ಹಗರಣ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿಸಿದ್ದ ಸಿದ್ದರಾಮಯ್ಯ; ಸಿಎಂ ಬೊಮ್ಮಾಯಿ ವಾಗ್ದಾಳಿ

ನಮ್ಮ ಮೇಲೆ ಆರೋಪ ಮಾಡಿ ಕಾಂಗ್ರೆಸ್​​ನ ಪಾಪ ಕಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್​ನವರ ಪ್ರಕರಣಗಳು ಮುಂದೆ ಬಯಲಾಗಲಿವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಹಗರಣ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿಸಿದ್ದ ಸಿದ್ದರಾಮಯ್ಯ; ಸಿಎಂ ಬೊಮ್ಮಾಯಿ ವಾಗ್ದಾಳಿ
ಬಸವರಾಜ ಬೊಮ್ಮಾಯಿ

Updated on: Mar 04, 2023 | 2:58 PM

ಚಿತ್ರದುರ್ಗ: ಹಗರಣ ಮುಚ್ಚಿ ಹಾಕಲೆಂದೇ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಪುತ್ರ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತದ ಬಲೆಗೆ ಬಿದ್ದ ಬೆನ್ನಲ್ಲೇ ಕಾಂಗ್ರೆಸ್​ ನಾಯಕರು ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಕೂಡ ಒತ್ತಾಯಿಸಿದ್ದರು. ಇದಕ್ಕೆ ಸಿಎಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ಸಚಿವರೊಬ್ಬರ ಕಚೇರಿಯಲ್ಲಿ 2 ಲಕ್ಷ ರೂ. ನಗದು ಸಿಕ್ಕಿತ್ತು. ಆಗ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಾ? ಅಂದು ಲೋಕಾಯುಕ್ತ ಸಂಸ್ಥೆ ಇದ್ದಿದರೆ ಇವರೆಲ್ಲ ಬಂಧನಕ್ಕೊಳಗಾಗುತ್ತಿದ್ದರು ಎಂದು ಬೊಮ್ಮಾಯಿ ಹೇಳಿದ್ದಾರೆ.
ಹಗರಣ ಮುಚ್ಚಿ ಹಾಕಲೆಂದೇ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ದರು-ಸಿಎಂ

ನಮ್ಮ ಮೇಲೆ ಆರೋಪ ಮಾಡಿ ಕಾಂಗ್ರೆಸ್​​ನ ಪಾಪ ಕಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್​ನವರ ಪ್ರಕರಣಗಳು ಮುಂದೆ ಬಯಲಾಗಲಿವೆ. ಪಕ್ಷ ಭೇದವಿಲ್ಲದೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ಕಾಂಗ್ರೆಸ್​​ಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

‘ಮಾಡಾಳ್​​​ ಉಚ್ಚಾಟನೆ ಬಗ್ಗೆ ವರಿಷ್ಠರಿಂದ ತೀರ್ಮಾನ’

ಮಾಡಾಳ್​​​ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು. ಬಿಜೆಪಿ ಕೊಲೆಗಡುಕ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಕಾಲದಲ್ಲೇ ಅತಿ ಹೆಚ್ಚು ಕೊಲೆಗಳಾಗಿದ್ದವು. ಜಾತಿ, ಧರ್ಮ, ರಾಜಕೀಯ ದ್ವೇಷದ ಕಾರಣಕ್ಕೆ ಕೊಲೆಗಳಾಗಿದ್ದವು. ಎಲ್ಲಾ ರಂಗದಲ್ಲೂ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಮಾಡಿದೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.

ವಿರೂಪಾಕ್ಷಪ್ಪ ಮಾಡಾಳ್‌ ಹಾಗೂ ಅವರ ಪುತ್ರನ ನಿವಾಸದಲ್ಲಿ ಕೋಟ್ಯಂತರ ರೂ. ನಗದು, ಕೆಜಿಗಟ್ಟಲೇ ಚಿನ್ನಾಭರಣ ಪತ್ತೆಯಾದ ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ತೀವ್ರಗೊಂಡಿದೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Sat, 4 March 23