ಅತಿರೇಕ್ಕೇರಿದ ಬಿಜೆಪಿ ಬಣಬಡಿದಾಟ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಜಯೇಂದ್ರ

|

Updated on: Jan 19, 2025 | 6:17 PM

ಕರ್ನಾಟಕ ಬಿಜೆಪಿ ಮನೆಯಲ್ಲಿನ ಬಣ ಬಡಿದಾಟ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಶೀಘ್ರವೇ ರಾಜ್ಯಾಧ್ಯಕ್ಷ ಪಟ್ಟಕ್ಕೆ ಚುನಾವಣೆ ಸುಳಿವು ಸಿಗುತ್ತಿದ್ದಂತೆಯೇ ವಿಜಯೇಂದ್ರ ಹಾಗೂ ಯತ್ನಾಳ್ ಮಧ್ಯೆ ಫೈಟ್​ ತಾರಕಕ್ಕೇರುತ್ತಿದೆ. ನೀನಾ, ನಾನಾ ಒಂದು ಕೈ ನೋಡೇ ಬಿಡೋಣ ಎನ್ನುವ ಮಟ್ಟಕ್ಕೂ ಹೋಗುತ್ತಿದ್ದು, ಮುಂದೆ ದೊಡ್ಡ ಬೆಳವಣಿಗೆಗೆ ಕಾರಣ ಆಗುತ್ತಾ ಎನ್ನುವ ಪ್ರಶ್ನೆ ಇದೀಗ ಬಿಜೆಪಿ ಪಾಳದಲ್ಲಿ ಎದ್ದಿದೆ.

ಅತಿರೇಕ್ಕೇರಿದ ಬಿಜೆಪಿ ಬಣಬಡಿದಾಟ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಜಯೇಂದ್ರ
By Vijayendra
Follow us on

ಬೆಂಗಳೂರು, (ಜನವರಿ 19): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸುವ ಹೊರಬೀಳುತ್ತಿದ್ದಂತೆಯೇ ಬಸನಗೌಡ ಪಾಟೀಲ್ ಯತ್ನಾಳ್ ಬಣದಿಂದ ಒಂದೊಂದೇ ಅಸ್ತ್ರಗಳು ಆಚೆ ಬರುತ್ತಿವೆ. ನೋಟಿಸ್ ಬಳಿಕ ಸೈಲೆಂಟ್ ಆಗಿದ್ದ ಯತ್ನಾಳ್​ ಇದೀಗ ಮತ್ತೆ ವೈಲೆಂಟ್ ಆಗಿದ್ದಾರೆ. ಇದಕ್ಕೆ ರಮೇಶ್ ಜಾರಕಿಹೊಳಿ ಸಹ ಸಾಥ್​ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟ ಅತಿರಕಕ್ಕೇರಿದೆ. ಇಂದು(ಜನವರಿ 19) ಸಹ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿಕೊಂಡು ವಿಜಯೇಂದ್ರ ವಿರುದ್ಧ ಮುಗಿಬಿದ್ದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿಜಯೇಂದ್ರ, ಇಟ್ಟ ಗುರಿ, ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂಂದಿದ್ದಾರೆ. ಈ ಮೂಲಕ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಮ್ಮ ಮಾತಿನಿಂದ ನನ್ನ ಅಧಿಕಾರ ಕಸಿದುಕೊಳ್ಳಲು ಆಗುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್

ವಿಜಯೇಂದ್ರ (BY Vijayendra) ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ (BS Yediyurappa) ಜೈಲಿಗೆ ಹೋದದ್ದು, ಅವನಿಂದಲೇ ಹಾಳಾಗಿದ್ದು. ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾನೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ಸುಮ್ಮನೇ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವಾಗ್ದಾಳಿ ನಡೆಸಿದರು.

ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು. ಇವನಿಂದಲೇ ಪಾಪ ಸುನೀಲ್ ಕುಮಾರ್ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನರು ಹೀಗೇ, ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾಗ ಕೂಡ ನಾನು ಒಬ್ಬನೆ ಹೋಗಿದ್ದೆ. ನಾವು ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದರು.

ವಿರೋಧಿಗಳ ವಿರುದ್ಧ ಅಬ್ಬರಿಸಿದ ವಿಜಯೇಂದ್ರ

ಇನ್ನು ಮತ್ತೊಂದೆಡೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಬಿಜೆಪಿ ಮಾಜಿ ಸಚಿವ ಕೆ ಶಿವನಗೌಡ ನಾಯಕ್ ಅಭಿಮಾನಿಗಲು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವಿಜಯೇಂದ್ರ, ನಾನು ರೈತ ನಾಯಕ ಯಡಿಯೂರಪ್ಪನ ಮಗನಾಗಿ ಹೇಳುತ್ತೇನೆ. ಶಿಕಾರಿಪುರ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಗುರುಹಿರಿಯರ ಆಶಿರ್ವಾದದಿಂದ ಮುನ್ನಡೆಯುತ್ತೇನೆ. ಭಗವಂತನ ಕೃಪೆ, ಹರಗುರು ಚರಮೂರ್ತಿಗಳ ಆಶಿರ್ವಾದ ನನ್ನ ಮೇಲಿದೆ ಎಂದು ಅಬ್ಬರಿಸಿದರು.

ವಿಜಯೇಂದ್ರ ಸಿಎಂ ಆಗ್ತಾರೆ ಎಂದ ಶಿವನಗೌಡ

ಇನ್ನು ಮಾಜಿ ಸಚಿವ ಕೆ ಶಿವನಗೌಡ ಅವರು ವಿಜಯೇಂದ್ರ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಿಜಯೇಂದ್ರ ಮುಂದೆ ಸಿಎಂ ಆಗೇ ಆಗುತ್ತಾರೆ. ಅಧಿಕಾರದ ಕತ್ತಿ ಹಿಡಿದು ಸರ್ಕಾರವನ್ನು ತರಬೇಕಿದೆ. ನೀವು ಅಧಿಕಾರಕ್ಕೆ ಬಂದು ನಮಗೆ ನವಲಿ ಜಲಾಶಯ ಮಾಡಿ, ಹತ್ತಾರು ಕೆರೆಗಳನ್ನ ಮಾಡಿ ನೀರು ತುಂಬಿಸಬೇಕು. ಜಿಲ್ಲೆಯಲ್ಲಿ ಜನ ಏಮ್ಸ್ ಹೋರಾಟ ನಿರಂತರವಾಗಿ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi), ಜೆ.ಪಿ ನಡ್ಡಾ, ಅಮಿತ್ ಶಾ ಅವರ ಮನವೊಲಿಸಿ ಏಮ್ಸ್ ತರಬಹುದು. ಅದು ವಿಜಯೇಂದ್ರ ಅವರಿಂದ ಸಾಧ್ಯವಿದೆ ಎಂದು ಹೇಳಿದರು

ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಜಯೇಂದ್ರ

ಮುಂದೆ ಭಗವಂತ ಶಕ್ತಿ ಕೊಟ್ಟಾಗ ಜಿಲ್ಲೆಯ ನೀರಾವರಿ ಯೋಜನೆಗಳು, ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಈಗಲೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಭಗವಂತ ಶಕ್ತಿ ಕೊಟ್ಟರೆ ಈ ಭಾಗದ ಜನರ ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮವಹಿಸಿ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಏಮ್ಸ್ ಬೇಡಿಕೆ ಇದೆ. ಅದಕ್ಕಾಗಿ ನಿರಂತರ ಹೋರಾಟ ನಡೆದಿದೆ. ನೀರಾವರಿ ಯೋಜನೆ ಬಗ್ಗೆಯೂ ಕೇಳುತ್ತಿದ್ದಾರೆ. ಈ ವಿಚಾರವಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.