ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ನನ್ನ ಸಹಮತ ಇಲ್ಲ: ಶಾಸಕ ಎಸ್ಟಿ ಸೋಮಶೇಖರ್
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ಜೆಡಿಎಸ್ ಸಚಿವರು ಅಸಮಾಧಾನ ಹೊರಹಾಕಿದ್ದರು. ಇದೀಗ ಮೈತ್ರಿ ನನಗೂ ವೈಯಕ್ತಿಕವಾಗಿ ಅಸಮಾಧಾನವಿದೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 05: ವೈಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಈ ವಿಚಾರವಾಗಿ ನನಗೂ ವೈಯಕ್ತಿಕವಾಗಿ ಅಸಮಾಧಾನವಿದೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವತ್ತೂ ನಮ್ಮ, ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ. ಹತ್ತಿರದಿಂದ ಮಾನಸಿಕವಾಗಿ ಕಿರುಕುಳ ನೋಡಿದ್ದೇನೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇತ್ತು. ಅವರು ಇವರಿಗೆ ಮತ ಹಾಕಲಿಲ್ಲ, ಇವರು ಅವರಿಗೆ ಮತ ಹಾಕಲಿಲ್ಲ. ಯಾರೂ ಕೂಡ ಈ ಬಗ್ಗೆ ವೈಯಕ್ತಿಕವಾಗಿ ಹೇಳುತ್ತಿಲ್ಲ. ಮೈತ್ರಿ ವಿಚಾರವಾಗಿ ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚಿಸಿಲ್ಲ ಎಂದಿದ್ದಾರೆ.
‘ಹೈಕಮಾಂಡ್ ಅಂದ್ರೆ ನಮಗೆ ಬಿ.ಎಸ್.ಯಡಿಯೂರಪ್ಪ’
ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ನನ್ನ ಸಹಮತ ಇಲ್ಲ. ‘ಹೈಕಮಾಂಡ್ ಅಂದ್ರೆ ನಮಗೆ ಬಿ.ಎಸ್.ಯಡಿಯೂರಪ್ಪ’. ನಾನು ಹೇಳುವವರೆಗೂ ಏನೂ ಮಾಡಬೇಡಿ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ನಾನು ಒಂದು ತಿಂಗಳಿಂದ ಎಲ್ಲೂ ಏನನ್ನೂ ಮಾತನಾಡಿಲ್ಲ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ರಾಜಕೀಯ ವೈರತ್ವ ಮರೆತು ಒಂದಾದ ಕುಮಾರಸ್ವಾಮಿ, ಸಿಪಿ ಯೋಗೇಶ್ವರ್
ಮೈತ್ರಿಯಿಂದಾಗಿ ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಸಹ ಹಾಗೆ ಆಗಿತ್ತು. ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಎಂಎಲ್‌ಎ ಆಗಲು ಆಗಲ್ಲ ಎಂದು ಹೇಳಿದ್ದಾರೆ.
ನಾನು 100 ಪರ್ಸೆಂಟ್ ಬಿಜೆಪಿಯಲ್ಲೇ ಇದ್ದೇನೆ
S.T.ಸೋಮಶೇಖರ್ ಬೆಂಬಲಿಗರು ಬಿಜೆಪಿ ತೊರೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅಶೋಕ್, ಮುನಿರತ್ನ, ದಾಸರಹಳ್ಳಿ ಕ್ಷೇತ್ರಗಳಲ್ಲೂ ಕೂಡ ಹೋಗಿದ್ದಾರೆ. ನಾನು 100 ಪರ್ಸೆಂಟ್ ಬಿಜೆಪಿಯಲ್ಲೇ ಇದ್ದೇನೆ. ಆದರೆ ಜೆಡಿಎಸ್ ಪಕ್ಷದ ಜತೆ ಮೈತ್ರಿಯಾದರೆ ಯೋಚನೆ ಮಾಡಬೇಕಿದೆ. ಮೈತ್ರಿ ವಿಚಾರ ಯಾರಿಗೂ ಆಗಲ್ಲ ಅಂತಾ ಕಾಂಗ್ರೆಸ್ ಸೇರುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತಾ ಕೆಲವರು ಹೇಳಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇರುವುದು ನಿಜ. ಬೋರ್ವೆಲ್, ಟ್ಯಾಂಕರ್ ಮೂಲಕ ನೀರು ಬಿಡಲು ಹಣ ಬಿಡುಗಡೆ ಮಾಡಲಾಗಿದೆ. ನಮ್ಮ ಕ್ಷೇತ್ರಕ್ಕೆ ಏಳೂವರೆ ಕೋಟಿ ರೂ. ಹಣ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿ ‘ಗೃಹಲಕ್ಷ್ಮೀ’ ಹಣ ತಲುಪಿಸಲು ಸಭೆ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆ ಕೂಡ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Thu, 5 October 23