ಬೆಂಗಳೂರು: ಇಂದು(ಜು.7) ನೂತನ ಸರ್ಕಾರದ ಮೊದಲ ಬಜೆಟ್(Karnataka Budget 2023)ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡನೆ ಮಾಡಲಿದ್ದಾರೆ. ಈ ಮೂಲಕ ಬರೊಬ್ಬರಿ 14ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅಂದ್ರೆ ಇಂದು 12 ಗಂಟೆಗೆ, 14ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಆದ್ರೆ ಇದು ಪೂರ್ಣಪ್ರಮಾಣದ ಬಜೆಟ್ ಅಲ್ಲ, ಹೊಸ ಸರ್ಕಾರದ ಪೂರಕ ಬಜೆಟ್ ಆಗಿರಲಿದೆ. ಇನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಜಾರಿ ಜೊತೆಗೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಬಜೆಟ್ ಮಂಡಿಸಲಿದ್ದಾರೆ. 2023-24ನೇ ಸಾಲಿನ ಬಜೆಟ್ ಗಾತ್ರ 3.35ಲಕ್ಷ ಕೋಟಿ ರೂಪಾಯಿ ದಾಟುವ ಅಂದಾಜು ಮಾಡಲಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ 2 ಲಕ್ಷ 51ಸಾವಿರದ,541ಕೋಟಿ ರೂಪಾಯಿ ಬಜೆಟ್ ಮಂಡಿಸಿತ್ತು.
13 ಬಾರಿ ಬಜೆಟ್ ಮಂಡಿಸಿ ಇದೀಗ 14ನೇ ಬಾರಿ ದಾಖಲೆಯ ಬಜೆಟ್ ಮಂಡಿಸುತ್ತಿರುವ ಲೆಕ್ಕರಾಮಯ್ಯರ ಮೇಲೆ ರಾಜ್ಯದ ಜನರ ಚಿತ್ತ ನೆಟ್ಟಿದೆ. ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು ರಾಜ್ಯದ ಜನರ ನಿರೀಕ್ಷೆಯನ್ನ ಹೆಚ್ಚಿಸಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಯಾವೆಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಿತ್ತಾರೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಅನುದಾನ ನೀಡುತ್ತಾರೆ. ಆರ್ಥಿಕ ಶಿಸ್ತನ್ನ ಹೇಗೆ ಪ್ರದರ್ಶಿಸುತ್ತಾರೆ? ಹೀಗೆ ಬಜೆಟ್ನಲ್ಲಿ ಏನೆಲ್ಲ ಇರಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಬಜೆಟ್ನಲ್ಲಿ ಏನೆಲ್ಲ ಭಾಗ್ಯಗಳು ಸಿಗಲಿದೆ ಎಂದು ನಾಡಿನ ಆರುವರೆ ಕೋಟಿ ಜನರು ಎದುರು ನೋಡುತ್ತಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ದೂರದೃಷ್ಟಿ ಆಲೋಚನೆಗಳನ್ನು ಕ್ರೂಢೀಕರಿಸಿ ಮಹತ್ವದ ಬಜೆಟ್ ಮಂಡಿಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಜೆಟ್ ಮಂಡನೆಗೆ ಅಂತಿಮ ರೂಪ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳ ಜತೆಗೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸಲು ಮುಖ್ಯಮಂತ್ರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಜೆಟ್ನಲ್ಲಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆ ಈಡೇರಿಸುವ ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆ, ಬಿಸಿಯೂಟ ಸಿಬ್ಬಂದಿಯರ ಗೌರವಧನ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಇನ್ನು ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಹಣ ಹೊಂದಾಣಿಕೆ ಕುರಿತು ಘೋಷಣೆ ಮೂಲಕ ಬರೊಬ್ಬರಿ 30 ಸಾವಿರ ಕೋಟಿ ಅನುದಾನ ಮೀಸಲಿಡುವ ಸಾಧ್ಯತೆಯಿದೆ. ಜೊತೆಗೆ ಮೇ 2024 ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಲ್ಯಾಣ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಗಳೂ ಇವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:41 am, Fri, 7 July 23