ಸ್ಪೀಕರ್ ಖಾದರ್ ನಡೆ ಪ್ರಜಾಪ್ರಭುತ್ವದ ದುರಂತ: ಕೋಟ ಶ್ರೀನಿವಾಸ್ ಪೂಜಾರಿ

ಕಾಗದ ಪತ್ರಗಳನ್ನು ಹರಿದು ಉಪ ಸಭಾಪತಿ​ಗೆ ಎಸೆದ ಘಟನೆ ಸಂಬಂಧ ಬಿಜೆಪಿ ಸದಸ್ಯರನ್ನು ಸನದಿಂದ ಅಮಾನತು ಮಾಡಲಾಗಿತ್ತು. ಇದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ, ಸ್ಪೀಕರ್ ನಡೆ ಪ್ರಜಾಪ್ರಭುತ್ವದ ದುರಂತ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಸ್ಪೀಕರ್ ಖಾದರ್ ನಡೆ ಪ್ರಜಾಪ್ರಭುತ್ವದ ದುರಂತ: ಕೋಟ ಶ್ರೀನಿವಾಸ್ ಪೂಜಾರಿ
ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಯುಟಿ ಖಾದರ್
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: Rakesh Nayak Manchi

Updated on:Jul 22, 2023 | 8:41 PM

ಉಡುಪಿ, ಜುಲೈ 22: ಸ್ಪೀಕರ್ ಯುಟಿ ಖಾದರ್ (UT Khader) ಅವರ ಬೇಜವಾಬ್ದಾರಿಯಿಂದ ಸದನ ನಿರ್ವಹಣೆ ವೈಫಲ್ಯವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojary) ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿ ಸದನದ ಬಾಗಿಲಿಗೆ ಒದ್ದಿದ್ದರು. ಡಿಕೆ ಶಿವಕುಮಾರ್ ಪುಸ್ತಕ ಹರಿದು ಬಿಸಾಡಿದ್ದರು. ಕಾಂಗ್ರೆಸ್​ನವರು ಸ್ಪೀಕರ್ ಮೈಕ್ ಕಿತ್ತು ಬಿಸಾಡಿದ್ದರು ಎಂದು ಆರೋಪಿಸಿದ್ದಾರೆ.

ಘಟನೆ ವೇಳೆ ಸ್ಪೀಕರ್ ಖಾದರ್ ಅವರು ಸಭೆಯನ್ನು ಮುಂದೂಡಿ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕರ ಜೊತೆ ಮಾತನಾಡಬೇಕಿತ್ತು. ನಡೆದದ್ದು ಮರೆಯೋಣ ಎಂದು ಸದನವನ್ನು ಮುಂದುವರಿಸಬಹುದಿತ್ತು. ಆದರೆ ಅಮಾನತು ಮಾಡಿರುವ ಸ್ಪೀಕರ್ ಖಾದರ್ ನಡೆ ಪ್ರಜಾಪ್ರಭುತ್ವದ ದುರಂತ ಎಂದು ಹೇಳಿದರು.

ನನಗೆ ಸಿಎಂ ಮಾಡುವುದೂ ಗೊತ್ತು, ಕೆಳಗಿಳಿಸುವುದೂ ಗೊತ್ತು ಎಂದು ಹೇಳುವ ಮೂಲಕ ಸ್ವಪಕ್ಷದ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ್, ಸಿದ್ದರಾಮಯ್ಯ ಅವರಂತೆ ಬಿಕೆ ಹರಿಪ್ರಸಾದ್ ಮೇಲ್ಮನೆಯ ವಿಪಕ್ಷನಾಯಕರಾಗಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರು ಕೂಡ ಶ್ರಮಿಸಿದ್ದಾರೆ. ವೈಚಾರಿಕವಾಗಿ ನನಗೂ ಅವರಿಗೂ ಬಹಳ ಅಭಿಪ್ರಾಯ ಭೇದವಿದೆ, ನಾವು ಜಗಳ ಚರ್ಚೆ ಸಂಘರ್ಷ ಮಾಡಿದ್ದೇವೆ. ಹರಿಪ್ರಸಾದ್ ಮಾತು ನೋವು ಚಟುವಟಿಕೆ, ಆಳುವ ಸರ್ಕಾರಕ್ಕೆ ಅಪಾಯಕಾರಿ ಎಂದರು.

ಇದನ್ನೂ ಓದಿ: ಸ್ವೀಕರ್​ ಯುಟಿ ಖಾದರ್​ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾದ ಬಿಜೆಪಿ, ಜೆಡಿಎಸ್​

ಹಾಲಿನ ದರ ಏರಿಕೆ; ಬಡ ಗ್ರಾಹಕರ ಗತಿ ಏನು?

ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಹಾಲಿನ ದರ ಏರಿಸಿದರೆ ಸಾಲದು ಸಬ್ಸಿಡಿ ಕೊಡಿ. ದರ ಏರಿಕೆಯಿಂದ ಸಾಮಾನ್ಯ ಬಡ ಗ್ರಾಹಕರ ಗತಿ ಏನು? ಅರ್ಧ ಲೀಟರ್ ಹಾಲು ಕುಡಿಯಲು ಕಷ್ಟದ ಪರಿಸ್ಥಿತಿ ಬರಬಹುದು. ಅಲ್ಲದೆ, ಸಬ್ಸಿಡಿ ಕೊಟ್ಟು ಹಾಲಿನ ದರ ಏರಿಸಿದರೆ ಯಾರದ್ದೂ ಅಕ್ಷೇಪವಿಲ್ಲ ಎಂದರು.

ಭಜರಂಗದಳ ಕಾರ್ಯಕರ್ತರನ್ನು ಗಡಿಪಾರಿಗೆ ಖಂಡನೆ

ಬಜರಂಗದಳ ಕಾರ್ಯಕರ್ತರ ಗಡಿಪಾರು ವಿಚಾರವಾಗಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಕುಕ್ಕರ್​ನಲ್ಲಿ ಬಾಂಬ್ ಇಟ್ಟವರ ಮೇಲೆ ಕಾಂಗ್ರೆಸ್ಸಿಗೆ ಸಹಾನುಭೂತಿ ಇದೆ. ಬೆಂಗಳೂರಿನಲ್ಲಿ ಗ್ರಾನೈಟ್ ಇಟ್ಟುಕೊಂಡವರನ್ನು ಉಗ್ರಗಾಮಿಗಳು ಎನ್ನಲು ಗೃಹಸಚಿವರು ಹಿಂದೇಟು ಹಾಕುತ್ತಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದಕರ ಸಂಪರ್ಕ ಇದ್ದರೂ ಅವರನ್ನು ಉಗ್ರಗಾಮಿ ಎಂದು ಕರೆಯಲು ಗೃಹಮಂತ್ರಿ ಸಿದ್ದರಿಲ್ಲ. ಭಾರತ ಮಾತೆಗೆ ಜೈ ಅನ್ನುವ ಭಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಬಜರಂಗದಳ ಕಾರ್ಯಕರ್ತರು ಸಮಾಜ ವಿರೋಧಿ ಕೃತ್ಯ ಮಾಡಿದ್ದಾರೆಯೇ? ಬಜರಂಗದಳದವರು ಕುಕ್ಕರ್​ನಲ್ಲಿ ಬಾಂಬ್ ಸ್ಪೋಟ ಮಾಡಿದ್ದಾರಾ? ಅಂತಾರಾಷ್ಟ್ರೀಯ ಲಿಂಕ್ ಜೊತೆ ಗ್ರಾನೈಟ್ ಇಟ್ಟುಕೊಂಡಿದ್ದಾರಾ? ಇದಕ್ಕೆ ಮಂಗಳೂರು ಪೊಲೀಸ್ ಆಯುಕ್ತರು ಉತ್ತರ ಕೊಡಬೇಕು ಎಂದು ಹೇಳಿದ ಮಾಜಿ ಸಚಿವರು, ಬಜರಂಗದಳ ದೇಶ ಮೊದಲು ಎಂಬ ವಿಚಾರಕ್ಕೆ ಒತ್ತು ಕೊಡುವ ಸಂಘಟನೆ. ಅದೇ ವಿಚಾರ ಇಟ್ಟುಕೊಂಡಿರುವ ಕರಾವಳಿ ಜಿಲ್ಲೆಯ ಶಾಸಕರನ್ನೂ ಗಡಿಪಾರು ಮಾಡುವ ಮಾ‌ನಸಿಕ ಸ್ಥಿತಿ ಇರಬಹುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sat, 22 July 23