕೆ ಅನುದಾನ ಕೊಟ್ಟಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಲಿ. ಜಿಲ್ಲಾ ಸಚಿವರು ರಾತ್ರೋರಾತ್ರಿ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಅಲ್ಲಿನ ಎಸ್​ಪಿ ಏನು ಮಾಡುತ್ತಿದ್ದರು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (CP Yogeshwar) ಅವರ ಕಾರಿನ ಮೇಲೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದರು. ‘ನಾವೆಲ್ಲರೂ ಮೆಚ್ಯುರ್ಡ್​ ಆಗಿದ್ದೇವೆ’ ಎಂಬ ಸಿಎಂ ಹೇಳಿಕೆಯನ್ನು ಖಂಡಿಸಿದರು. ‘ನನ್ನ ಮೆಚ್ಯೂರಿಟಿ ಬಗ್ಗೆ ಮಾತಾಡ್ತೀರಾ? ನೀವು ಅಪ್ರಬುದ್ಧರು. ನಾನು ಇದನ್ನು ಇಲ್ಲಿಗೇ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್​ ವಿರುದ್ಧವೂ ಕುಮಾರಸ್ವಾಮಿ ಆಕ್ರೋಶ ತೋಡಿಕೊಂಡರು. ಅವರು ಭಾರತ್ ಜೋಡೋ ಯಾತ್ರೆಯನ್ನು ಏಕೆ ಮಾಡುತ್ತಿದ್ದಾರೆಂದು ಜನರಿಗೆ ಗೊತ್ತಿಲ್ಲ. ಬಿಜೆಪಿಯವರು ಜನಸ್ಪಂದನ ಮಾಡಿ ತೊಡೆತಟ್ಟುವ ಕೆಲಸ ಮಾಡಿದರು. ಅದು ಬಿಟ್ಟರೆ ಇವರಿಂದ ಜನರಿಗೆ ಯಾವ ಸಹಾಯವಾಗಿದೆ? ನಾವು ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿದ್ದೇವೆ. ನ​ 1ರ ಒಳಗೆ ಪಂಚರತ್ನ ಯೋಜನೆಗೆ ಚಾಲನೆ ನೀಡುತ್ತೇವೆ. ಪಂಚರತ್ನ ಯೋಜನೆ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ನಾಯಕರು ಸಿದ್ಧತೆ ಆರಂಭಿದ್ದಾರೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಹೇಳಿದ್ದಾರೆ. ಚುನಾವಣಾ ಹೊತ್ತಿನಲ್ಲಿ ತಾಯಿಯ ಆಶೀರ್ವಾದ ಸಿಕ್ಕಿದೆ. ಜನತಾ ಮಿತ್ರ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅ 8ರಂದು ಹಮ್ಮಿಕೊಂಡಿದ್ದೇವೆ. ಈ ಸಮಾರಂಭದ ಮೂಲಕ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸುತ್ತೇವೆ ಎಂದರು.

ತೆಲಂಗಾಣದ ಮುಖ್ಯಮಂತ್ರಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್)​ ಎನ್ನುವ ಪಕ್ಷದ ಹೆಸರನನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್) ಎಂದು ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದ್ದಾರೆ. ರೈತ ಬಂಧು, ದಲಿತ ಬಂಧು ಎನ್ನುವ ಕಾರ್ಯಕ್ರಮಗಳ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡಿದರು. ಅಲ್ಲಿ ರೈತರಿಗೆ ಉಚಿತವಾಗಿ 24 ಗಂಟೆ ವಿದ್ಯುತ್ ಕೊಡುತ್ತಿದ್ದಾರೆ. ಮುಂಗಾರು-ಹಿಂಗಾರು ಸಮಯದಲ್ಲಿ ರೈತರ ಖಾತೆಗಳಿಗೆ ₹ 10 ಸಾವಿರ ಹಣ ಹಾಕುವ ಯೋಜನೆ ರೂಪಿಸಿದ್ದಾರೆ. ಕುಟುಂಬದ ಆಧಾರವಾಗಿದ್ದ ರೈತರು ಮೃತಪಟ್ಟರೆ ಆ ಕುಟುಂಬಕ್ಕೆ ವಿಮಾ ಯೋಜನೆಯಡಿ ₹ 5 ಲಕ್ಷ ಕೊಡುತ್ತಾರೆ. ನಮ್ಮಲ್ಲಿ ರೈತ ವಿಮೆ ಕಟ್ಟಿರುವ ಹಣವನ್ನೆ ದುರ್ಬಳಕೆ‌ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ರೈತನೊಬ್ಬ ಸಾಲಗಾರನಾಗದಿರಲು ಎಂಥ ಕಾರ್ಯಕ್ರಮ ರೂಪಿಸಬೇಕು? ಪಂಚರತ್ನ ಯೋಜನೆಯ ವಿಚಾರವನ್ನು ಅವರೊಟ್ಟಿಗೆ ಚರ್ಚೆ ಮಾಡಿದ್ದೇನೆ. ಕೆಸಿಆರ್ ಸಹ ಅನೇಕ ಸಲಹೆಗಳನ್ನು ನೀಡಿದ್ದಾರೆ. ಕರ್ನಾಟಕದಿಂದ ಪ್ರತಿ ಜಿಲ್ಲೆಯ ಪ್ರಗತಿಪರ ರೈತರು, ದಲಿತ ಸಂಘಟನೆಯವರನ್ನು ತೆಲಂಗಾಣಕ್ಕೆ ಕಳುಹಿಸಿ ಅವರ ಯೋಜನೆಯ ಪರಿಶೀಲನೆ ಮಾಡುವಂತೆ ಸಲಹೆ ನೀಡಿದ್ದಾರೆ. ಕರ್ನಾಟಕದಲ್ಲೂ ಆ ಯೋಜನೆಗಳ ಅನುಷ್ಠಾನದಿಂದ‌ ಸಹಾಯವಾಗಲಿದೆ ಎಂದು ನಮ್ಮ ಶಾಸಕರಿಗೆ ಸಲಹೆ ನೀಡಿದ್ದಾರೆ. ಪ್ರತಿ ಜಿಲ್ಲೆಯಿಂದ 500 ಜನರನ್ನು ತೆಲಂಗಾಣಕ್ಕೆ ಕಳುಹಿಸಿಕೊಡಿ. ಅವರಿಗೆ ಇಲ್ಲಿ ಅಗತ್ಯ ವ್ಯವಸ್ಥೆ ಮಾಡುವುದಾಗಿ ಕೂಡ ಕೆಸಿಆರ್ ತಿಳಿಸಿದ್ದಾರೆ. ಇದು ಯಾವುದೇ ಪಕ್ಷದ ವಿರುದ್ದ ಹೋರಾಟವಲ್ಲ. ರೈತರಲ್ಲಿ ಆರ್ಥಿಕ ಶಕ್ತಿ ತುಂಬಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

‘ನೀವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಯಾವ ರೀತಿ ಕೆಲಸ ಮಾಡಿದ್ದೀರಿ ಎಂದು ಗಮನಿಸಿದ್ದೇನೆ. ಕರ್ನಾಟಕದಲ್ಲಿ‌ ನಿನ್ನಂಥವರು ಮೇಲೆ ಬರಬೇಕೆಂಬ ಆಸೆ ಇದೆ ಎಂದು ಕೆಸಿಆರ್ ಹೇಳಿದ್ದಾಗಿ ಕುಮಾರಸ್ವಾಮಿ ನೆನಪಿಸಿಕೊಂಡರು. ರೈತ ಮತ್ತು ದಲಿತ ಹೋರಾಟಕ್ಕೆ ಒಂದಾಗಬೇಕೆಂಬ ಕಾರಣಕ್ಕೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ದೇಶದಲ್ಲಿ ಪರ್ಯಾಯ ಶಕ್ತಿ ಬೆಳೆಸಬೇಕೆಂದು ಅಲ್ಲ. ದಲಿತರ ಹೆಸರಿನಲ್ಲಿ ಯಾವ ರೀತಿ ಅನ್ಯಾಯವಾಗಿದೆ ಎಂದು ತಿಳಿಯುವ ಕೆಲಸವಾಗಬೇಕೆಂದು ಚರ್ಚೆ ಮಾಡಿದ್ದೇವೆ’ ಎಂದರು.