ಸರ್ಕಾರಕ್ಕೆ ಖುಷಿಯಾಗುವ ವಿಷಯ ಮಾತಾಡಿ ಮಾರಾಯಾ: ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ಗೆ ಸ್ಪೀಕರ್ ಖಾದರ್ ಸೂಚನೆ
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ವಿಧಾನಸಭೆ ಅಧಿಕವೇಶದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿವರಣೆ ನೀಡಿದರು. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ವಿಧಾನಸಭೆ: ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುವ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನೂ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ (Vedavyas Kamath) ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಆಡಳಿತ ಪಕ್ಷಕ್ಕೆ ಖುಷಿಯಾಗುವ ವಿಷಯ ಮಾತಾಡಿ ಮಾರಾಯ, ಬೇಸರ ಆಗುವ ವಿಚಾರ ಮಾತನಾಡಬೇಡಿ ಎಂದು ಸ್ಪೀಕರ್ ಯುಟಿ ಖಾದರ್ (UT Khader), ವೇದವ್ಯಾಸ್ ಕಾಮತ್ ಅವರಿಗೆ ಸೂಚಿಸಿದರು. ಈ ವೇಳೆ ಎಲ್ಲಾ ಸದಸ್ಯರು ನಗೆಯಲ್ಲಿ ತೇಲಾಡಿದರು.
ವೇದವ್ಯಾಸ್ ಕಾಮತ್ ಅವರು ಬಜೆಟ್ ಮೇಲಿನ ಚರ್ಚೆ ವೇಳೆ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ಧಿ ಕೆಲಸಗಳ ಪಟ್ಟಿ ಹೇಳುತ್ತಾ ಹೋದರು. ಈ ವೇಳೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇದಕ್ಕೆ ಪ್ರತಿಯಾಗಿ ವಿಪಕ್ಷ ಬಿಜೆಪಿಯೂ ಕಾಂಗ್ರೆಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಯಿತು. ಸದನದಲ್ಲಿ ಗದ್ದಲ ಉಂಟಾಗುತ್ತಿದ್ದಂತೆ ಬೇಗ ಚರ್ಚೆ ಮುಗಿಸಿ ಎಂದು ವೇದವ್ಯಾಸ ಕಾಮತ್ಗೆ ಸ್ಪೀಕರ್ ಸೂಚಿಸಿದರು.
ಈ ವೇಳೆ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಹೆಚ್ಚು ಸಮಯ ಕೊಟ್ಟಿದ್ದೀರಿ, ನನಗೂ ಕೊಡಿ ಎಂದು ಕಾಮತ್ ಹೇಳಿದರು. ಇದಕ್ಕೆ ಸ್ಪೀಕರ್, ನಾರಾಯಣಸ್ವಾಮಿ ಮೂರನೇ ಬಾರಿಗೆ ಶಾಸಕರಾಗಿದ್ದಾರೆ, ನೀವು ಎರಡನೇ ಬಾರಿಗೆ ಶಾಸಕರಾಗಿದ್ದೀರಿ ಎಂದು ಹೇಳುವ ಮೂಲಕ ಹಿತಿತನವನ್ನು ತಿಳಿಸಿದರು. ಇದಕ್ಕೆ ಕಾಮತ್, 2028ಕ್ಕೂ ನಾನೇ ಗೆದ್ದು ಬರುತ್ತೇನೆ ಎಂದು ಟಾಂಗ್ ನೀಡಿ ಚರ್ಚೆ ಮುಂದುವರಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಂಕಿ ಅಂಶಗಳನ್ನು ವೇದವ್ಯಾಸ್ ಕಾಮತ್ ಹೇಳಲು ಮುಂದಾದಾಗ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕದಿಂದ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗುತ್ತದೆ, ಆ ಹಣವನ್ನು ಸಂಪೂರ್ಣವಾಗಿ ಕರ್ನಾಟಕಕ್ಕೇ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವ, ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ, ಬೆಂಗಳೂರಿನಲ್ಲಿ ಹೆಚ್ಚು ತೆರಿಗೆ ಪಾವತಿ ಆಗುತ್ತದೆ, ಹಾಗಾದರೆ ನೀವು ಬೆಂಗಳೂರಿನ ಹಣ ಬೆಂಗಳೂರಿಗೆ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಈ ವೇಳೆ ನರೇಂದ್ರಸ್ವಾಮಿ ಮತ್ತು ಅಶ್ವಥ್ ನಾರಾಯಣ ನಡುವೆ ತೀವ್ರ ಜಟಾಪಟಿ ನಡೆಯಿತು.
ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಗುತ್ತಿದ್ದಂತೆ ಶಾಸಕರಿಗೆ ಬುದ್ದಿ ಹೇಳಿದರು. ಅಲ್ಲದೆ, ಅವರಿಗೆ (ಆಡಳಿತ ಪಕ್ಷ ಕಾಂಗ್ರೆಸ್) ಖುಷಿ ಆಗುವ ವಿಷಯ ಹೇಳಿ ಮಾರಾಯಾ, ಬೇಸರ ಆಗುವ ವಿಷಯ ಹೇಳಬೇಡಿ ಎಂದು ವೇದವ್ಯಾಸ ಕಾಮತ್ಗೆ ಹೇಳಿದರು. ಇದಕ್ಕೆ, ಒಂದು ಪುಟಕ್ಕೆ ಹೀಗೆ ಆದರೆ ನನಗೆ ಇಲ್ಲಿ 38 ಪುಟ ಹೇಳಲು ಬಾಕಿ ಇದೆ ಎಂದು ಕಾಮತ್ ತಿಳಿಸಿದರು. ನಿಮ್ಮ 38 ಪೇಜ್ ಅವರು ಕೇಳಲು ನಾನು ಬ್ಯಾಂಕ್ವೆಟ್ ಹಾಲ್ನಲ್ಲಿ ಮೀಟಿಂಗ್ ಇಟ್ಟುಕೊಳ್ಳುತ್ತೇನೆ ಎಂದು ಸ್ಪೀಕರ್ ಟಾಂಗ್ ಕೊಟ್ಟರು.
ಮುಂದುವರಿದು ಮಾತನಾಡಿದ ಕಾಮತ್, ಅಂಕಿ ಅಂಶ ಸುಳ್ಳು ಎಂದು ಹೇಳಿದ ವಿಪಕ್ಷಗಳಿಗೆ ಸವಾಲು ಹಾಕಿದರು. ನಾನು ಸವಾಲು ಸ್ವೀಕರಿಸುತ್ತೇನೇ, ಅಂಕಿ ಅಂಶ ಸುಳ್ಳು ಆದರೆ ನೀವು ಆಕ್ಷನ್ ತೆಗೆದುಕೊಳ್ಳಿ ಎಂದರು. ಈ ವೇಳೆ ಸಿಟ್ಟಿಗೆದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗೌಡ ಅವರನ್ನು ಕುಳಿತುಕೊಳ್ಳುವಂತೆ ಹಲವು ಬಾರಿ ಹೇಳಿ ಸ್ಪೀಕರ್ ಸುಸ್ತಾದರು.
ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಜಟಾಪಟಿ ನಡುವೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳುತ್ತಲೇ ಹೋದ ಶಾಸಕ ವೇದವ್ಯಾಸ ಕಾಮತ್ಗೆ ಬೇಗ ಮುಗಿಸುವಂತೆ ಸ್ಪೀಕರ್ ಸೂಚಿಸಿದರು. ಅವರು ಇನ್ನೂ ಮೊದಲ ಪೇಜ್ನಲ್ಲಿ ಇದ್ದಾರೆ ಎಂದು ವಿಪಕ್ಷ ಶಾಸಕರೊಬ್ಬರು ಹೇಳಿದಾಗ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದ್ದ ಮಾಜಿ ಸಚಿವರೊಬ್ಬರು ಮೊದಲ ಪುಟಕೂ ಎಂದು ಕುಳಿತಲ್ಲೇ ಹಾಡು ಹೇಳಿದರು.
ಆಡಳಿತ ಪಕ್ಷದ ಪ್ರಶ್ನೆಗೆ ಭರ್ಜರಿ ಟಾಂಗ್ ಕೊಟ್ಟ ಹೆಚ್ಡಿ ರೇವಣ್ಣ
ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡದಂತೆ ಆಡಳಿತ ಪಕ್ಷದಿಂದ ಆಕ್ಷೇಪ ವ್ಯಕ್ತವಾದಾಗ, ಸದನದಲ್ಲಿ ಇಲ್ಲದವರ ಬಗ್ಗೆಯೂ ಮಾತನಾಡಬಹುದು, ಬೇಕಾದರೆ ಕಡತ ತೆಗೆಸಿ ನೋಡಿ, ಹಿಂದೆಯೂ ಮಾತನಾಡಿದ್ದಾರೆ ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಹೇಳಿದರು. ನೀವು ಬಿಜೆಪಿಯೊಂದಿಗೆ ವಿಲೀನ ಆಗಿದ್ದೀರಾ ಎಂದು ಮಾಲೂರು ಶಾಸಕ ನಂಜೇಗೌಡ ಪ್ರಶ್ನಿಸಿದರು.
ನಾವು ವಿಲೀನ ಆಗಿಲ್ಲ, ನಾವು ಯಾಕೆ ವಿಲೀನ ಆಗೋಣ? ಹಿಂದೆ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೈಲಿಗೆ ಹೋಗಿದ್ದು ಗೊತ್ತಿಲ್ವಾ ಎಂದು ಹೇಳಿದರು. ಈ ವೇಳೆ ನಿಮ್ಮ ಬೆಂಬಲ ಯಾರಿಗೆ ಎಂದು ಸ್ಪಷ್ಟಪಡಿಸಿ ಎಂದು ಆಡಳಿತ ಪಕ್ಷದ ಶಾಸಕರು ಕೇಳಿದಾಗ, ವಿಷಯ ಮುಂದುವರಿಸದಂತೆ ಸ್ಪೀಕರ್ ಅವರು ವೇದವ್ಯಾಸ್ ಕಾಮತ್ ಅವರಿಗೆ ಸೂಚಿಸಿ ರೇವಣ್ಣ ಮತ್ತು ಆಡಳಿತ ಪಕ್ಷದ ಸದಸ್ಯರನ್ನು ಕುಳಿತುಕೊಳ್ಳಿಸಿದರು.
ಮಾತು ಮುಂದುವರಿಸಿದ ಕಾಮತ್ ಅವರು ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ, ಸಾವರ್ಕರ್ ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ನೀವು ಸುಳ್ಳು ಹೇಳಬೇಡಿ ಎಂದು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹೇಳಿದರು. ಕೊನೆಗೆ ವೇದವ್ಯಾಸ ಕಾಮತ್ ಚರ್ಚೆ ಮುಗಿಸದಿದ್ದಾಗ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ಗೆ ಚರ್ಚೆ ಮುಂದುವರಿಸುವಂತೆ ಸ್ಪೀಕರ್ ಸೂಚಿಸಿದರು.
ಈ ವೇಳೆ ಬಸವರಾಜ ದದ್ದಲ್ ಮತ್ತು ವೇದವ್ಯಾಸ ಕಾಮತ್ ಅವರು ಏಕಕಾಲದಲ್ಲಿ ಚರ್ಚೆಯಲ್ಲಿ ತೊಡಗಿದರು. ಹೀಗಾಗಿ ಕಾಮತ್ ಮೇಲೆ ಸಿಟ್ಟಾದ ಸ್ಪೀಕರ್, ನೀವು ಇಷ್ಟು ಸ್ವಾರ್ಥಿ ಆದರೆ ಹೇಗೆ, ಬೇರೆಯವರೂ ಮಾತಾಡುವುದು ಬೇಡವೇ ಎಂದರು. ನಂತರ ವೇದವ್ಯಾಸ ಕಾಮತ್ ಚರ್ಚೆ ಮುಗಿಸಿದರು. ಬಳಿಕ ಚರ್ಚೆ ಆರಂಭಿಸಿದ ಶಾಸಕ ಬಸವರಾಜ ದದ್ದಲ್, ನೀವು ಕರಾವಳಿಯವರು ಅಂತಾ ಪ್ರೀತಿಯಿಂದ ಅವರಿಗೆ ಜಾಸ್ತಿ ಸಮಯ ಕೊಟ್ಟಿದ್ದೀರಿ ಎಂದು ಲಘು ಆಕ್ಷೇಪ ವ್ಯಕ್ತಪಡಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ