ಬೆಂಗಳೂರು, (ನವೆಂಬರ್ 12): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನವೆಂಬರ್ 15ರಂದು ಅಧಿಕೃತವಾಗಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬಳಿಕ ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶನಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ, ಇದೀಗ ಅದು ಬದಲಾಗಿದ್ದು, ನ.16ರಂದು ಅರಮನೆ ಮೈದಾನದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನ.15ರಂದು ವಿಜಯೇಂದ್ರ ಅವರ ಪದಗ್ರಹಣ ಮಾತ್ರ ನಿಗದಿಯಾಗಿದೆ. ಆದ್ರೆ, ಅರಮನೆ ಮೈದಾನದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದ್ದು, ನವೆಂಬರ್ 23ರ ನಂತರ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಆಹ್ವಾನಿಸಿ ದೊಡ್ಡ ಸಮಾವೇಶ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ. ಈಗ ಸಮಾವೇಶ ಮಾಡಿದರೆ ಕೇಂದ್ರದ ನಾಯಕರು ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈಗ ಸಮಾವೇಶ ಮಾಡದರೆ ಕೇಂದ್ರದ ನಾಯಕರು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ನೆ.16ರ ಸಮಾವೇಶನ್ನು ಮುಂದೂಡಲಾಗಿದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್, ತಂದೆ ಮಾರ್ಗ ಅನುಸರಿಸಿದ ವಿಜಯೇಂದ್ರ
ಈ ಬಗ್ಗೆ ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದ್ದು, ನವೆಂಬರ್ 23ರ ನಂತರ ನ.30ರೊಳಗೆ ದೊಡ್ಡ ಸಾರ್ವಜನಿಕ ಸಭೆ ನಡೆಸುತ್ತೇವೆ. ನ.23ಕ್ಕೆ ತೆಲಂಗಾಣ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಚುನಾವಣೆ ಮುಗಿಯುತ್ತೆ. ಹೀಗಾಗಿ ವರಿಷ್ಠರಾದ ಅಮಿತ್ ಶಾ ಅಥವಾ ಜೆ.ಪಿ.ನಡ್ಡಾಗೆ ಆಹ್ವಾನ ನೀಡುತ್ತೇವೆ. ನ.15ರಂದು ಬಿಜೆಪಿ ಕಚೇರಿಯಲ್ಲಿ ವಿಜಯೇಂದ್ರ ಅಧಿಕಾರ ಸ್ವೀಕರಿಸುತ್ತಾರೆ ಎಂದು ಮಾಹಿತಿ ನೀಡಿದರು.
ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿನ ಬಿಜೆಪಿ ಮಲ್ಲೇಶ್ವರಂ ಕಚೇರಿಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ನ.14ರ ರಾತ್ರಿಯಿಂದಲೇ ಜಗನ್ನಾಥ ಭವನದಲ್ಲಿ ಹೋಮ ಮತ್ತು ಪೂಜಾ ಕಾರ್ಯಗಳು ಆರಂಭವಾಗಲಿವೆ. ಹೀಗಾಗಿ ಕಚೇರಿಗೆ ಬಣ್ಣ ಬಳಿಯುವ ಕಾರ್ಯ ನಡೆದಿದೆ.
ನಳಿನ್ ಕುಮಾರ್ ಕಟೀಲ್ ಅವರು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಪಕ್ಷದ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಇನ್ನು ಈ ಪದಗ್ರಹ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಇತರ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ