ಬಾಂಬೆ ಫ್ರೆಂಡ್ಸ್‌ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ

| Updated By: ರಮೇಶ್ ಬಿ. ಜವಳಗೇರಾ

Updated on: Aug 27, 2023 | 10:49 AM

ಹೋಗಲ್ಲ ಹಾಗಲ್ಲ ಹೀಗಲ್ಲ ಎನ್ನುತ್ತಲೇ ಬಾಂಬೆ ಶಾಸಕರ ತವರು ಪಕ್ಷದ ಮೋಹ ಹೆಚ್ಚಾಗುತ್ತಿದೆ. ಸೋಮಶೇಖರ್ ಸಿಎಂ ಭೇಟಿ ಬಳಿಕ ಇದೀಗ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆಗೆ ನಾಂದಿ ಹಾಡಿದ್ದು ಯಲ್ಲಾಪುರದ ಶಾಸಕರು. ಬಾಂಬೆ ತಂಡದ ಖಾಯಂ ಸದಸ್ಯರಾಗಿದ್ದ ಶಿವರಾಮ್ ಹೆಬ್ಬಾರ್ ಕೂಡ ಈಗ ಎತ್ತ ಮುಖ ಮಾಡಿದ್ದಾರೆ ಎಂಬುದಕ್ಕೆ ಸಿಎಂ ಭೇಟಿ ಉತ್ತರ ಕೊಟ್ಟಿದೆ. ಇದರೊಂದಿಗೆ ಬಾಂಬೆ ಫ್ರೆಂಡ್ಸ್‌ ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ ಮೂಡಿವೆ.

ಬಾಂಬೆ ಫ್ರೆಂಡ್ಸ್‌ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ
ಬಿಜೆಪಿ-ಕಾಂಗ್ರೆಸ್​
Follow us on

ಬೆಂಗಳೂರು, (ಆಗಸ್ಟ್ 27): ಬಾಂಬೆ ಶಾಸಕರು ಮತ್ತೆ ತವರು ಮನೆಯ ಕದವನ್ನು ತಟ್ಟುತ್ತಿರುವ ಸುದ್ದಿ ಹಳೆಯದೇನೂ ಅಲ್ಲ. ಕಾಂಗ್ರೆಸ್​ನ(Congress) ಆಪರೇಷನ್ ಹಸ್ತದ ಚಟುವಟಿಕೆ ಗುಟ್ಟಾಗಿಯೂ ಉಳಿದಿಲ್ಲ. ಎಸ್.ಟಿ ಸೋಮಶೇಖರ್(ST Somashekhar) ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ(Siddaramaiah) ಭೇಟಿ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿ(BJP) ಬಿಟ್ಟು ವಾಪಸ್‌ ಕಾಂಗ್ರೆಸ್‌ಗೆ ತೆರಳುವ ಸುದ್ದಿಗೆ ಮತ್ತಷ್ಟು ಜೀವ ಬರುವಂತೆ ಮಾಡಿತ್ತು. ಇದೀಗ ಮತ್ತೊಬ್ಬ ಬಾಂಬೆ ಫ್ರೆಂಡ್ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಮತ್ತೆ ಸೋಮಶೇಖರ್ ಹಾದಿಯನ್ನೇ ತುಳಿದಿದ್ದಾರ. ಶಿವರಾಮ್ ಹೆಬ್ಬಾರ್ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೆಬ್ಬಾರ್ ಕೂಡ VO: ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬುದಕ್ಕೆ ಇದು ಬಲವಾದ ಪುಷ್ಟಿ ನೀಡಿದೆ. ಬಿಜೆಪಿಯ ಉಳಿದ ಶಾಸಕರಿಗೆ ಇಲ್ಲದ ಕ್ಷೇತ್ರದ ಕೆಲಸಗಳು ಬಾಂಬೆ ಫ್ರೆಂಡ್ಸ್ ಖ್ಯಾತಿಯ ಶಾಸಕರಿಗೆ ಮಾತ್ರ ಸಿಎಂ ಸಿದ್ದರಾಮಯ್ಯ ಬಳಿ ಹೆಚ್ಚಾಗಿ ನಡೆಯುತ್ತಿರುವುದು ಎಲ್ಲ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಮುಂಬರುವ ದಿನಗಳಲ್ಲಿ ಶಿವರಾಂ ಹೆಬ್ಬಾರ್ ಕೂಡ ಕಾಂಗ್ರೆಸ್ ಕಡೆ ಮುಖ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಅಡಿಪಾಯ ಹಾಕಿದಂತಿದೆ.

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಎಸ್‌ಟಿಎಸ್, ಡಿಕೆಎಸ್

ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಎಸ್‌ಟಿಎಸ್ ಅವರ ಆಪ್ತರು, ಅನೇಕ ಬೆಂಬಲಿಗರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ… ಯಾವಾಗ ಬೇಕಾದ್ರೂ ಎಸ್‌ಟಿ.ಸೋಮಶೇಖರ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಇದ್ರ ಬೆನ್ನಲ್ಲೇ ಎಸ್‌ಟಿ ಸೋಮಶೇಖರ್ ಕ್ಷೇತ್ರದ ಮೇಲೆ ಡಿಸಿಎಂ ಡಿಕೆಶಿವಕುಮಾರ್‌ಗೂ ಪ್ರೀತಿ ಹೆಚ್ಚಾಗಿದೆ. ನಿನ್ನೆ(ಆಗಸ್ಟ್ 26) ಯಶವಂತಪುರ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬಿಜೆಪಿ ನಾವಿಕನಿಲ್ಲದ ಹಡಗಾಗಿದೆ: ಸ್ವಪಕ್ಷೀಯರ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ

ಬಿಜೆಪಿಯಲ್ಲಿ ಬೂದಿಮುಚ್ಚಿದ ಕೆಂಡದಂಥ ಪರಿಸ್ಥಿತಿ ಇರುವುದು ನಿಜ

ಇನ್ನೊಂದೆಡೆ ಸ್ವಪಕ್ಷೀಯ ನಾಯಕರ ವಿರುದ್ಧ ಎಸ್.ಟಿ.ಸೋಮಶೇಖರ್ ಮತ್ತೆ ಬಹಿರಂಗವಾಗಿ ಟೀಕಿಸಿದ್ದಾರೆ. ಬಿಜೆಪಿಯಲ್ಲಿ ಬೂದಿಮುಚ್ಚಿದ ಕೆಂಡದಂಥ ಪರಿಸ್ಥಿತಿ ಇರುವುದು ನಿಜ ಎಂದು ಹೇಳಿರುವುದು ಅಚ್ಚರಿಕೆ ಕಾರಣವಾಗಿದೆ. ಇದೆ ವೇಳೆ ನನ್ನ ರಾಜಕೀಯ ಬೆಳವಣಿಗೆಗೆ ಡಿ.ಕೆ.ಶಿವಕುಮಾರ್ ಕಾರಣ ಅಂತಲೂ ಬಣ್ಣಿಸಿದ್ದಾರೆ.

ಇನ್ನು ಯಶವಂತಪುರದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಿಕೆಶಿ ಮಾತನಾಡಿ, ನನ್ನ, ಸೋಮಶೇಖರ್ ಸಂಬಂಧ ಇಂದಿನದ್ದಲ್ಲ, 35 ವರ್ಷ ಹಳೆಯದ್ದು. ನಾವು ಬಿತ್ತಿದ ಬೀಜ, ನಾವು ಗೊಬ್ಬರ ಹಾಕಿದ ಗಿಡ ಈಗ ಮರವಾಗಿದೆ.. ಹಣ್ಣನ್ನು ಬೇರೆಯವರು ಕಿತ್ತು ತಿನ್ನಬಾರದೆಂದು ಇಲ್ಲಿಗೆ ಅವರ ಜತೆ ಬಂದಿರುವೆ ಅಂತೇಳಿದ್ದಾರೆ.

ಎಸ್.ಟಿ ಸೋಮಶೇಖರ್ ಮನವಿ ಮೇರೆಗೆ ಡಿಸಿಎಂ ಡಿಕೆಶಿವಕುಮಾರ್ ಇಂದು ಕನಕಪುರ ರಸ್ತೆಯ ಯಶವಂತಪುರ ಕ್ಷೇತ್ರದ ರೆಸಿಡೆನ್ಶಿಯಲ್ ಅಸೋಸಿಯೇಷನ್‌ಗಳ ಅಹವಾಲು ಆಲಿಸಲಿದ್ದಾರೆ. ಈ ಮೂಲಕ ಸೋಮಶೇಖರ್ ಕೂಡ ಕಾಂಗ್ರೆಸ್ ಸೇರ್ಪಡೆಗೆ ಬೇಕಾದ ವೇದಿಕೆಯನ್ನು ಕನಕಪುರ ರಸ್ತೆಯಿಂದಲೇ ಗಟ್ಟಿ ಮಾಡಿಕೊಳ್ಳುವಂತೆ ಕಾಣುತ್ತಿದೆ.

ಸದ್ಯಕ್ಕೆ ಆಪರೇಷನ್ ಹಸ್ತದ ತಂತ್ರಗಾರಿಕೆಗೆ ಸೋಮಶೇಖರ್ ಹಾಗೂ ಹೆಬ್ಬಾರ್ ತಾವೇ ಒಳಗಾದಂತೆ ಕಾಣುತ್ತಿದೆ. ಬರುವವರೆಲ್ಲ ಬರಲಿ ಎಂಬ ಮಾತಿನ ಮೂಲಕ ಉಳಿದ ನಾಯಕರಿಗೆ ಸಿದ್ದರಾಮಯ್ಯ, ಡಿ.ಕೆಶಿವಕುಮಾರ್ ಜೋಡಿ ರೆಡ್ ಕಾರ್ಪೇಟ್ ಹಾಕುತ್ತಿರುವುದು ಸ್ಪಷ್ಟ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ