ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ ವಿಧಿಸಿದ ಕೋರ್ಟ್, ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ

| Updated By: ರಮೇಶ್ ಬಿ. ಜವಳಗೇರಾ

Updated on: Dec 29, 2023 | 10:39 PM

ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟದಿದ್ದರೆ ಆರು ತಿಂಗಳು ಜೈಲು ಅನುಭವಿಸಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದಿದ್ದು, ಮಧು ಬಂಗಾರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ ವಿಧಿಸಿದ ಕೋರ್ಟ್, ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ
ಶಿಕ್ಷಣ ಸಚಿವ ಮಧು ಬಂಗಾರಪ್ಪ
Follow us on

ಬೆಂಗಳೂರು (ಡಿಸೆಂಬರ್ 29): ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu bangarappa) ಅವರ 2011ರ ಚೆಕ್‌ಬೌನ್ಸ್‌ ಪ್ರಕರಣಕ್ಕೆ(cheque bounce cases) ಸಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 6.96 ಕೋಟಿ ರೂ. ದಂಡವನ್ನು ವಿಧಿಸಿ ಆದೇಶಿಸಿದೆ. ಇನ್ನು ದಂಡ ಪಾವತಿ ಮಾಡದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸುವಂತೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ರಾಜೀನಾಮೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಸಚಿವರ ರಾಜೀನಾಮೆಗೆ ರವಿಕುಮಾರ್ ಆಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕೆಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಕೋರ್ಟ್ 6 ಕೋಟಿ 96 ಲಕ್ಷದ 70 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದರೆ 6 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ಇಂಥ ಹಿನ್ನೆಲೆಯಿರುವ ಸಚಿವರು ಶಿಕ್ಷಣ ಇಲಾಖೆಗೆ ಕಪ್ಪುಚುಕ್ಕಿ. ಅವರು ಈ ಇಲಾಖೆಯನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್: ಸಚಿವ ಮಧು ಬಂಗಾರಪ್ಪಗೆ ದಂಡ ವಿಧಿಸಿದ ಕೋರ್ಟ್, ಕಟ್ಟದಿದ್ದರೆ ಜೈಲು ಶಿಕ್ಷೆ

2011ರಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ. ಮಧು ಬಂಗಾರಪ್ಪರವರು ತಮ್ಮ ಆಕಾಶ್ ಆಡಿಯೋ ಸಂಸ್ಥೆಯಿಂದ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ 6 ಕೋಟಿ 96 ಲಕ್ಷದ 60 ಸಾವಿರ ರೂ. ಸಂದಾಯ ಮಾಡಬೇಕಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಪಾವತಿಸಲು ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು. ಈಗ ಒಟ್ಟು ಮೊತ್ತದಲ್ಲಿ 6 ಕೋಟಿ 96 ಲಕ್ಷದ 60 ಸಾವಿರ ರೂ.ಗಳನ್ನು ಫಿರ್ಯಾದುದಾರ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ ನೀಡಲು ಮತ್ತು 10 ಸಾವಿರವನ್ನು ಸರಕಾರಕ್ಕೆ ದಂಡದ ರೂಪದಲ್ಲಿ ಕಟ್ಟಲು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.

ಸದ್ಯಕ್ಕೆ 50 ಲಕ್ಷ ಪಾವತಿಸಿ ಉಳಿದ ಮೊತ್ತವನ್ನು ಜನವರಿ ಅಂತ್ಯದವೇಳೆಗೆ ಕೊಡುವುದಾಗಿ ಮಧು ಬಂಗಾರಪ್ಪ ಅವರು ಮುಚ್ಚಳಿಕೆ ಸಲ್ಲಿಸಿದ್ದರು. ಆದರೆ, ಹಿಂದಿನ ಮುಚ್ಚಳಿಕೆಯನ್ನು ಪಾಲಿಸದ ಕಾರಣ ಅವರ ಕೋರಿಕೆಯನ್ನು ನ್ಯಾಯಾಲಯ ಮನ್ನಿಸಿಲ್ಲ ಎಂಬ ಮಾಹಿತಿಯನ್ನು ರವಿಕುಮಾರ್ ಅವರು ತಿಳಿಸಿದ್ದಾರೆ.

ಚೆಕ್ ಬೌನ್ಸ್ ಮತ್ತು ಮುಚ್ಚಳಿಕೆ ಬರೆದುಕೊಟ್ಟರೂ ಅದನ್ನು ಪಾಲಿಸದ ಹಿನ್ನೆಲೆ ಇರುವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯುವಂತೆ ರವಿಕುಮಾರ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಕಳಂಕವಾಗುವಂತೆ ವರ್ತಿಸಿದ ಮಧು ಬಂಗಾರಪ್ಪ ಅವರು ಆ ಹುದ್ದೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂದೂ ತಿಳಿಸಿದ್ದಾರೆ.

ರಾಜೀನಾಮೆಗೆ ವಿಜಯೇಂದ್ರ ಒತ್ತಾಯ

ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷಾರ್ಹ ಅಪರಾಧಿ ಎಂದು ಸಾಬೀತಾಗಿದೆ. ಇದು ಸರ್ಕಾರದ ಘನತೆ ಅಷ್ಟೇ ಅಲ್ಲದೇ ಶಿಕ್ಷಣದ ಪಾವಿತ್ರ್ಯತೆಗೆ ತಗುಲಿದೆ ಕಪ್ಪು ಚುಕ್ಕೆಯಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜೀನಾಮೆ ನೀಡಿ ತಮ್ಮ ನೈತಿಕತೆ ಪ್ರದರ್ಶಿಸಲಿ, ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.

ಭಂಡತನ ಅಂಟಿಸಿಕೊಂಡಿರುವ ಈ ಸರ್ಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಶಿಕ್ಷಣ ಮೌಲ್ಯಕ್ಕೆ ಅಪಚಾರ ಎಸಗಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಇಲಾಖೆಯ ಗತಿಯೇನು ಎಂದ ಯತ್ನಾಳ್

ಇನ್ನು ಮಧು ಬಂಗಾರಪ್ಪ ವಿರುದ್ಧ ಎಕ್ಸ್​ ಮೂಲಕ ಬಿಜೆಪಿ ಶಾಸಕ ಯತ್ನಾಳ್ ಪ್ರತಿಕ್ರಿಯಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಾದ ಮಂತ್ರಿಗಳು. ಆದ್ರೆ, ಶಿಕ್ಷಣ ಸಚಿವರೇ ವಂಚಿಸಿ ತಪ್ಪಿತಸ್ಥರಾದರೆ ಇನ್ನು ಇಲಾಖೆಯ ಗತಿಯೇನು? ಬಲ್ಲ ಮೂಲಗಳ ಪ್ರಕಾರ ಕನ್ನಡ ಓದಲು, ಬರೆಯಲು ಸಹ ಕಷ್ಟ ಪಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ