ಅಕ್ಕಿ ಪಾಲಿಟಿಕ್ಸ್: ಕಾಂಗ್ರೆಸ್ ಸರ್ಕಾರದ ಆರೋಪಕ್ಕೆ ಬಿಜೆಪಿ ಕೌಂಟರ್, ಮನೆ ಮನೆ ಅಭಿಯಾನಕ್ಕೆ ಸೂಚನೆ
ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆರೋಪಕ್ಕೆ ಕೌಂಟರ್ ಕೊಡಲು ರಾಜ್ಯ ಬಿಜೆಪಿ ಘಟಕ ಮನೆ ಮನೆ ಅಭಿಯಾನ ಆರಂಭಿಸಿದೆ.
ಬೆಂಗಳೂರು: ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಮತ್ತು ವಿಪಕ್ಷ ಬಿಜೆಪಿ (BJP) ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಆರೋಪ ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಾಯಕರು ನಿರತರಾಗಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೌಂಟರ್ ನೀಡಲು ಮುಂದಾದ ಬಿಜೆಪಿ, ಮನೆ ಮನೆ ಅಭಿಯಾನ ಆರಂಭಿಸಿದೆ.
ರಾಜ್ಯ ಸರ್ಕಾರದ ಆರೋಪಕ್ಕೆ ಒಂದು ವಾರದ ಕ್ಯಾಂಪೇನ್ ಕೈಗತ್ತಿಕೊಂಡ ಬಿಜೆಪಿ, ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿರುವ ವಿಚಾರವನ್ನು ಮನೆ ಮನೆಗೆ ತಲುಪಿಸುವಂತೆ ಸೂಚಿಸಿದೆ. ಐದು ಕೆಜಿ ಅಕ್ಕಿ ನೀಡುತ್ತಿರುವ ಕುರಿತು ಕರ ಪತ್ರ ಹಂಚಲು ಸೂಚಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಐದು ಕೆಜಿ ಕೇಂದ್ರ ಸರ್ಕಾರ ಕೊಡುತ್ತಿರುವುದು ಎಂದು ಜನರಿಗೆ ಮನವರಿಕೆ ಮಾಡಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: CM in distress: ಅಕ್ಕಿ ಜೊತೆ ಜೋಳ ಮತ್ತು ರಾಗಿಯ ದಾಸ್ತಾನು ಕೂಡ ಇಲ್ಲವೆಂದು ಹತಾಷೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿ ಅಲ್ಲದೆ, ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಘೋಷಣೆಯಂತೆ ಪ್ರತ್ಯೇಕ 10 ಕೆಜಿ ಅಕ್ಕಿ ನೀಡಬೇಕಿದೆ ಎಂಬುದನ್ನು ಫಲಾನುಭವಿಗಳ ಗಮನಕ್ಕೆ ತರುವುದು ಬಿಜೆಪಿಯ ಉದ್ದೇಶವಾಗಿದೆ. ಅದರಂತೆ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ಅನ್ನಭಾಗ್ಯ ಫಲಾನುಭವಿಗಳನ್ನು ಗುರುತಿಸಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಿದ್ದಾರೆ.
ಅಕ್ಕಿ ವಿಚಾರದ ಬಗ್ಗೆ ಸಿದ್ದರಾಮಯ್ಯ ಅವರನ್ನು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡ ಬಿಜೆಪಿ, ಸ್ವಯಂಘೋಷಿತ ಸತ್ಯಹರಿಶ್ಚಂದ್ರ ಸಿದ್ದರಾಮಯ್ಯರವರೇ, ಒಂದೇ ಸುಳ್ಳನ್ನು ಪದೇ ಪದೆ ಹೇಳಿದರೆ ಅದು ಸತ್ಯವಾಗುತ್ತದೆ ಎನ್ನುವ ಭ್ರಮೆಯಿಂದ ಮೊದಲು ಹೊರ ಬನ್ನಿ. ಕೇಂದ್ರ ಸರ್ಕಾರ 5 ಕೆಜಿ ಕೊಡುತ್ತಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿರುವ ನೀವು, ಈಗ ಮೋದಿಯವರ ಚೀಲದ ಮೇಲೆ ನಿಮ್ಮ ಚೀಟಿಯನ್ನು ಏಕೆ ಅಂಟಿಸುತ್ತಿದ್ದೀರಿ? 10 ಕೆಜಿ ಬೇಕೋ ಬೇಡವೋ ಎಂದು ಪುಂಗಿ ಊದಿ ಇದೀಗ ಅಕ್ಕಿ ಸಿಕ್ಕಿದ ಕೊಡಲೇ ಕೊಡುತ್ತೇವೆ ಎಂದು ಕಂಡೀಷನ್ ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ