ಕಾರವಾರ: ಠಾಣೆ ಮೆಟ್ಟಿಲೇರಿದ ಹಾಲಿ ಮಾಜಿ ಶಾಸಕರಿಬ್ಬರ ಜಗಳ, ಏನಿದು ಅಂತೀರಾ ಈ ಸ್ಟೋರಿ ನೋಡಿ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆ ಕಾರವಾರದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಕಾರವಾರ ಕ್ಷೇತ್ರದ ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಶಾಸಕಿ ವಿರುದ್ದ ಮಾಜಿ ಶಾಸಕ ಸೈಲ್ ದೂರು ಕೊಡಲು ಮುಂದಾದರೆ ಇತ್ತ ಶಾಸಕಿ ರೂಪಾಲಿ ಸಹ ತನ್ನ ಮೇಲೆ ಸಹ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ಮಾಜಿ ಶಾಸಕರು ವಿರುದ್ದ ದೂರು ನೀಡಿದ್ದಾರೆ.
ಕಾರವಾರ: ಒಂದೆಡೆ ಠಾಣೆ ಮುಂದೆಯೇ ಬೆಂಬಲಿಗರ ಜೊತೆ ಕುಳಿತಿರುವ ಮಾಜಿ ಶಾಸಕ, ಇನ್ನೊಂದೆಡೆ ಮಾಜಿ ಶಾಸಕರ ವಿರುದ್ಧ ಕಿಡಿಕಾರುತ್ತಾ ದೂರು ಕೊಡಲು ಆಗಮಿಸಿದ ಶಾಸಕಿ, ಈ ದೃಶ್ಯಗಳು ಕಂಡು ಬಂದಿದ್ದು ಕರಾವಳಿ ಜಿಲ್ಲೆ ಕಾರವಾರದಲ್ಲಿ. ಹೌದು ಚುನಾವಣೆ ಸಮೀಪಿಸುತ್ತಿದ್ದಂತೆ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ನಿನ್ನೆ(ಮಾ.3)ಮಾಜಿ ಶಾಸಕ ಸತೀಶ್ ಸೈಲ್ (satish sail )ಮಾಜಾಳಿ ಎನ್ನುವ ಪಂಚಾಯತಿಯಲ್ಲಿನ ಸಮಸ್ಯೆಯೊಂದನ್ನ ಇಟ್ಟುಕೊಂಡು ಕಾರವಾರ ನಗರದ ಜಿಲ್ಲಾ ಪಂಚಾಯತಿ ಸಿಇಒ ಬಳಿ ಮಾತನಾಡಲು ಕಚೇರಿಗೆ ಹೋಗಿದ್ದರು. ಇದೇ ವೇಳೆ ಹಾಲಿ ಶಾಸಕಿ ರೂಪಾಲಿ ನಾಯ್ಕ(Roopali Santosh Naik)ಸಹ ಸಿಇಓ ಕಚೇರಿಗೆ ಆಗಮಿಸಿದ್ದು ಈ ವೇಳೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿದ್ದು ಇದಾದ ನಂತರ ಶಾಸಕಿ ರೂಪಾಲಿ ನಾಯ್ಕ ಅವರು ತನ್ನ ಮೇಲೆ ಪೇಪರ್ ವೇಟೇಜ್ ಕಲ್ಲಿನಿಂದ ಹಲ್ಲೆ ಮಾಡಲು ಬಂದಿದ್ದು, ನನಗೆ ಅವ್ಯಾಚ ಶಬ್ದದಿಂದ ನಿಂದಿಸಿದ್ದಾರೆ ಎಂದು ಶಾಸಕಿ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಮಾಜಿ ಶಾಸಕ ಸತೀಶ್ ಸೈಲ್ ಕಾರವಾರ ನಗರ ಠಾಣೆಗೆ ದೂರು ನೀಡಲು ಮುಂದಾದರು.
ಈ ವಿಷಯ ತಿಳಿಯುತ್ತಿದ್ದಂತೆ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ರೂಪಾಲಿ ನಾಯ್ಕ ಸಭೆ ಮುಗಿಸಿ ಸೀದಾ ಪೊಲೀಸ್ ಠಾಣೆಗೆ ಬಂದಿದ್ದರು. ಠಾಣೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ದ ದೂರು ಕೊಡಲು ಮುಂದಾಗಿದ್ದರು. ತನ್ನ ಮೇಲೆ ಮಾಜಿ ಶಾಸಕರು ಹಲ್ಲೆ ಮಾಡಲು ಮುಂದಾಗಿದ್ದು ಅವ್ಯಾಚ ಶಬ್ದದಿಂದ ನಿಂದಿಸಿದ್ದು ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ಕೊಡಲು ರೂಪಾಲಿ ನಾಯ್ಕ ಕೂಡ ಮುಂದಾದರು. ಈ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ರೂಪಾಲಿ ನಾಯ್ಕ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ದ ಮನಬಂದಂತೆ ವಾಗ್ದಾಳಿ ನಡೆಸಿದರು. ಮಾಜಿ ಶಾಸಕರು ಕುಡಿದ ಅಮಲಿನಲ್ಲಿ ಜಗಳ ಮಾಡುತ್ತಿದ್ದು, ಗಣಿ ಕಾಲಿ ಮಾಡಿ ಜೈಲು ಸೇರಿದವರು ಮಾಜಿ ಶಾಸಕ ಸತೀಶ್ ಸೈಲ್ ಎಂದು ಕಿಡಿಕಾರಿದರು.
ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಸಿಲುಕಿದ ಪೋಲಿಸರು
ಮಾಜಿ ಶಾಸಕ ಹಾಗೂ ಹಾಲಿ ಶಾಸಕರ ನಡುವಿನ ಕಿತ್ತಾಟದಿಂದ ಯಾರ ಮೇಲೆ ಕ್ರಮ ಕೈಗೊಳ್ಳಬೇಕು, ಯಾರ ಮೇಲೆ ದೂರು ದಾಖಲಿಸಬೇಕು ಎಂದು ಪೊಲೀಸರು ಕೆಲ ಕಾಲ ಗೊಂದಲಕ್ಕೆ ಸಿಲುಕಿದರು. ಇನ್ನು ಶಾಸಕಿ ರೂಪಾಲಿ ನಾಯ್ಕ ಠಾಣೆಯಿಂದ ಮನೆಗೆ ತೆರಳಿದರೆ ಇತ್ತ ಮಾಜಿ ಶಾಸಕರು ತಾನು ಕುಡಿದಿದ್ದೇನೋ ಇಲ್ಲವೋ ಅಂತಾ ಖಚಿತವಾಗಲಿ ಎಂದು ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ತೆರಳಿದರು. ಇದಲ್ಲದೇ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರು ಪೊಲೀಸ್ ಠಾಣೆ ಮುಂದೆ ಜಮಾವಣೆ ಆಗಿದ್ದು, ಕೆಲ ಕಾಲ ನಗರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆ ಕಾರವಾರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆ ಈ ಕಿತ್ತಾಟ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ