ಬೆಂಗಳೂರ: ಏ.17ರಂದು ರಾಜ್ಯದ 3 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ‘ಕೈ’ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಂತೆಯೇ, ಸತೀಶ್ ಜಾರಕಿಹೊಳಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸತೀಶ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇತ್ತ, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬಸವರಾಜ್ ತುರುವಿಹಾಳ್ ನಾಮಪತ್ರ ಸಲ್ಲಿಸಲಿದ್ದಾರೆ. ಬಸವರಾಜ್ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ, ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮಾ.30ರಂದು ಮಲ್ಲಮ್ಮ ನಾರಾಯಣರಾವ್ ನಾಮಪತ್ರ ಸಲ್ಲಿಸಲಿದ್ದಾರೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಬೆಂಬಲಿಗರಿಂದ ಹಣ ಹಂಚಿಕೆ
ಈ ನಡುವೆ, ಏಪ್ರಿಲ್ 17ರಂದು ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬೆಂಬಲಿಗರಿಂದ ಹಣ ಹಂಚಿಕೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೈಯದ್ ಯಸ್ರಬ್ ಅಲಿಖಾದ್ರಿ ಬೆಂಬಲಿಗರು ಹಣ ಹಂಚಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಭ್ಯರ್ಥಿ ಬೆಂಬಲಿಗರು ಬಹಿರಂಗ ಸಭೆಗೆ ಹಣ ಕೊಟ್ಟು ಜನರನ್ನ ಕರೆಸಿದ್ದಾರೆ ಎಂದು ಹೇಳಲಾಗಿದೆ. ಅಂದ ಹಾಗೆ, ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಹೀಗಾಗಿ, ಅಲಿಖಾದ್ರಿ ಬೆಂಬಲಿಗರು ಒಬ್ಬರಿಗೆ 500ರಂತೆ ಹಣ ಹಂಚಿದ್ದಾರಂತೆ.
ಮಾ.29ರಂದು ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ರಜೆ
ಇತ್ತ, ಮಾ.29ರಂದು ಸ್ಥಳೀಯ ಸಂಸ್ಥೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿನ ಸರ್ಕಾರಿ, ಸಹಕಾರಿ ಶಿಕ್ಷಣ ಸಂಸ್ಥೆಗಳ, ಬ್ಯಾಂಕ್ಗಳ, ಕೈಗಾರಿಕಾ ಸಂಸ್ಥೆಗಳ, ಔದ್ಯಮಿಕ ಸಂಸ್ಥೆಗಳ ಕಾಯಂ, ದಿನಗೂಲಿ ಮತದಾರರಿಗೆ ವೇತನ ಸಹಿತ ರಜೆ ನೀಡಿ ರಾಜ್ಯ ಸರ್ಕಾರದಿಂದ ಆದೇಶ ಪ್ರಕಟವಾಗಿದೆ. ಆದರೆ, ಇದು ತುರ್ತು ಸೇವೆಗಳ ಮೇಲಿರುವ ನೌಕರರಿಗೆ ಅನ್ವಯಿಸಲ್ಲ ಎಂಬ ಮಾಹಿತಿ ಸಿಕ್ಕಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆ
ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆ ಆಗಿದೆ. ಬಿಜೆಪಿ ಕೋರ್ ಕಮಿಟಿಗೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಬಿ.ಶ್ರೀರಾಮುಲು ಹಾಗೂ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸೇರ್ಪಡೆ ಆಗಿದ್ದಾರೆ. ಕೋರ್ ಕಮಿಟಿ ಸದಸ್ಯರಾಗಿದ್ದ ಸಿ.ಟಿ.ರವಿ ವಿಶೇಷ ಆಹ್ವಾನಿತರಾಗಿ ನೇಮಕಗೊಂಡಿದ್ದಾರೆ.
13 ಸದಸ್ಯರ, 3 ವಿಶೇಷ ಆಹ್ವಾನಿತರ ಕಮಿಟಿ ಪುನಾರಚನೆ ಆಗಿದೆ. ಪಕ್ಷದ ವರಿಷ್ಠರು ರಾಜ್ಯದ ಕೋರ್ ಕಮಿಟಿ ಪುನರ್ ರಚಿಸಿದ್ದಾರೆ. ಈ ನಡುವೆ,
ಸಚಿವ ಲಿಂಬಾವಳಿ ಮತ್ತು ಶಾಸಕ ಸಿ.ಎಂ.ಉದಾಸಿ ಅವರನ್ನು ಕಮಿಟಿಯಿಂದ ಕೈಬಿಡಲಾಗಿದೆ.
ಇದನ್ನೂ ಓದಿ: ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್: ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್ ರದ್ದು
Published On - 6:00 pm, Thu, 25 March 21