ಬೆಂಗಳೂರು: ಇನ್ನುಮುಂದೆ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಬಾರದು. ಸಿಎಂ ಯಡಿಯೂರಪ್ಪರ ಬೆಂಬಲವಾಗಿ ವರಿಷ್ಠರ ಬಳಿ ತೆರಳಲೂ ಹಲವು ಶಾಸಕರು ಸಿದ್ಧರಿದ್ದಾರೆ. ಉಳಿದ ಅವಧಿಗೂ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರಿಯಬೇಕು. ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹೇಳಲೇಬೇಕು. ಹೀಗಾಗಿ ನಮಗೆ ಹೈಕಮಾಂಡ್‌ನಿಂದ ಸ್ಪಷ್ಟ ನಿಲುವು ಬರಬೇಕು ಎಂಬ ನಿಲುವನ್ನು ಕಂದಾಯ ಸಚಿವ ಆರ್.ಅಶೋಕ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಳೆದಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ ನಂತರ ಕಂದಾಯ ಸಚಿವ ಆರ್.ಅಶೋಕ್ , ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಮೇಲೆ ಬಿಜೆಪಿ ಹೈಕಮಾಂಡ್‌ಗೆ ಸಂಪೂರ್ಣ ವಿಶ್ವಾಸವಿದೆ. ಸಿಎಂ ಯಡಿಯೂರಪ್ಪರನ್ನು ನಂಬಿಯೇ ಬೇರೆ ಪಕ್ಷದಿಂದ ಬಿಜೆಪಿಗೆ 17 ಶಾಸಕರು ಬಂದಿದ್ದರು. ಅವರಿಗೂ ಸಿಎಂ ಯಡಿಯೂರಪ್ಪರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಜನಪರ ಹೋರಾಟದಿಂದ ಬಂದವರು. ಜನರ ಕಷ್ಟಗಳಿಗೆ ಹೋರಾಟ ಮಾಡಿದವರು. ಅಧಿಕಾರ ಸಿಕ್ಕಾಗ ಹೋರಾಟವನ್ನು ಮುಂದುವರೆಸಿಕೊಂಡು ಅಭಿವೃದ್ಧಿ ಕೆಲಸ ಮಾಡಿದರು. ಬಹುಮತ ಇರುವುದು ಇವತ್ತಿಗೂ ಯಡಿಯೂರಪ್ಪ ಅವರ ಹೆಸರಲ್ಲಿ. ಯಡಿಯೂರಪ್ಪ ಹೆಸರು ಕೇಳಿ ಜನ ಅತಿ ಹೆಚ್ಚು ಮತಗಳನ್ನ ನೀಡಿದ್ದಾರೆ. ಬಹುಮತ ಇಲ್ಲದಾಗಲೂ ಸರ್ಕಾರ ರಚನೆ ಮಾಡಿದವರು ಯಡಿಯೂರಪ್ಪ. ಈಗ ಸಿಎಂ ಯಡಿಯೂರಪ್ಪರ ನಾಯಕತ್ವದಲ್ಲಿ ಅಪಸ್ವರ ಎತ್ತಿದವರ ಪಾತ್ರ ಸರ್ಕಾರ ರಚನೆಯಲ್ಲಿ ಏನಿದೆ? ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ನೈಸರ್ಗಿಕ ಆಪತ್ತು ಎದುರಿಸಿಕೊಂಡು ಬಂದಿದ್ದಾರೆ. ಒಂದು ದಿನವೂ ಕೂಡ ಅವರು ವಿಶ್ರಮಿಸಿಲ್ಲ. ಕೊವಿಡ್ ಕಾಲದಲ್ಲಿ ದಿನಕ್ಕೆ ಐದಾರು ಮೀಟಿಂಗ್ ಮಾಡಿದ್ದಾರೆ. ಇಂಥ ನಾಯಕರ ಬಗ್ಗೆ ಹಗುರವಾಗಿ ಮಾತನಾಡೋದು ಅವರ ಮನಸ್ಸಿಗೆ ನೋವು ತಂದಿರಬಹುದು ಎಂದು ಗೃಹ ಸಚಿವ ಬಸವರಜ್ ಬೊಮ್ಮಾಯಿ ಹೇಳಿದರು.
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯ ಪ್ರಹಸನ ಒಂದು ಘಟ್ಟಕ್ಕೆ ತಲುಪಿದ್ದು, ಸಿಎಂ ಯಡಿಯೂರಪ್ಪ ಅವರೇ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ. ಪಕ್ಷದಲ್ಲಿ ಪರ್ಯಾಯ ನಾಯಕರಿದ್ದಾರೆ ಎಂದು ಮಾಧ್ಯಮಗಳ ಎದುರು ಹೇಳಿದ್ದರು. ಈ ಹೇಳಿಕೆಯ ನಂತರ ಚರ್ಚೆ ನಡೆಸಿದ ಇಬ್ಬರು ಸಚಿವರು ಮಹತ್ವದ ನಿಲುವು ತಳೆದಿದ್ದಾರೆ. ಇನ್ನುಂದೆ ಬಿಜೆಪಿಯ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬ ಕಿರಿಕಿರಿ ಎದುರಾಗಬಾರದು. ಹೈಕಮಾಂಡ್ನಿಂದಲೇ ಈ ಸೂಚನೆ ಹೊರಡಿಸಬೇಕು ಎಂಬ ನಿರ್ಣಯಕ್ಕೆ ಬಂದಿರುವುದಂತೂ ಸ್ಪಷ್ಟ.
ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ: ಬಿ.ಎಸ್.ಯಡಿಯೂರಪ್ಪ
(Karnataka BJP govt CM BS Yediyurappa Leadership change debate should be end some ministers decide)
Published On - 4:49 pm, Sun, 6 June 21