ಕಲಬುರಗಿ: ರಾಜ್ಯ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರತಿಯೊಂದು ರಾಜಕೀಯ ಪಕ್ಷಗಳು ಜಾತಿಗಳ ಓಲೈಕೆಗೆ ಮುಂದಾಗಿವೆ. ಇದೀಗ ಬಿಜೆಪಿ ನಾಯಕರು, ಓಬಿಸಿ ಸಮಾಜದ ಮೇಲೆ ಕಣ್ಣು ಹಾಕಿದ್ದು, ಓಬಿಸಿ ಓಟ್ ಬ್ಯಾಂಕ್ ಪಡೆಯಲು ಕಸರತ್ತು ಆರಂಭಿಸಿದ್ದಾರ್ಎ. ಜೊತೆಗೆ ಹಿಂದುಳಿದ ವರ್ಗದ ನಾಯಕರೆನಿಸಿಕೊಂಡಿರುವ ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಿಜೆಪಿ ಹಾಕಿಕೊಂಡ ಯೋಜನೆಯಂತೆ ನಾಳೆ (ಅ.30) ಕಲಬುರಗಿಯಲ್ಲಿ ಓಬಿಸಿ ಸಮಾವೇಶ ನಡೆಯಲಿದ್ದು, ಬೃಹತ್ ವೇದಿಕೆ ನಿರ್ಮಾಣ ಆಗುತ್ತಿದ್ದು, ಉಳಿದ ಕೆಸಲ ಕಾರ್ಯಗಳು ಕೂಡ ಭರದಿಂದ ಸಾಗುತ್ತಿದೆ.
ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಹಿಂದುಳಿದ ಜಾತಿಯ ಮತಗಳು ತಮ್ಮತ್ತ ಬರುವಂತೆ ಮಾಡುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಸಮಾವೇಶವನ್ನು ಆಯೋಜಿಸುತ್ತಿದೆ. ಕಲಬುರಗಿ ನಗರದ ಹೊರವಲಯದಲ್ಲಿ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶವನ್ನು ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಅನೇಕ ಸಚಿವರು, ಬಿಜೆಪಿ ಮುಖಂಡರು ಸಮಾವೇಶದಲ್ಲಿ ಬಾಗಿಯಾಗಲಿದ್ದಾರೆ.
ಸುಮಾರು ಐದು ಲಕ್ಷ ಜನರನ್ನು ಸೇರಿಸಿ ಬೃಹತ್ ಹಿಂದುಳಿದ ವರ್ಗಗಳ ಸಮಾವೇಶವನ್ನು ಮಾಡಲು ಬಿಜೆಪಿ ನಾಯಕರು ಎಲ್ಲಾ ರೀತಿಯ ಸಿದ್ದತೆ ನಡೆಸಿದ್ದಾರೆ. ಅದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳು ಭರದಿಂದ ಸಾಗಿವೆ. ಜೊತೆಗೆ ರಾಜ್ಯ ಹಿಂದುಳಿದ ವರ್ಗಗಳಲ್ಲಿ ಬರುವ ಇನ್ನೂರು ಜಾತಿಯ ಪ್ರಮುಖ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದ ಮೂಲಕ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ, ಹಿಂದುಳಿದ ವರ್ಗಗಳ ಪರವಾಗಿ ಇದೆ ಎನ್ನುವುದರನ್ನು ಸಾರಲಿದೆ. ಹಿಂದುಳಿದ ವರ್ಗಗಳಿಗೆ ಸರ್ಕಾರ ಮಾಡಿರುವ ಕೆಲಸಗಳ ಪಟ್ಟಿಯನ್ನು ತೋರಿಸುವ ಕೆಲಸವನ್ನು ನಾಯಕರು ಮಾಡಲು ಮುಂದಾಗಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಹೆಚ್ಚಿನ ಜನರು ಇದೀಗ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಹಿಂದುಳಿದ ವರ್ಗಗಳ ಜನರನ್ನು ಓಲೈಸುವ ಮೂಲಕ ಸಿದ್ದರಾಮಯ್ಯಗೆ ಟಕ್ಕರ್ ನೀಡುವ ಉದ್ದೇಶವನ್ನು ಕೂಡ ಬಿಜೆಪಿ ನಾಯಕರು ಹೊಂದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಈ ಸಮಾವೇಶಕ್ಕೆ ಆಗಮಿಸಲಿದ್ದು, ಬೇಕಾದ ವ್ಯವಸ್ಥೆಯನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಜಾತಿಗಳ ಓಲೈಕೆಗಾಗಿ ಮೂರು ಪಕ್ಷಗಳು ಹತ್ತಾರು ರೀತಿಯ ಕಸರತ್ತು ಆರಂಭಿಸಿವೆ. ಆದರೆ ಯಾವ ಜಾತಿಯ ಜನರು, ಯಾರಿಗೆ ಜೈ ಅಂತಾರೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ವರದಿ: ಸಂಜಯ್, ಟಿವಿ9 ಕಲಬುರಗಿ
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 am, Sat, 29 October 22