ವರ್ಗಾವಣೆಯಲ್ಲಿ ವ್ಯಾಪಾರದ ಆರೋಪ ಹಾಸ್ಯಾಸ್ಪದ, ಅವರ ಕಾಲದಲ್ಲೂ ನಡೆದಿತ್ತೇ; ಸಿಎಂ ಸಿದ್ದರಾಮಯ್ಯ ಪ್ರಶ್ನೆ
ದೇವರಾಜ ಅರಸು ಬಿಟ್ಟರೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ನನಗೇ. ಸುದೀರ್ಘ ರಾಜಕಾರಣದಲ್ಲಿ ಕಳಂಕವೂ ಇಲ್ಲ, ಹಗರಣವೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ವರ್ಗಾವಣೆಯಲ್ಲಿ ವ್ಯಾಪಾರ, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದಾರೆ. ವರ್ಗಾವಣೆ ದಂಧೆ ಆರೋಪಕ್ಕೆ, ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲೆ ಮಾತನಾಡಿದ ಅವರು ತಿರುಗೇಟು ನೀಡಿದರು. ಅವರ ಕಾಲದಲ್ಲೂ (ಹೆಚ್ಡಿ ಕುಮಾರಸ್ವಾಮಿ) ವರ್ಗಾವಣೆ ಆಗಿದೆ, ಆಗಲೂ ದಂಧೆ ನಡೆದಿತ್ತಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
1983ರಲ್ಲಿ ನಾನು ಶಾಸಕನಾದೆ, 1984ರಲ್ಲಿ ನಾನು ಮಂತ್ರಿ ಆದೆ. ಆಮೇಲೆ ಡಿಸಿಎಂ, ವಿರೋಧ ಪಕ್ಷದ ನಾಯಕ, ಸಿಎಂ ಆಗಿದ್ದೇನೆ. ಇದೇ ಮೊದಲಲ್ಲ ನಾನು ಸಿಎಂ ಆಗಿರೋದು, 2ನೇ ಬಾರಿ ಸಿಎಂ ಆಗಿದ್ದೇನೆ. ದೇವರಾಜ ಅರಸು ಬಿಟ್ಟರೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ನನಗೇ. ಸುದೀರ್ಘ ರಾಜಕಾರಣದಲ್ಲಿ ಕಳಂಕವೂ ಇಲ್ಲ, ಹಗರಣವೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮೊದಲ ದಿನವೇ ಕ್ಯಾಬಿನೆಟ್ನಲ್ಲಿ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಬಾರದೆಂದು ತಿಳಿಸಿದ್ದೇನೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆಗಬಾರದೆಂದು ಸಚಿವರಿಗೆ ಹೇಳಿದ್ದೇನೆ. ಎಲ್ಲ ಇಲಾಖೆಗಳ ಸಚಿವ ಸ್ಥಾನಗಳನ್ನು ಭರ್ತಿ ಮಾಡಿಕೊಂಡಿದ್ದೇನೆ. ಯಾವ ಖಾತೆಗಳೂ ಬಾಕಿ ಉಳಿಸಿಕೊಂಡಿಲ್ಲ, ಎಲ್ಲ ಖಾತೆ ಹಂಚಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಈವರೆಗೆ ಅಂತಹ ಆರೋಪಗಳು ಇಲ್ಲ. ಯಾರಾದರೂ ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿಯಾಗುವೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು.
ರೇವಣ್ಣನ ಬಗ್ಗೆ ನನಗೆ ವಿಶೇಷ ಪ್ರೀತಿ; ಸಿದ್ದರಾಮಯ್ಯ
ಶಾಸಕ ಹೆಚ್ಡಿ ರೇವಣ್ಣ ನನಗೆ ಒಳ್ಳೆಯ ಸ್ನೇಹಿತ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ, ಕುಮಾರಣ್ಣ ಏನು ಎಂದು ಕೆಲವು ಸದಸ್ಯರು ಪ್ರಶ್ನಿಸಿದರು. ಇದೇ ವೇಳೆ, ಸಿದ್ದರಾಮಯ್ಯ, ರೇವಣ್ಣನವರದ್ದು ವಿಶೇಷ ಪ್ರೀತಿ ಎಂದು ಬಿಜೆಪಿಯ ಆರ್ ಅಶೋಕ ಹೇಳಿದರು. ಸಿದ್ದರಾಮಯ್ಯ ವಿರುದ್ಧ ಶಾಸಕ ಹೆಚ್ಡಿ ರೇವಣ್ಣ ಪ್ರಚಾರಕ್ಕೆ ಬರಲಿಲ್ಲ. ಸಿದ್ದರಾಮಯ್ಯ ವಿರುದ್ಧ ಪ್ರಚಾರಕ್ಕೆ ಮನೆಯಿಂದ ಹೊರಗೇ ಬರಲಿಲ್ಲ ಎಂದು ಅವರು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೊಳೆನರಸೀಪುರ ಕಡೆ ಸಿದ್ದರಾಮಯ್ಯ ಹೋಗಲೇ ಇಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಜಿಟಿ ದೇವೇಗೌಡ, ಅವರಿಬ್ಬರದ್ದು 35 ವರ್ಷಗಳ ಸ್ನೇಹ ಎಂದರು. ಅಷ್ಟರಲ್ಲಿ ಮಾತು ಮುಂದುವರಿಸಿದ ಸಿದ್ದರಾಮಯ್ಯ, ನೀವೆಲ್ಲರೂ ಹೇಳಿದ್ದು ಸತ್ಯ, ರೇವಣ್ಣ ಮೇಲೆ ವಿಶೇಷವಾದ ಪ್ರೀತಿ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ