AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಸ್​ಪೆಕ್ಟರ್ ನಂದೀಶ್‌ ಸಾವು ಪ್ರಕರಣ: ಸಾವಿನಲ್ಲೂ ಸರ್ಕಾರ ಸತ್ಯ ಹೇಳುವ ಧೈರ್ಯ ಮಾಡಿದೆ ಎಂದ ಕುಮಾರಸ್ವಾಮಿ

ರಾಜ್ಯದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ ಎನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಂತೆ ಆಗಿದೆ. ಪೋಸ್ಟಿಂಗ್ ಗೆ 70-80 ಲಕ್ಷ ರೂ. ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ?

ಇನ್ಸ್​ಪೆಕ್ಟರ್ ನಂದೀಶ್‌ ಸಾವು ಪ್ರಕರಣ: ಸಾವಿನಲ್ಲೂ ಸರ್ಕಾರ ಸತ್ಯ ಹೇಳುವ ಧೈರ್ಯ ಮಾಡಿದೆ ಎಂದ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
TV9 Web
| Updated By: ವಿವೇಕ ಬಿರಾದಾರ|

Updated on:Oct 28, 2022 | 5:56 PM

Share

ಬೆಂಗಳೂರು: ಅಮಾನತುಗೊಂಡಿದ್ದ ಕೆ.ಆರ್​​.ಪುರ ಇನ್ಸ್​ಪೆಕ್ಟರ್ ನಂದೀಶ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumarswamy) ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಕುರಿತು ಸರಣಿ ಟ್ವೀಟ್​ ಮಾಡಿದ ಅವರು “ಅಮಾನತು ಶಿಕ್ಷೆಗೆ ಗುರಿಯಾಗಿ ಧಾರುಣ ಸಾವಿಗೆ ತುತ್ತಾದ ಕೆ.ಆರ್.ಪುರ ಠಾಣೆ ಇನ್ಸಪೆಕ್ಟರ್ ನಂದೀಶ್ ಅವರ ಹೃದಯಾಘಾತಕ್ಕೆ ಕಾರಣವೇನು? ಎಂದು ಇಡೀ ರಾಜ್ಯ ಪ್ರಶ್ನೆ ಮಾಡುತ್ತಿದೆ. ಈಗ ಸರಕಾರವೇ ಸತ್ಯ ಹೇಳಿದೆ! ಸದ್ಯ, ಸರಕಾರವು ಸಾವಿನಲ್ಲೂ ಸತ್ಯ ಹೇಳುವ ಧೈರ್ಯ ಮಾಡಿದೆ!! ಶ್ರೀ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರೇ ವಿಷಯ ಬಹಿರಂಗ ಪಡಿಸಿದ್ದಾರೆ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ ಎನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಂತೆ ಆಗಿದೆ. ಪೋಸ್ಟಿಂಗ್ ಗೆ 70-80 ಲಕ್ಷ ರೂ. ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ?ಎಂದು ಹೇಳಿರುವ ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆಯು ಈ ಸರಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿಯಾಗಿದೆ. ಎಂಟಿಬಿ ನಾಗರಾಜ್ ಅವರು ಹೇಳಿದ್ದು ನಿಜ ಎನ್ನುವುದಕ್ಕೆ ನಾನು ಟ್ಯಾಗ್ ಮಾಡಿರುವ ವಿಡಿಯೋ ತುಣುಕೇ ಸಾಕ್ಷಿ ಎಂದು ವಿಡಯೋ ಟ್ಯಾಗ್​ ಮಾಡಿದ್ದಾರೆ.

ನನ್ನ ಪ್ರಶ್ನೆ ಇಷ್ಟೇ, ಈ ಬಗ್ಗೆ ಸಿಎಂ ಏನು ಹೇಳುತ್ತಾರೆ? ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ದರೇ, ತಾಕತ್ತಿದ್ದರೇ ಎನ್ನುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು. ಸಚಿವ ಎಂಟಿಬಿ ನಾಗರಾಜ್ ಅವರು ಹೇಳಿದ್ದು ಸತ್ಯವಾ ಅಥವಾ ಸುಳ್ಳಾ ಎನ್ನುವುದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಬೇಕು. ಸತ್ಯವೇ ಆಗಿದ್ದರೆ, ಇಡೀ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಲೇ ಬೇಕು. ಸುಳ್ಳು ಎನ್ನುವುದಾದರೆ ಹೇಳಿಕೆ ಕೊಟ್ಟ ಸಚಿವರ ಕಥೆ ಏನು? ದಯವಿಟ್ಟು ಮಾತನಾಡಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕಸ್ಥೈರ್ಯ ಕುಗ್ಗಿಸಿದೆ. ಬಿಜೆಪಿ ಹೈಕಮಾಂಡ್ ಏಜೆಂಟ್​​ರಂತೆ ವರ್ತಿಸುತ್ತಿರುವ ಉತ್ತರ ಭಾರತದ ಕೆಲ ಹಿರಿಯ ಹಿಂದಿ ಪೊಲೀಸ್ ಅಧಿಕಾರಿಗಳು, ಕನ್ನಡ ಅಧಿಕಾರಿಗಳನ್ನು ಗುಲಾಮರಂತೆ ನೋಡುತ್ತಿದ್ದಾರೆ. ನಮ್ಮ ಕಿರಿಯ ಮಟ್ಟದ ಅಧಿಕಾರಿಗಳು ಅವರಿಗೆ ಊಳಿಗ ಮಾಡುವಂಥ ಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ಸಾವಿನ ಮನೆಗೆ ಸಾಂತ್ವನ ಹೇಳಲು ಹೋದ ಸಚಿವರೇ, ಸತ್ತ ಜೀವದ ಬಗ್ಗೆ ಎಗ್ಗಿಲ್ಲದೇ ನಿರ್ಲಜ್ಜವಾಗಿ ಮಾತನಾಡಿದ್ದು ಸರಿಯೋ ತಪ್ಪೋ, ಆ ತರ್ಕ ಬೇಡ. ಆದರೆ, ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕಿದೆ. ಸಂಘ ಸಂಸ್ಕಾರದ ಸರಕಾರಕ್ಕೆ ಸತ್ಯ ಹೇಳದೇ ದಾರಿ ಇಲ್ಲ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:56 pm, Fri, 28 October 22