ಬೆಂಗಳೂರು, (ಜುಲೈ 20): ವಿಧಾನಸಭೆ ಕಲಾಪದ (Karnataka Assembly Session) ಸಂದರ್ಭ ಅತಿರೇಕದ ವರ್ತನೆ ತೋರಿದ ಬಿಜೆಪಿಯ 10 ಶಾಸಕರನ್ನು (BJP MLAs) ಅಮಾನತು ಮಾಡಲಾಗಿದ್ದು, ಈ ಸಂಬಂಧ ರಾಜ್ಯಪಾಲ ಗೆಹ್ಲೋಟ್ಗೆ ದೂರು ನೀಡಲು ಬಿಜೆಪಿ ಶಾಸಕರು ತೀರ್ಮಾನಿಸಿದ್ದಾರೆ. ವಿಧಾನಸೌಧದಿಂದ ರಾಜಭವನದವರೆಗೂ ಪಾದಯಾತ್ರೆ ಮೂಲಕ ಹೋಗಿ ದೂರು ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಇಂದು, ನಾಳೆ ಉಭಯ ಕಲಾಪ ಬಹಿಷ್ಕರಿಸಲು ಬಿಜೆಪಿ ನಿರ್ಧಾರ ಮಾಡಿದೆ. ಈ ಬಗ್ಗೆ ಇಂದು(ಜುಲೈ 20) ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಎಂಎಲ್, ಎಂಎಲ್ಸಿಗಳ ಸಭೆಯಲ್ಲಿ ತೀರ್ಮಾನವಾಗಿದೆ. ಅಲ್ಲದೇ ಸ್ಪೀಕರ್ ಯುಟಿ ಖಾದರ್ ನಡೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.
ಇದನ್ನೂ ಓದಿ: BJP MLAs Suspended: ಸದನದಲ್ಲಿ ಅತಿರೇಕದ ವರ್ತನೆ; ಹತ್ತು ಮಂದಿ ಬಿಜೆಪಿ ಶಾಸಕರ ಅಮಾನತು
ಇನ್ನು ಕಲಾಪವನ್ನು ಬಹಿಷ್ಕರಿಸಿ ಬಿಜೆಪಿ ಶಾಸಕರು ಪ್ರತಿಭಟನೆಗಿಳಿದಿದ್ದಾರೆ. ಬಸವರಾಜ ಬೊಮ್ಮಾಯಿ ಹಾಗೂ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರ ಪ್ರತಿಭಟನೆ ಮಾಡುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಮುನಿರತ್ನ. ಸುರೇಶ್ ಕುಮಾರ್, ಭೈರತಿ ಬಸವರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಸ್ಪೀಕರ್ ಪೀಠಕ್ಕೆ ಯು.ಟಿ.ಖಾದರ್ ಅಗೌರವ ತೋರಿದ್ದಾರೆ. ಸ್ಪೀಕರ್ ಆದವರು ಒಂದು ಪಾರ್ಟಿ ಪರವಾಗಿ ಇರಬಾರದು. ಸೋನಿಯಾ, ರಾಹುಲ್ರನ್ನು ಸ್ಪೀಕರ್ ಭೇಟಿಯಾಗಿದ್ದಾರೆ. ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಿ ನ್ಯಾಯ ಕೇಳಿದ್ದೆವು. ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಕ್ರಮ ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.
ಇನ್ನು ಸ್ಪೀಕರ್ ಯುಟಿ ಖಾದರ್ ಅವರು ಇಂದು ರಾಜ್ಯಪಾಲ ಗೆಹ್ಲೋಟ್ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ತಪ್ಪು ಮಾಡಿದ್ದಾರೆ, ಅದಕ್ಕೆ ಗವರ್ನರ್ ಅವರನ್ನು ಭೇಟಿಯಾಗಿದ್ದಾರೆ. ಸ್ಪೀಕರ್ ಸರಿಯಾಗಿ ಇದ್ದಿದ್ರೆ ಯಾಕೆ ಗವರ್ನರ್ ಭೇಟಿ ಆಗಬೇಕಿತ್ತು ಎಂದು ಪ್ರಶ್ನಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ