
Karnataka Breaking News Updates: ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ವಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಟೀಕಾ ಪ್ರಹಾರ ನಡೆಸಿ ಆಕ್ರೋಶ ಹೊರಹಾಕುತ್ತಿವೆ. ಲಿಂಗಾಯತ (Lingayat) ಅಧಿಕಾರಿಗಳಿಗೆ ನಾಯಕರಿಗೆ ಅನ್ಯಾಯವಾಗುತ್ತಿದೆ ಎಂದು ಲೋಕಸಭೆ ಚುನಾವಣೆ (Lok Sabha Elections) ಸಮೀಪದಲ್ಲಿರುವಾಗಲೇ ಸ್ವಪಕ್ಷದ ವಿರುದ್ಧ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಆರೋಪ ಮಾಡಿದ್ದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ. ಇವೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಘಟನೆಗಳನ್ನು ಟಿವಿ9 ಲೈವ್ ಡಿಜಿಟಲ್ನಲ್ಲಿ ಪಡೆಯಿರಿ.
ಊಟ ಸರಿಯಿಲ್ಲ, ಎಲ್ಲರಿಗೂ ಊಟದ ವ್ಯವಸ್ಥೆಯಿಲ್ಲವೆಂದು ಬೆಂಗಳೂರು ವಿವಿಯ ಜ್ಞಾನಭಾರತಿ ಹಾಸ್ಟೆಲ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಎಷ್ಟೇ ಮನವಿ ಮಾಡಿದ್ರೂ ವಾರ್ಡನ್ ಗಮನಹರಿಸ್ತಿಲ್ಲವೆಂದು ಗರಂ ಆಗಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿವಾಸ ‘ಕಾವೇರಿ’ಯಲ್ಲಿ ಸಚಿವರಿಗೆ ಔತಣಕೂಟ ಆಯೋಜನೆ ಮಾಡಲಾಗಿದೆ. ಸಂಪುಟ ಸಭೆ ನಂತರ ಸಚಿವರು ಔತಣಕೂಟಕ್ಕೆ ಆಗಮಿಸುತ್ತಿದ್ದಾರೆ.
ಈಗಾಗಲೇ ಮಾಹಿತಿ ನೀಡುವ ಕೆಲಸವನ್ನು ಕೆಲವು ಶಾಸಕರೇ ಮಾಡಿದ್ದಾರೆ. ಸರಿಯಾದ ಮಾಹಿತಿ ಈಗಾಗಲೇ ಪಬ್ಲಿಕ್ ಡೊಮೇನ್‌ಗೆ ಬಂದಿದೆ. ಹೀಗಾಗಿ ಶಾಮನೂರಿಗೂ ತಪ್ಪು ಮಾಹಿತಿ ಏನಿತ್ತು ಎಂಬುದು ಗೊತ್ತಾಗಿದೆ ಎಂದು ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಏಳು ವಿಷಯ ಪರಿಗಣಿಸಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಸಮಿತಿ ರಚಿಸಲಾಗಿತ್ತು. ಭಕ್ತವತ್ಸಲ ಸಮಿತಿಯ 5 ಶಿಫಾರಸು ಪೈಕಿ ಮೂರು ಶಿಫಾರಸ್ಸಿಗೆ ಸಂಪುಟ ಅಸ್ತು ಎಂದಿದ್ದೆ ಎಂದು ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಎಂಎಸ್ ಬಿಲ್ಡಿಂಗ್ನ ಸೀಲಿಂಗ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಚಿವಾಲಯದ ನೌಕರರ ಸಂಘ ಪತ್ರ ಬರೆದಿದೆ. ಬಹುಮಹಡಿ ಕಟ್ಟಡದ ಸುರಕ್ಷತೆ ಕಾಪಾಡುವಂತೆ ಒತ್ತಾಯಿಸಿ ಪತ್ರ ಬರೆಯಲಾಗಿದ್ದು, PWDಯಿಂದ ಕಟ್ಟಡದ ಸುರಕ್ಷತೆ, ಗುಣಮಟ್ಟ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದ ಅಧ್ಯಕ್ಷ ರಮೇಶ್ ಸಂಗಾ ರಿಂದ ಪತ್ರ ಬರೆಯಲಾಗಿದೆ.
ಸಿದ್ದರಾಮಯ್ಯನವರೇ ನಿಮ್ಮ ಜೀವನದಲ್ಲಿ ಇಂತಹ ಸಂದರ್ಭ ಸಿಗಲ್ಲ. ಅಧಿಕಾರಿ ಹೋಗುತ್ತಾ ಹೋಗಲಿ, ಸಿಎಂ ಸ್ಥಾನದಿಂದ ಇಳಿಸಲಾಗಲ್ಲ. ರಾಷ್ಟ್ರಪತಿ ಆಳ್ವಿಕೆ ತರುತ್ತಾರಾ ತರಲಿ, ಸರ್ಕಾರ ತೆಗೆದು ನೀರು ಬಿಡಲಾಗಲ್ಲ ಎಂದು ಮಂಡ್ಯದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸರ್ಕಾರಕ್ಕೆ ಮಾತ್ರ ಬೆಂಬಲ ಕೊಟ್ಟಿದ್ದೇನೆ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದು ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿ ಎಂ.ಪಿ.ಲತಾ ಉಲ್ಟಾ ಹೊಡೆದಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಆರಂಭವಾಗಿದೆ.
ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ. ಆರೋಗ್ಯವಾಗಿ ಇದ್ದಾಗಲೇ ಅವರಿಗೆ ಶೃದ್ಧಾಂಜಲಿ ಹಾಕಿದ್ದರೆ ಹೇಗೆ? ಸಾಲು ಮರದ ತಿಮ್ಮಕ್ಕ ಎಂದರೆ ಎಲ್ಲಾರಿಗೂ ತಾಯಿ, ವೃಕ್ಷ ಮಾತೆ ಎಂದು ಬೆಂಗಳೂರಿನಲ್ಲಿ ಸಾಲುಮರದ ತಿಮ್ಮಕ್ಕನ ಮಗ ಉಮೇಶ್ ಹೇಳಿದ್ದಾರೆ.
ಸಾಲು ಮರದ ತಿಮ್ಮಕ್ಕಗೆ ಚಿಕಿತ್ಸೆ; ಡಾ. ಅಭಿಜಿತ್ ಕುಲಕರ್ಣಿ ಹೇಳಿದ್ದಿಷ್ಟು
ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ತೆಗೆದುಕೊಳ್ಳಿ ಎಂದಿದ್ದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದಲ್ಲೂ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ವಿಧಾನಸೌಧದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ನನ್ನ ಸಹಮತ ಇಲ್ಲ. ‘ಹೈಕಮಾಂಡ್ ಅಂದ್ರೆ ನಮಗೆ ಬಿ.ಎಸ್.ಯಡಿಯೂರಪ್ಪ’. ನಾನು ಹೇಳುವವರೆಗೂ ಏನೂ ಮಾಡಬೇಡಿ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ನಾನು ಒಂದು ತಿಂಗಳಿಂದ ಎಲ್ಲೂ ಏನನ್ನೂ ಮಾತನಾಡಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ನನ್ನ ಸಹಮತ ಇಲ್ಲ: ಶಾಸಕ ಎಸ್ಟಿ ಸೋಮಶೇಖರ್
ರಾಗಿಗುಡ್ಡ ಜನರು ಘಟನೆ ಕುರಿತು ಸತ್ಯ ಶೋಧನೆ ತಂಡಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ. ಇಂತಹ ಘಟನೆಯಿಂದ ಬಿಜೆಪಿ ಯಾವುದೇ ರಾಜಕೀಯ ಪಡೆಯುದಿಲ್ಲ. ವಿನಾಕಾರಣ ಪ್ರಕರಣದ ದಿಕ್ಕು ಕಾಂಗ್ರೆಸ್ ತಪ್ಪಿಸುತ್ತದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಟಿವಿ9 ಗೆ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ರಾಗಿಗುಡ್ಡಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ತಂಡ ಭೇಟಿ ನೀಡಿದೆ. ಸಂತ್ರಸ್ತರಾದ ಪ್ರಸನ್ನ, ಸುಶೀಲಾ, ನಂದಿನಿ, ಸುಚಿತ್ರಾ ನಿವಾಸಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ನಾಯಕರ ಬಳಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಮೆರವಣಿಗೆ ವೇಳೆ ನಮ್ಮ ಮನೆಗಳ ಮೇಲೆ ದಾಳಿ ಮಾಡಿದ್ದು ಏಕೆ? ಹೆಂಗಸರು, ಮಕ್ಕಳು ಬದುಕುವುದು ಹೇಗೆ, ನಮಗೆ ರಕ್ಷಣೆ ಬೇಕು. ಸರ್ಕಾರ ಸತ್ತು ಹೋಗಿದೆಯಾ ಎಂದು ಕಟೀಲ್ ಅವರನ್ನು ಪ್ರಸನ್ನ ಅವರು ಪ್ರಶ್ನೆ ಮಾಡಿದ್ದಾರೆ.
ಮತ್ತೆ ಮಳೆಯ ಮುನ್ಸೂಚನೆ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಳೆ ಆರಂಭ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಲು ಸೂಚನೆ ನೀಡಿದ್ದೇನೆ. ಶೇಕಡಾ 50ರಷ್ಟು ಸರ್ಕಾರದ ಬಿಲ್ಗಳನ್ನು ರಿಲೀಸ್ ಮಾಡಲಿದ್ದೇವೆ. 432 ಕೋಟಿ ಬಿಬಿಎಂಪಿ ಕಾಮಗಾರಿ ಬಿಲ್ ಬಿಡುಗಡೆ ಮಾಡುತ್ತೇವೆ. ಕಾಮಗಾರಿ ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಅಕ್ಟೋಬರ್ 7 ರಂದು ಟ್ರಾಫಿಕ್ ಕಂಟ್ರೋಲ್ ಕುರಿತು ಸಭೆ ಮಾಡುತ್ತೇವೆ. ಬೆಂಗಳೂರಿನ ಎಲ್ಲಾ ಕಡೆ ಟ್ರಾಫಿಕ್ ಕಂಟ್ರೋಲ್ ಅಸಾಧ್ಯ. ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಾಲು ಮರದ ತಿಮ್ಮಕ್ಕ ಅವರು ಅನಾರೋಗ್ಯದ ಹಿನ್ನೆಲೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅವರ ನಿಧನದ ಸುದ್ದಿ ಹಾಕಲಾಗಿದೆ. ಈ ಬಗ್ಗೆ ತಿಮ್ಮಕ್ಕ ಅವರ ದತ್ತುಪುತ್ರ ವನಸಿರಿ ಅವರನ್ನು ಸಂಪರ್ಕಿಸಿದಾಗ ವೃಕ್ಷಮಾತೆ ಆರೋಗ್ಯವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ನಾಗರಾಜ್ ಹತ್ತೂರು ಎಂಬವರು ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದು, ವದಂತಿ ನಂಬಬೇಡಿ ಎಂದಿದ್ದಾರೆ.
ತಮಿಳುನಾಡಿಗೆ KRS ಜಲಾಶಯದಿಂದ ನೀರು ಹರಿಸುತ್ತಿರುವ ವಿಚಾರವಾಗಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ರಾಜ್ಯದ ಜೆಡಿಎಸ್, ಬಿಜೆಪಿ ಸಂಸದರು ಪ್ರಧಾನಿ ಬಳಿ ಹೋಗಿ ಕೇಳಲಿ ಎಂದರು. ಸಿಎಂ ಸಿದ್ದರಾಮಯ್ಯ ಬಳಿ ನಮ್ಮ ಶಾಸಕರು ಬಂದು ಮಾತನಾಡಿದ ಹಾಗೆ ಪ್ರಧಾನಿ ಮೋದಿ ಜೊತೆ ಬಿಜೆಪಿ, ಜೆಡಿಎಸ್ ನಾಯಕರು ಮಾತನಾಡಲಿ. ಲೋಕಸಭಾ ಚುನಾವಣೆಯಲ್ಲಿ ಏನೋ ಸಾಧನೆ ಮಾಡುವುದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಎಂದರು.
ಮಂಡ್ಯ ಜಿಲ್ಲೆಗೆ, ಕಾವೇರಿ ಅಚ್ಚುಕಟ್ಟೆಗೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಹೆಚ್ಡಿ ಕುಮಾರಸ್ವಾಮಿ ಅವರನ್ನು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಸಾಧನೆ ಏನು ಅಂತಾ ನಮಗೂ ಗೊತ್ತಿದೆ. ವೋಟ್ ಹಾಕಿಸಿಕೊಳ್ಳಲು ಏನು ಮಾತಾಡ್ಬೇಕೋ ಅದನ್ನು ಮಾಡುತ್ತಾರೆ. ಅವರ ತಂದೆ ಕೊಡುಗೆಯನ್ನೇ ಎಷ್ಟುಸಲ ಹೇಳುತ್ತಾರೆ? ಅವರ ತಂದೆ ಕೊಡುಗೆ ಕೊಟ್ಟಾಯ್ತು, ಜನರು ಕೃತಜ್ಞತೆ ಸಲ್ಲಿಸಿದ್ದಾಯ್ತು. ಮಾರಸ್ವಾಮಿಯವರ ವೈಯಕ್ತಿಕ ಕೊಡುಗೆ ಏನು? ದೇವೇಗೌಡರ ಕೊಡುಗೆ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ನಿಂದ ಅಮೆರಿಕಕ್ಕೆ ಪ್ರಯಾಣ ಕೈಗೊಂಡಿದ್ದು, ಅಕ್ಟೋಬರ್ 10 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಬೆಂಗಳೂರು ನಗರದಲ್ಲಿ ಶಾಲಾ ಸಮಯ ಬದಲಾವಣೆ ಬಗ್ಗೆ ಸಭೆ ವಿಚಾರವಾಗಿ ಇಂದು ನಡೆಯಬೇಕಿದ್ದ ಸಭೆಯನ್ನು ಅ.9ಕ್ಕೆ ಶಿಕ್ಷಣ ಇಲಾಖೆ ಮುಂದೂಡಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಪೋಷಕರ ಒಕ್ಕೂಟ, ಪೊಲೀಸ್ ಅಧಿಕಾರಿಗಳು, ಖಾಸಗಿ ಶಾಲಾ ವಾಹನ ಮಾಲೀಕರ ಸಂಘಟನೆ, ಸಾರಿಗೆ ಅಧಿಕಾರಿಗಳು, ತಜ್ಞರ ನೇತೃತ್ವದಲ್ಲಿ ಇಂದು ಸಭೆ ನಿಗದಿ ಮಾಡಲಾಗಿತ್ತು. ಬೆಂಗಳೂರಲ್ಲಿ ನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಶಾಲೆಗಳು, ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್ ಸಲಹೆ ನೀಡಿತ್ತು.
ಬರ ಸಮೀಕ್ಷೆಗೆ ನಡೆಸಲು ಇಂದು ಕೇಂದ್ರದ ಮೂರು ತಂಡಗಳು ರಾಜ್ಯಕ್ಕೆ ಆಗಮಿಸಲಿದೆ. ಸಮೀಕ್ಷೆಗೂ ಮುನ್ನ ಕೇಂದ್ರ ತಂಡಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ವಿಧಾನಸೌಧದಲ್ಲಿ ಈ ಸಭೆ ನಡೆಯಲಿದೆ. 12 ಜಿಲ್ಲೆಗಳಲ್ಲಿ ಬರ ಸಮೀಕ್ಷೆ ನಡೆಸಲಿವೆ.
ಶಿವಮೊಗ್ಗದಲ್ಲಿ ಪರಿಸ್ಥಿತಿ ಈಗ ಹತೋಟಿಯಲ್ಲಿದೆ ಎಂದು TV9 ಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದ್ದಾರೆ. ಯಾರ ಕೈಯಲ್ಲಿ ಗನ್ ಇತ್ತು, ಯಾರ ಕೈಯಲ್ಲಿ ತಲವಾರು ಇತ್ತು ಅಂತಾ ಸಾಕಷ್ಟು ವೀಡಿಯೋಗಳನ್ನು ನಾವು ಕೊಟ್ಟಿದ್ದೇವೆ, ಈ ಸರ್ಕಾರದ ವ್ಯವಸ್ಥೆಯ ಮೂಲಕ ಅವರ ಪ್ಲಾನ್ ಜಾರಿಯಾಗಿದೆ. ಷಡ್ಯಂತ್ರದಿಂದ ಕೃತ್ಯ ಮಾಡುತ್ತಿರುವವರಿಗೆ ಸರ್ಕಾರದಿಂದ ಬೆಂಬಲ ಸಿಗುತ್ತಿದೆ. ಅವರಿಗೆ (ಗಲಭೆಕೋರರಿಗೆ) ಧೈರ್ಯ ತುಂಬುತ್ತಿರುವುದೇ ಸರ್ಕಾರದ ಸಚಿವರು ಮತ್ತು ಅಲ್ಲಿನ ಶಾಸಕರು. ನೂರಕ್ಕೆ ನೂರು ಶಿವಮೊಗ್ಗದ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಬೆಂಬಲ ಇಲ್ಲದೇ ಅವರಿಗೆ ಧೈರ್ಯ ಬರಲ್ಲ. ನಾನು ಮಧು ಬಂಗಾರಪ್ಪ, ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅಂತಾ ಹೇಳುತ್ತಿಲ್ಲ. ನೀವು ಏನೇ ಮಾಡಿದರೂ ನಾವಿದ್ದೇವೆ ಎಂದು ಹೇಳಿರುವ ಕಾರಣಕ್ಕೆ ಮಾಡುತ್ತಿದ್ದಾರೆ. ರಾಗಿಗುಡ್ಡದಿಂದ ಹಿಂದೂಗಳನ್ನು ಹೊರ ಹಾಕುವ ಹುನ್ನಾರ ಮತ್ತು ಷಡಂತ್ರ ಕಾಣುತ್ತಿದೆ. ಈ ಸರ್ಕಾರದಲ್ಲಿ ಸಾಕಷ್ಟು ಜನ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ, ಹಾಗಾಗಿ ಇಷ್ಟು ಧೈರ್ಯ ಇದೆ ಎಂದರು.
ಬೆಂಗಳೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಇಂದು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಖಾಸಗಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕ್ರಮದಲ್ಲಿ ಪರಮೇಶ್ವರ್ ಭಾಗಿಯಾಗಲಿದ್ದಾರೆ. ಸಚಿವ ಸಂಪುಟ ಸಭೆ ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಹೊರಟಿದ್ದಾರೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಮಂಡ್ಯದ ಕೆಆರ್ಎಸ್ ಡ್ಯಾಮ್ಗೆ ಮುತ್ತಿಗೆ ಹಾಕಲಿದ್ದಾರೆ. ತೆರದ ವಾಹನದ ಮೂಲಕ ವಾಟಾಳ್ ಮತ್ತು ನಾಯಕರು ರ್ಯಾಲಿ ಮಾಡಲಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಿಂದ ರ್ಯಾಲಿ ಮೂಲಕ ತೆರಳಿ ಡ್ಯಾಂಗೆ ಮುತ್ತಿಗೆ ಹಾಕಲಿದ್ದಾರೆ. ಈ ರ್ಯಾಲಿಯು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.
ಮೈಸೂರು ಬ್ಯಾಂಕ್ ಸರ್ಕಲ್, ಕೆಜಿ ರೋಡ್, ಶಾಂತಲಾ ಸಿಲ್ಕ್ ಹೌಸ್ , ಕಾಟನ್ ಪೇಟೆ ಮೈನ್ ರೋಡ್, ಮೈಸೂರು ಸರ್ಕಲ್, ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಬಿಎಚ್ಇಎಲ್, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಜಂಕ್ಷನ್, ಕೆಂಗೇರಿ, ವಿಶ್ವ ಒಕ್ಕಲಿಗರ ಸಂಘ,
ಆರ್ ಆರ್ ಡೆಂಟಲ್ ಕಾಲೇಜು, ಕುಂಬಲಗೋಡು, ಬಿಡದಿ, ರಾಮನಗರದ ಐಜೂರು ಗೇಟ್ ಬಳಿ ಪ್ರತಿಭಟನೆ ಅಲ್ಲಿ ರೈತರು ಕನ್ನಡಪರ ಹೋರಾಟಗಾರರು ರ್ಯಾಲಿ ಗೆ ಸೇರಿಕೊಳ್ಳುತ್ತಾರೆ, ಮದ್ದೂರಿನಲ್ಲಿ ರ್ಯಾಲಿ ಗೆ ರೈತ ರಿಂದ ಸ್ವಾಗತ, ಮಂಡ್ಯದಲ್ಲಿ ಕಾವೇರಿಗಾಗಿ ಪ್ರತಿಭಟನೆ ಮಾಡುತ್ತಿರುವ ರೈತರ ಭೇಟಿ ನಂತರ ಮೈಸೂರು ನಿಂದ ಬರುವ ರೈತರ ಜೊತೆ ಸೇರಿ ಶ್ರೀರಂಗಪಟ್ಟಣ, ಪಂಪ್ ಹೌಸ್ ರ್ಯಾಲಿ ಸಾಗಲಿದೆ.
Published On - 8:25 am, Thu, 5 October 23