ಬೆಂಗಳೂರು, ಸೆ.15: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬೆನ್ನಲ್ಲೇ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N.Chaluvarayaswamy) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭೇಟಿಯಾಗಿ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದಾರೆ. ಒಬ್ಬೊಬ್ಬ ಸಚಿವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸುತ್ತಿರುವ ಸಿದ್ದರಾಮಯ್ಯ ಅವರ ನಡೆ ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ಒಬ್ಬ ಮುಖ್ಯಮಂತ್ರಿ ಯಾರನ್ನೇ ಭೇಟಿಯಾಗಲು ಹೋಗುವ ಸಂದರ್ಭದಲ್ಲಿ ಭದ್ರತೆಯೊಂದಿಗೆ ತೆರಳುತ್ತಾರೆ. ಆದರೆ, ಸಿದ್ದರಾಮಯ್ಯ ಅವರು ಭದ್ರತೆ ಇಲ್ಲದೆಯೇ ನೈಟ್ ಡಿನ್ನರ್ ನೆಪದಲ್ಲಿ ಸದ್ದಿಲ್ಲದೆ ಒಬ್ಬಬ್ಬ ಆಪ್ತ ಸಚಿವರನ್ನು ಭೇಟಿಯಾಗುತ್ತಿದ್ದಾರೆ. ಭೇಟಿ ವೇಳೆ ಇಬ್ಬರ ಹೊರತಾಗಿ ಬೇರೆ ಯಾರು ಕೂಡ ಜೊತೆಗಿಲ್ಲ.
ಸಚಿವ ಚಲುವರಾಯಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ರಾತ್ರಿ ಊಟದ ನೆಪದಲ್ಲಿ ನಿನ್ನೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಇತ್ತಿಚೆಗಷ್ಟೇ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಪಕ್ಷದ ಶಾಸಕರೇ ಅಸಮಾಧಾನ ಹೊರಹಾಕುತ್ತಿದ್ದು, ಸಚಿವರು, ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯರಿಗೆ ಪತ್ರದ ಮೂಲಕ ದೂರು ನೀಡುತ್ತಿದ್ದಾರೆ. ಇನ್ನೊಂದೆಡೆ ಬಿಕೆ ಹರಿಪ್ರಸಾದ್ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಸಿದ್ದರಾಮಯ್ಯ ಅವರ ಸಚಿವರನ್ನು ರಹಸ್ಯ ಭೇಟಿ ನಡೆಸುತ್ತಿದ್ದಾರೆ. ತನ್ನ ಆಡಳಿತದ ವಿರುದ್ಧ ಮುನಿಸು ವ್ಯಕ್ತವಾಗುತ್ತಿರುವ ನಡುವೆ ತಮ್ಮ ಆಪ್ತ ಸಚಿವರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಭೇಟಿ ಇದಾಗಿದೆಯೇ? ಅಥವಾ ಲೋಕಸಭೆ ಚುನಾವಣೆಗೆ ಸದ್ದಿಲ್ಲದೆ ಆಪ್ತ ವಲಯವನ್ನು ಸಜ್ಜುಗೊಳಿಸುವ ಭೇಟಿ ಇದಾಗಿದೆಯೇ ಎಂಬದು ಪ್ರಶ್ನೆಯಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ