CLP Meeting: ಶಾಸಕರ ಪತ್ರ ಸಮರದ ಮಧ್ಯೆ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ, ಏನೇನು ಚರ್ಚೆಯಾಗಲಿದೆ? ಇಲ್ಲಿದೆ ವಿವರ

|

Updated on: Jul 27, 2023 | 7:31 AM

ಅಧಿವೇಶನ, ಚುನಾವಣೆ ಇಲ್ಲದಿದ್ದರೂ ಬಹಳ ಮುತುವರ್ಜಿ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಇಂದಿನ ಕಾಂಗ್ರೆಸ್ ಶಾಸಕಾಂಗ ಸಭೆ ಬಹಳ ಕುತೂಹಲ ಮೂಡಿಸಿದೆ. ಹಾಗಿದ್ರೆ ಇಂದಿನ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆಯಾಗಬಹುದು ಎನ್ನುವ ಮಾಹಿತಿ ಇಲ್ಲಿದೆ.

CLP Meeting: ಶಾಸಕರ ಪತ್ರ ಸಮರದ ಮಧ್ಯೆ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ, ಏನೇನು ಚರ್ಚೆಯಾಗಲಿದೆ? ಇಲ್ಲಿದೆ ವಿವರ
ಕಾಂಗ್ರೆಸ್ ಶಾಸಕರು
Follow us on

ಬೆಂಗಳೂರು, (ಜುಲೈ 27): ಶಾಸಕರ ಒತ್ತಾಯ, ಸಚಿವರ ನಡೆಯ ಬಗ್ಗೆ ಆಕ್ಷೇಪ, ಅಸಮಾಧಾನದ ನಡುವೆ ಇಂದು(ಜುಲೈ 27) ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್(Congress) ಶಾಸಕಾಂಗ ಸಭೆ(CLP Meeting )ನಡೆಯಲಿದೆ. ಅಧಿವೇಶನ ಇಲ್ಲದಿದ್ದರೂ ಚುನಾವಣೆ ಅಲ್ಲದಿದ್ದರೂ ಬಹಳ ಮುತುವರ್ಜಿ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆದಿರುವ ಈ ಶಾಸಕಾಂಗ ಸಭೆ ಬಹಳ ಕುತೂಹಲ ಮೂಡಿಸಿದೆ. ಬಿ.ಆರ್.ಪಾಟೀಲ್ ಬಸವರಾಜ ರಾಯರೆಡ್ಡಿ, ಎಂ ಕೃಷ್ಣಪ್ಪ ಸೇರಿದಂತೆ ಹಲವು ಹಿರಿಯ ಶಾಸಕರೇ ಶಾಸಕಾಂಗ ಸಭೆ ಕರೆಯುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೇ ಸಚಿವರ ವಿರುದ್ಧ ಶಾಸಕರ ಪತ್ರ ಸಮರ ಮತ್ತು ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿರುವ ಹೊತ್ತಲ್ಲಿ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ಹಾಗಿದ್ರೆ ಇಂದಿನ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆಯಾಗಬಹುದು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: BR Patil: ಸಿಎಂ ಸಿದ್ದರಾಮಯ್ಯಗೆ ಬರೆದಿದ್ದು ಎನ್ನಲಾದ ಪತ್ರ ನಕಲಿ; ಕಾಂಗ್ರೆಸ್‌ ಶಾಸಕ ಬಿಆರ್ ಪಾಟೀಲ್ ಸ್ಪಷ್ಟನೆ

ಶಾಸಕಾಂಗ ಸಭೆಯಲ್ಲಿ ಏನೇನು ಚರ್ಚೆ?

ಸಚಿವರು ಶಾಸಕರಿಗೆ ಸಹಕಾರ ನೀಡುಲ್ಲ ಎನ್ನುವ ಆರೋಪವಿದ್ದು, ಸಚಿವರ ಕಾರ್ಯವೈಖರಿ ಬಗ್ಗೆ ಹಲವು ಶಾಸಕರಲ್ಲಿ ಅಸಮಾಧಾನಗೊಂಡಿದ್ದಾರೆ. ಸಿಎಂ ಮುಂದೆ ಶಾಸಕರು ಅಳಲು ತೋಡಿಕೊಳ್ಳುವ ಸಾಧ್ಯತೆ ಇದೆ. ಯಾವ ಸಚಿವರಿಂದ ಕಿರಿಕಿರಿ ಆಗುತ್ತಿದೆ ಎನ್ನುವುದನ್ನು ಬಹಿರಂಗವಾಗುವ ಸಾಧ್ಯತೆ ಇದೆ. ಶಾಸಕರಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಎನ್ನುವ ವಿಚಾರವೂ ಬಯಲಾಗಲಿದೆ. ಗ್ಯಾರಂಟಿ ಸ್ಕೀಂ ಬಿಟ್ಟು ಅನುದಾನ ನೀಡಬೇಕೆಂದು ಒತ್ತಾಯ ಮಾಡಬಹುದು. ಸಚಿವರು ಅನುದಾನ ಬಿಡುಗಡೆಗೂ ಸಹಕರಿಸುತ್ತಿಲ್ಲವೆಂಬ ಆರೋಪವಿದ್ದು, ಸಿಎಂ ಡಿಸಿಎಂ ಎದುರು ದೂರುಗಳ ಸುರಿಮಳೆಯಾಗುವ ಸಾಧ್ಯತೆ ಇದೆ. ಇನ್ನು ವರ್ಗಾವಣೆಗೆ ಸಚಿವರ ಆಪ್ತರು ಹಣ ಕೇಳುತ್ತಿರುವ ಆರೋಪವೂ ಸಭೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಶಾಸಕರು, ವರ್ಗಾವಣೆ ದಂಧೆ ಸಂಬಂಧ ಸಚಿವರ ಹೆಸರನ್ನು ಬಹಿರಂಗವಾಗಿ ಹೇಳಿದರೆ ಶಾಸಕಾಂಗ ಸಭೆ ರಣರಂಗವೇ ಆಗಬಹುದು‌. ಇಂದಿನ ಶಾಸಕಾಂಗ ಸಭೆ ಸಂಬಂಧ ನಿನ್ನೆ ದೆಹಲಿಯಲ್ಲಿ ಮಾತನಾಡಿರೋ ಸಚಿವ ಸತೀಶ್ ಜಾರಕಿಹೊಳಿ ಎಲ್ಲರಿಗೂ ಸಮಸ್ಯೆ ಹೇಳಿಕೊಳ್ಳಲು ಮುಕ್ತ ಅವಕಾಶ ಇರುತ್ತೆ ಎಂದಿದ್ದಾರೆ.

ಇನ್ನು ಬಿಕೆ ಹರಿಪ್ರಸಾದ್‌ ವಿಚಾರ ಕೂಡ ಕಾಂಗ್ರೆಸ್ ಪಕ್ಷದ ಬೇಗುದಿಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ ಕೆ ಪಾಟೀಲ್ ಕೆ ಎಚ್ ಮುನಿಯಪ್ಪ ಮನವೊಲಿಕೆ ಪ್ರಯತ್ನ ಮಾಡಿದರೂ ಹರಿಪ್ರಸಾದ್ ಬೇಸರ ಕಡಿಮೆಯಾಗಿಲ್ಲ ಎನ್ನಲಾಗಿದೆ. ಕೆಸಿ.ವೇಣುಗೋಪಾಲ್ ಮಧ್ಯಸ್ಥಿಕೆ ವಹಿಸಲಿದ್ದು, ಡಿಕೆ.ಶಿವಕುಮಾರ್ ಮತ್ತು ಕೆಎಚ್.ಮುನಿಯಪ್ಪ ಇಬ್ಬರೂ ಹರಿಪ್ರಸಾದ್ ಮನವೊಲಿಸಲಿದ್ದಾರೆ. ಬೋಸರಾಜು ಎಂಎಲ್​ಸಿ ಅವಧಿ ಮುಗಿದ ಬಳಿಕ ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಇಂದಿನ ಕಾಂಗ್ರೆಸ್ ಶಾಸಕಾಂಗ ಸಭೆ ತೀವ್ರ ಕುತೂಹಲ ಕೆರಳಿಸಿದ್ದು, ಏನೆಲ್ಲ ವಿಚಾರಗಳು ಚರ್ಚೆಗೆ ಬರಲಿವೆ? ಸಭೆಯಲ್ಲಿ ಅಸಮಾಧಾನ ಸ್ಫೋಟಗೊಳ್ಳುತ್ತಾ ಕಾದು ನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ