Karnataka Budget 2023: ಗ್ಯಾರಂಟಿ, ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವುದು ಸಿಎಂ ಸಿದ್ದರಾಮಯ್ಯ ಆದ್ಯತೆ
ಗ್ಯಾರಂಟಿಗಳ ಕಾರಣದಿಂದಾಗಿ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಯೋಜನೆಗಳು ಇತರ ಯೋಜನೆಗಳಿಗೆ ಹೋಲಿಸಿದರೆ ಭಾರಿ ಅನುದಾನ ಹಂಚಿಕೆಯನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಹೆಚ್ಚು ಅನುದಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿರುವ ಇಲಾಖೆಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಬಜೆಟ್ (Karnataka Budget 2023) ಮಂಡನೆ ಮಾಡಲಿದ್ದು, ಅವರು ಮಂಡನೆ ಮಾಡುತ್ತಿರುವ 14ನೇ ಬಜೆಟ್ ಇದಾಗಿರಲಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಉಚಿತ ಗ್ಯಾರಂಟಿಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಬಹುದು ಎಂಬುದರ ಮೇಲೆ ಎಲ್ಲರ ಗಮನವಿದೆ. ಜನಪರ ಯೋಜನೆಗಳ ಹೊರತಾಗಿ, ಸರ್ಕಾರವು ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ ಮತ್ತು ಮೇ 2024 ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಲ್ಯಾಣ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಗಳೂ ಇವೆ.
ಈ ಬಜೆಟ್ ಮಂಡನೆ ಮಾಡಿದ ಬಳಿಕ ಸಿದ್ದರಾಮಯ್ಯ ಅವರು ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 13 ಬಾರಿ ಬಜೆಟ್ ಮಂಡಿಸಿದ್ದರು.
ಈ ಬಜೆಟ್ ಸಿದ್ದರಾಮಯ್ಯ ಅವರಿಗೆ ಸವಾಲಿನದ್ದಾಗಿದೆ, ಏಕೆಂದರೆ ಅವರು ಇತರ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡದೆ ಐದು ಗ್ಯಾರಂಟಿಗಳಿಗೂ ಅವಕಾಶ ನೀಡಬೇಕಾಗಿದೆ ಎಂದು ‘ನ್ಯೂಸ್ 9’ ವರದಿ ವಿಶ್ಲೇಷಿಸಿದೆ.
ಐದು ಗ್ಯಾರಂಟಿ ಯೋಜನೆಗಳಿಗೆ 59,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು ಪ್ರಸ್ತುತ ಬಜೆಟ್‌ನ ವೆಚ್ಚ 3.39 ಲಕ್ಷ ಕೋಟಿ ರೂಪಾಯಿ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವರ್ಷದ ಫೆಬ್ರವರಿಯಲ್ಲಿ 3.09 ಲಕ್ಷ ಕೋಟಿ ರೂ.ಗಳ ಪೂರಕ ಬಜೆಟ್ ಮಂಡಿಸಿದ್ದರು.
ವರದಿಗಳ ಪ್ರಕಾರ, ಕಾಂಗ್ರೆಸ್‌ನ ಯೋಜನೆಗಳಿಗೆ ಹಣವನ್ನು ಮುಕ್ತಗೊಳಿಸಲು ಮುಖ್ಯಮಂತ್ರಿಗಳು ಇತರ ಅನುದಾನ ಹಂಚಿಕೆಯನ್ನು ಕಡಿಮೆ ಮಾಡಬಹುದು ಅಥವಾ ಕೆಲವು ಯೋಜನೆಗಳನ್ನು ಅಸ್ತಿತ್ವದಲ್ಲಿರುವ ಅಥವಾ ಹೊಸ ಯೋಜನೆಗಳೊಂದಿಗೆ ವಿಲೀನಗೊಳಿಸಬಹುದು ಎನ್ನಲಾಗಿದೆ.
ಕ್ಷೇತ್ರವಾರು ಹಂಚಿಕೆ ಮಾಡಿದ ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ, ಸಿದ್ದರಾಮಯ್ಯ ಅವರು ಇಲಾಖಾವಾರು ಹಣ ಮಂಜೂರು ಮಾಡುವ ಸಾಧ್ಯತೆಯಿದೆ.
ಗ್ಯಾರಂಟಿಗಳ ಕಾರಣದಿಂದಾಗಿ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಯೋಜನೆಗಳು ಇತರ ಯೋಜನೆಗಳಿಗೆ ಹೋಲಿಸಿದರೆ ಭಾರಿ ಅನುದಾನ ಹಂಚಿಕೆಯನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಹೆಚ್ಚು ಅನುದಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿರುವ ಇಲಾಖೆಗಳು ಹೀಗಿವೆ;
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದ ಇಲಾಖೆಯು ಮೊದಲ ಬಾರಿಗೆ ‘ಗೃಹ ಲಕ್ಷ್ಮಿ’ ಯೋಜನೆಗೆ ಗರಿಷ್ಠ ಹಂಚಿಕೆಯನ್ನು ಪಡೆಯುವ ಸಾಧ್ಯತೆಯಿದೆ. ಇದು ಪ್ರತಿ ಮನೆಯ ಮಹಿಳಾ ಯಜಮಾನಿಗೆ 2,000 ರೂ. ನಿಡುವ ಗ್ಯಾರಂಟಿ ಯೋಜನೆಯಾಗಿದೆ.
ಇಲಾಖೆಯ ಅಧೀನದಲ್ಲಿ ಹಿಂದಿನ ಸರ್ಕಾರವು ವಾರಾಣಸಿಗೆ ತೀರ್ಥಯಾತ್ರೆ ಮಾಡುವ ಪ್ರತಿ ಭಕ್ತನಿಗೆ 5,000 ರೂಪಾಯಿ ನೀಡುವ ‘ಕಾಶಿ ಯಾತ್ರೆ’ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಾರಂಭಿಸಿತ್ತು. ಸಿದ್ದರಾಮಯ್ಯ ಸರ್ಕಾರವು ಇಂತಹ ಯೋಜನೆಗಳನ್ನು ಮುಂದುವರಿಸುತ್ತದೆಯೇ ಅಥವಾ ಅವುಗಳನ್ನು ರದ್ದುಗೊಳಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಸಾರಿಗೆ ಇಲಾಖೆ
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಯನ್ನು ಮೊದಲು ಜಾರಿಗೊಳಿಸಲಾಗಿದೆ. ಈ ಯೋಜನೆಗೆ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದೆ.
ಜೂನ್ 11 ರಿಂದ 13.72 ಕೋಟಿಗೂ ಹೆಚ್ಚು ಮಹಿಳೆಯರು ಜುಲೈ 5 ರವರೆಗೆ 325 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ದರದಲ್ಲಿ ಪ್ರಯಾಣಿಸಿದ್ದಾರೆ. ಹೆಚ್ಚಿನ ಬಸ್‌ಗಳ ಬೇಡಿಕೆಯೊಂದಿಗೆ ಸಿಎಂ ಸಾರಿಗೆ ಇಲಾಖೆಗೆ ಮಹತ್ವದ ಪಾಲು ನೀಡಬಹುದು ಎನ್ನಲಾಗಿದೆ.
ಇತರೆ ಗ್ಯಾರಂಟಿ ಯೋಜನೆಗಳು
‘ಅನ್ನ ಭಾಗ್ಯ’ ಯೋಜನೆಯಡಿ ರಾಜ್ಯವು ವಿವಿಧ ಮೂಲಗಳಿಂದ ಅಕ್ಕಿ ಖರೀದಿಸುವವರೆಗೆ ಬಿಪಿಎಲ್ ಕಾರ್ಡ್‌ದಾರರಿಗೆ ಹಣ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ರಾಜ್ಯಕ್ಕೆ ತಿಂಗಳಿಗೆ ಸುಮಾರು 800 ಕೋಟಿ ರೂ. ವ್ಯಯವಾಗಲಿದೆ. 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಭರವಸೆ ನೀಡುವ ‘ಗೃಹ ಜ್ಯೋತಿ’ ಇಂಧನ ಇಲಾಖೆಯ ಅಡಿಯಲ್ಲಿ ಬರುತ್ತದೆ ಮತ್ತು ಬಜೆಟ್‌ನ ದೊಡ್ಡ ಭಾಗವನ್ನು ಪಡೆಯುವ ನಿರೀಕ್ಷೆಯಿದೆ. ಇಲ್ಲಿಯವರೆಗೆ, ಜುಲೈ 6 ರವರೆಗೆ 1 ಕೋಟಿಗೂ ಹೆಚ್ಚು ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2023 ಯಾವಾಗ? ಯಾರು ಮಂಡಿಸಲಿದ್ದಾರೆ? ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ವಿವರ
‘ಯುವ ನಿಧಿ’ ಯೋಜನೆ ಅನುಷ್ಠಾನದ ಕುರಿತು ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಸರ್ಕಾರವು ಅನುಷ್ಠಾನದ ದಿನಾಂಕವನ್ನು ಘೋಷಿಸಬಹುದು ಮತ್ತು ಅದನ್ನು ಮುಂದಿನ ಆರ್ಥಿಕ ವರ್ಷಕ್ಕೆ ಮುಂದೂಡುವ ಸಾಧ್ಯತೆಯೂ ಇದೆ.
ಈ ಐದು ಯೋಜನೆಗಳಿಗೆ ಈ ಹಣಕಾಸು ವರ್ಷದ ಉಳಿದ ಅವಧಿಗೆ 40 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು.
ಬೆಂಗಳೂರು ಅಭಿವೃದ್ಧಿ
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಅನ್ನು ಸುಧಾರಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಕೇಳಿದ್ದಾರೆ. ನಗರದಲ್ಲಿ ಸುರಂಗ ರಸ್ತೆಗಳ ಕಾರ್ಯಸಾಧ್ಯತೆಯ ಕುರಿತು ಸರ್ಕಾರ ಅಧ್ಯಯನ ನಡೆಸುತ್ತಿದ್ದು, ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿವಿಧ ಕಾಮಗಾರಿಗಳಿಗೆ ಕಳೆದ ಬಜೆಟ್‌ನಲ್ಲಿ ಬೊಮ್ಮಾಯಿ ಅವರು ಸಂಚಾರ ದಟ್ಟಣೆ ಕಡಿಮೆ ಮಾಡಲು ವಿವಿಧ ಎಲಿವೇಟೆಡ್ ಕಾರಿಡಾರ್‌ಗಳನ್ನು ಘೋಷಿಸಿದ್ದರು. ಇದಕ್ಕಾಗಿ ಸುಮಾರು 9,000 ಕೋಟಿ ರೂ. ಘೋಷಣೆ ಮಾಡಿದ್ದರು. ಇವು ಸಾಕಾರಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇಂದಿರಾ ಕ್ಯಾಂಟೀನ್ ಯೋಜನೆ ಪುನಶ್ಚೇತನಗೊಳ್ಳುತ್ತಿದ್ದು, ಬಿಬಿಎಂಪಿ ವೆಚ್ಚವನ್ನು ಸಮಾನವಾಗಿ ವಿಭಜಿಸಲು ಸರ್ಕಾರ ನಿರ್ಧರಿಸಿದೆ. ನಗರದಲ್ಲಿ ಹೆಚ್ಚುವರಿ ಇಂದಿರಾ ಕ್ಯಾಂಟೀನ್‌ಗಳನ್ನು ಸಿಎಂ ಘೋಷಿಸಿದ್ದಾರೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿಗೆ ಸಿಎಂ ಸಾಕಷ್ಟು ಹಣ ಮೀಸಲಿಡಬಹುದು ಎಂದು ನಿರೀಕ್ಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 pm, Thu, 6 July 23