ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಸಹಿ ಪಡೆಯುತ್ತಿರುವ ರೇಣುಕಾಚಾರ್ಯ, ಆದ್ರೆ ಸಹಿ ಅಭಿಯಾನವೇ ಇಲ್ಲ ಎಂದ ಪ್ರಲ್ಹಾದ ಜೋಶಿ

ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಸಹಿ ಪಡೆಯುತ್ತಿರುವ ರೇಣುಕಾಚಾರ್ಯ, ಆದ್ರೆ ಸಹಿ ಅಭಿಯಾನವೇ ಇಲ್ಲ ಎಂದ ಪ್ರಲ್ಹಾದ ಜೋಶಿ
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು ಎಂದು ಬಿಜೆಪಿ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಶಾಸಕರ ಸಹಿ ಪಡೆಯುತ್ತಿದ್ದಾರೆ. ನಾನು ನನ್ನ ಆತ್ಮಸಾಕ್ಷಿಯಾಗಿ ಎದೆ ಮುಟ್ಟಿಕೊಂಡು ಹೇಳುತ್ತೇನೆ ನನ್ನ ಬಳಿ 65ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ ಪತ್ರವಿದೆ. ಕೊರೊನಾ ಮುಗಿದ ಬಳಿಕ ಹೈಕಮಾಂಡ್‌ಗೆ ಪತ್ರ ತಲುಪಿಸ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

TV9kannada Web Team

| Edited By: Ayesha Banu

Jun 07, 2021 | 1:50 PM

ಬೆಂಗಳೂರು: ನಮ್ಮ ಬಿಜೆಪಿ ಪಕ್ಷದ ಹೈಕಮಾಂಡ್ ಹೇಳಿದ ದಿನ ನಾನು ಮುಖ್ಯಮಂತ್ರಿ ಪಟ್ಟದಿಂದ ಇಳೀತೀನಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದಾಗಿನಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ. ಸದ್ಯ ಈಗ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು ಎಂದು ಬಿಜೆಪಿ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಶಾಸಕರ ಸಹಿ ಪಡೆಯುತ್ತಿದ್ದಾರೆ. ನಾನು ನನ್ನ ಆತ್ಮಸಾಕ್ಷಿಯಾಗಿ ಎದೆ ಮುಟ್ಟಿಕೊಂಡು ಹೇಳುತ್ತೇನೆ ನನ್ನ ಬಳಿ 65ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ ಪತ್ರವಿದೆ. ಕೊರೊನಾ ಮುಗಿದ ಬಳಿಕ ಹೈಕಮಾಂಡ್‌ಗೆ ಪತ್ರ ತಲುಪಿಸ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

ಸಿಎಂ ವಿರುದ್ಧ ಮಾತನಾಡಿರುವವರ ವಿರುದ್ಧವೂ ಕ್ರಮ ಆಗಬೇಕು. ಈ ಬಗ್ಗೆಯೂ ಪತ್ರದಲ್ಲಿ ಇದೆ ಎಂದು ಹೇಳಿದ್ದಾರೆ. ನಾನು ಸಿಎಂ ಯಡಿಯೂರಪ್ಪ ಹೇಳಿಕೆ ಸರಿಯಾಗಿ ಗಮನಿಸಿಲ್ಲ. ಕೊರೊನಾ ಸಂದರ್ಭದಲ್ಲಿ ಕೆಲವರು ದೆಹಲಿಗೆ ಹೋಗಿದ್ದಾರೆ. ಅವರು ದೆಹಲಿಗೆ ಹೋಗಿ ಏನೇನೋ ಮಾಡುವುದು ಸರಿಯಲ್ಲ. ಕೊರೊನಾವನ್ನು ಸಿಎಂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಯಾರೋ ಒಂದಿಬ್ಬರಿಂದ ಸಿಎಂ ವಿರುದ್ಧ ಅಪಪ್ರಚಾರ ನಡೆದಿದೆ ಎಂದರು.

ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ನಾವೆಲ್ಲಾ ಸಿಎಂ ಬಿ.ಎಸ್.ಯಡಿಯೂರಪ್ಪನವರ ಜೊತೆಗಿದ್ದೇವೆ. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕೆಲವರಿಗೆ ಪಕ್ಕದ ಕ್ಷೇತ್ರವನ್ನು ಗೆಲ್ಲಿಸುವಂತಹ ತಾಕತ್ತು ಇಲ್ಲ. ಆದರೂ ಅವರು ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚು ಹುಚ್ಚಾಗಿ ಮಾತಾಡ್ತಾರೆ. ಇದನ್ನು ಪ್ರತಿಪಕ್ಷಗಳು ಸದುಪಯೋಗ ಮಾಡಿಕೊಳ್ಳುತ್ತಿವೆ. ಚುನಾವಣೆಯಲ್ಲಿ ಸೋತವರು ಭಿಕ್ಷೆ ಬೇಡಿ ಮಂತ್ರಿಯಾಗಿದ್ದಾರೆ. ಅವರು ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡ್ತಿದ್ದಾರೆ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಗರಂ ಆಗಿದ್ದಾರೆ.

ಶಾಸಕರ ಸಹಿ ಸಂಗ್ರಹದ ಹಿಂದೆ ವಿಜಯೇಂದ್ರ ಇದ್ದಾರೆನ್ನುತ್ತಾರೆ. ವಿಜಯೇಂದ್ರ ಮಾತು ಕೇಳಿ ಮಾಡುವಂತಹದ್ದು ನನಗೆ ಏನಿದೆ? ನಾನು ಸ್ವಇಚ್ಛೆಯಿಂದ ಬಿಜೆಪಿ ಶಾಸಕರ ಸಹಿ ಸಂಗ್ರಹಿಸಿದ್ದೇನೆ. ಸಿಎಂ ವಿರುದ್ಧ ಮಾತಾಡುವವರಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಅಂತಹವರ ವಿರುದ್ಧ ಕ್ರಮ ಆಗಬೇಕು. ಜೊತೆಗೆ ಬಿಎಸ್‌ವೈನವರೇ ಸಿಎಂ ಸ್ಥಾನದಲ್ಲಿ ಮುಂದುವರೀಬೇಕು. ಹೀಗಂತ ಬಿಜೆಪಿ ಶಾಸಕರ ಸಹಿ ಸಂಗ್ರಹ ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರವನ್ನು ಶೀಘ್ರವೇ ಹೈಕಮಾಂಡ್‌ಗೆ ಕಳುಹಿಸುತ್ತೇವೆ ಎಂದು M.P.ರೇಣುಕಾಚಾರ್ಯ ತಿಳಿಸಿದ್ದಾರೆ.

ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ ಇನ್ನು ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ. ನಮ್ಮ ಆದ್ಯತೆ ಈಗ ಕೊವಿಡ್ ನಿಯಂತ್ರಣ. ಈಗ ಯಾವುದೇ ಸಿಎಂ ಮತ್ತು ನಾಯಕತ್ವ ಬದಲಾವಣೆ ಇಲ್ಲ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ಚರ್ಚೆಯೂ ಇಲ್ಲ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಅನ್ನೋದು ವದಂತಿ.

ನಾನು ನರೇಂದ್ರ ಮೋದಿಯಂಥ ಶ್ರೇಷ್ಠ ನಾಯಕರ ಅಡಿಯಲ್ಲಿ ಕೆಲಸ ಮಾಡುತ್ತಿರುವೆ. ಬಹಳ ಸಂತೋಷ ಮತ್ತು ಅಭಿಮಾನದಿಂದ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಯಡಿಯೂರಪ್ಪವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇದೆಲ್ಲವೂ ಊಹಾಪೋಹಗಳು ಮಾತ್ರ. ಸಿಎಂ ಹೇಳಿಕೆ ವಿಚಾರ ನಿನ್ನೆಯೇ ಮುಗಿದ ಅಧ್ಯಾಯ.ಪ್ರತಿ ವಾರದಂತೆ ಇವತ್ತು ನಾನು ದೆಹಲಿಗೆ ಹೊರಟಿರುವೆ. ನನ್ನ ಕೇಂದ್ರ ಸ್ಥಾನ ಇರೋ ಕಾರಣಕ್ಕೆ ದೆಹಲಿಗೆ ಹೊರಟಿರುವೆ. ಅವರನ್ನು ಬದಲಿಸುವ ವಿಚಾರ ಈಗ ಏನಿಲ್ಲ. ಯಾವುದೇ ರೀತಿಯ ಸಹಿ ಸಂಗ್ರಹದ ಅಗತ್ಯ ಇಲ್ಲ. ಯಾರೂ ಅದನ್ನು ಮಾಡಬಾರದು ಎಂದು ಹೇಳಿದ್ದಾರೆ.

ನಾವೆಲ್ಲಾ ಸಿಎಂ ಜೊತೆಗಿದ್ದೇವೆ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಸಿಎಂ ನಿವಾಸದ ಬಳಿ ಸಚಿವ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ. ನಾವೆಲ್ಲಾ ಸಿಎಂ ಜೊತೆಗಿದ್ದೇವೆ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬರ್ತಾರೆ. ಅರುಣ್ ಸಿಂಗ್ ಎಲ್ಲ ನಾಯಕರ ಜತೆ ಚರ್ಚೆ ಮಾಡುತ್ತಾರೆ.

ವರಿಷ್ಠರು ಸೂಚಿಸಿದರೆ ರಾಜೀನಾಮೆ ಕೊಡುವುದಾಗಿ ಹೇಳಿಕೆಯನ್ನು ಮನನೊಂದು ಸಿಎಂ BSY ಈ ರೀತಿಯಾಗಿ ಹೇಳಿರಬಹುದು. ಆದ್ರೆ ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದಿಲ್ಲ. ಹೈಕಮಾಂಡ್ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ ಹಾಗಾಗಿಯೇ ಹೈಕಮಾಂಡ್ ಮೌನವಾಗಿದೆ ಎಂದು ಹೇಳಿದ್ರು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ

Follow us on

Related Stories

Most Read Stories

Click on your DTH Provider to Add TV9 Kannada