ಬೆಂಗಳೂರು, (ಆಗಸ್ಟ್ 29): ವಿಧಾನಸಭೆ ಚುನಾವಣೆ (Karnataka Assembly Elections 2023) ಅಭೂತ ಪೂರ್ವ ಬಹುಮತೊಂದಿಗೆ ಅಧಿಕಾರಕ್ಕೇರಿರು ಕಾಂಗ್ರೆಸ್ ಸರ್ಕಾರ(Congress Government) ಇದೀಗ ನೂರು ದಿನಗಳನ್ನು ಪೂರೈಸಿದೆ. ಇನು ಇತ್ತ ಬಿಜೆಪಿ ರಾಜ್ಯ ಸರ್ಕಾರದ 100 ವೈಫಲ್ಯಗಳ ಚಾರ್ಜ್ಶೀಟ್ (Charge Sheet)ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು(ಆಗಸ್ಟ್ 29 ರಾಜ್ಯ ಸರ್ಕಾರದ 100 ವೈಫಲ್ಯಗಳ ಒಳಗೊಂಡ ಒಂದು ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ ಎಂಬ ಹೆಸರಿನ ಪುಸ್ತಕ ಇದಾಗಿದೆ. ಕೇವಲ ಮಾಧ್ಯಮ ವರದಿಗಳನ್ನೇ ಮುದ್ರಿಸಿ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಲಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಆರೋಪಗಳು ಸೇರಿದಂತೆ ವರ್ಗಾವಣೆ ದಂಧೆ, ಶಾಸಕರು-ಸಚಿವರ ನಡುವಿನ ಹಗ್ಗಜಗ್ಗಾಟ ಸೇರಿದಂತೆ ಇತರೆ ವಿಷಯನ್ನೊಳಗೊಂಡಿದೆ.
100 ವೈಫಲ್ಯಗಳ ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈ ನೂರು ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಜನದ್ರೋಹ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೂರಾರು ತಪ್ಪು ಮಾಡಿದೆ. ಇಬ್ಬರು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ರಾಜೀನಾಮೆ ಪಡೆಯಲಿಲ್ಲ. ನಮ್ಮ ಸರ್ಕಾರವಿದ್ದಾಗ ಬಂಡವಾಳ ಹೂಡಿಕೆ ಅತಿ ಹೆಚ್ಚು ಬಂದಿತ್ತು. ಈಗ ವಿದ್ಯುತ್ ದರ ಹೆಚ್ಚಳ, ವ್ಯತ್ಯಯದಿಂದ ಹೂಡಿಕೆದಾರರು ವಾಪಸ್ ಹೋಗಿದ್ದಾರೆ. ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. 2 ಶಕ್ತಿಗಳು ಸಿಎಂ ಕಂಟ್ರೋಲ್ ಮಾಡುತ್ತಿವೆ ಎಂಬುದನ್ನು ಕೇಳಿದ್ದೇವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲೂ ಸರ್ಕಾರ ವಿಫಲವಾಗಿದೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ 100 ದಿನದ ನೂರಾರು ಹಳವಂಡಗಳು: ವಿಡಿಯೋ ಹಂಚಿಕೊಂಡ ಬಿಜೆಪಿ
ಎಲ್ಲದ್ದಕ್ಕಿಂತ ಹೆಚ್ಚಾಗಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಹಾಕುತ್ತಿದ್ದಾರೆ. ಹಿಂದಿನ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಾಧ್ಯಮಗಳ ಮೇಲೂ ಇವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ವಿಫಲ ರಾಗಿದ್ದಾರೆ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಮೂರು ತಿಂಗಳಲ್ಲಿ ಶಾಸಕರ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ನೂರು ದಿನಗಳಲ್ಲಿ ಮಾಡಿರುವ ತಪ್ಪುಗಳ ಬಗ್ಗೆ ಜನರ ಮುಂದೆ ಇಡುತ್ತೇವೆ ಎಂದರು.
ಇನ್ನು ಇದೇ ವೇಳೆ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಇದು ದಿಕ್ಕುತಪ್ಪಿದ ಸರ್ಕಾರವಾಗಿದೆ. ಬಹುಮತದ ಸರ್ಕಾರ 5 ವರ್ಷದ ಆಡಳಿತದ ದಿಕ್ಸೂಚಿ ಹೇಳಬೇಕಿತ್ತು. ಆದ್ರೆ, ಸರ್ಕಾರದ ಹಲವಾರು ವಿಚಾರಗಳಲ್ಲಿ ವೈಫಲ್ಯ ಮತ್ತು ಗೊಂದಲ ಇದೆ. ನಾಡಿನ ಜನರಿಗೆ ಕೊಟ್ಟ ಮಾತು ತಪ್ಪಿದೆ. ಹಣಕಾಸಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಳಿ ತಪ್ಪಿದೆ ಎಂದು ಗುಡುಗಿದರು.
8 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ, ಎಲ್ಲಾ ತೆರಿಗೆ ಹೆಚ್ಚಿಸಿದ್ದಾರೆ. ಸಾಲ ಮತ್ತು ತೆರಿಗೆ ಮೂಲಕ 45 ಸಾವಿರ ಕೋಟಿ ಆದಾಯ ಇದ್ದರೂ 12 ಸಾವಿರ ಕೋಟಿ ರೂ. ಖೋತಾ ಬಜೆಟ್ ಮಂಡಿಸಿದ್ದಾರೆ. ಹಲವಾರು ಸಂಘ ಮತ್ತು ಸಂಸ್ಥೆಗಳ ಸಂಬಳ ಸರಿಯಾಗಿ ಆಗುತ್ತಿಲ್ಲ. ರಾಜ್ಯದಲ್ಲಿ 1 ಕಿ.ಮೀ. ರಸ್ತೆ ಕೂಡ ಕಾಂಗ್ರೆಸ್ ನಿರ್ಮಾಣ ಮಾಡಿಲ್ಲ. ಕೃಷಿ ಸೇರಿ ಹಲವು ಇಲಾಖೆಯಲ್ಲಿ ವರ್ಗಾವಣೆಯ ಸುಗ್ಗಿ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ, ಆರೋಗ್ಯ, ಕೃಷಿಗೆ ಪ್ರೋತ್ಸಾಹ ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಓಪನ್ ಆಗಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳು, ಸಿಎಂ ಕಚೇರಿ ನಡುವೆ ಭ್ರಷ್ಟಾಚಾರಕ್ಕಾಗಿ ಗಲಾಟೆ ನಡೆಯುತ್ತಿವೆ, ಬೆಂಗಳೂರು ಗ್ರಾಮೀಣ ಎಸಿ ಸೇರಿದಂತೆ ಪ್ರಮುಖ ಹುದ್ದೆಗಳ ವರ್ಗಾವಣೆಗೆ ಹರಾಜು ನಡೆಯುತ್ತಿದ್ದು ಎಂದು ಆರೋಪಿಸಿದರು.
ದೂರು ಕೊಟ್ಟವರ ಮೇಲೆಯೇ ಈ ಸರ್ಕಾರ ಕೇಸ್ ಹಾಕಿಸುತ್ತಿದೆ. ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ನಾವೇನೂ ಕೇಸ್ ಹಾಕಲಿಲ್ಲ. ತನಿಖೆ ಮಾಡದೇ ದೂರು ಕೊಟ್ಟವರ ಮೇಲೆಯೇ ಕ್ರಮ ತೆಗೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರ. ಶಾಸಕ ಬಿ.ಆರ್. ಪಾಟೀಲ್ ನಕಲಿ ಪತ್ರ ಎಂದರು. ಅವರ ಶಾಸಕರೇ ತಾವು ಸಹಿ ಮಾಡಿದ್ದೇವೆ ಎಂದರು. ತನಿಖೆ ಮಾಡದೇ ಪತ್ರಕರ್ತರ ಮೇಲೆ ಪ್ರಶ್ನೆ ಮಾಡಿದರು. ಎಲ್ಲದಕ್ಕೂ ಕೇಸ್ ಹಾಕಿದರೆ ಜೈಲಿನಲ್ಲಿ ಜಾಗ ಸಾಕಾಗಲ್ಲ. ಎಲ್ಲಾ ಕ್ಲಬ್ ಗಳನ್ನು ಬಂದ್ ಮಾಡಲಾಗಿತ್ತು. ಈಗ ಮತ್ತೆ ಎಲ್ಲಾ ಓಪನ್ ಆಗಿದೆ . ಎಲ್ಲರಂದ ಮಾಮೂಲಿ ಪಡೆದು ಓಪನ್ ಮಾಡಿದ್ದಾರೆ . ಕೈಗಾರಿಕೆಗೆ ಬಂಡವಾಳ ಹೂಡಿಕೆ ಮೂರು ತಿಂಗಳಿಂದ ನಿಂತಿದೆ ಎಂದು ಕಿಡಿಕಾರಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ