ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ, ವಸ್ತುಸ್ಥಿತಿ ವಿವರಿಸಿ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ; ಸಿಎಂ ಸಿದ್ದರಾಮಯ್ಯ
ಬೆಳೆ ಉಳಿಸಿಕೊಳ್ಳಲು ನಮಗೆ 70 ಟಿಎಂಸಿ ಬೇಕು. 30 ಟಿಎಂಸಿ ಕುಡಿಯುವ ನೀರು ಹಾಗೂ 3 ಟಿಎಂಸಿ ಕೈಗಾರಿಕೆಗೆ ಬೇಕು. ನಮ್ಮ ಬಳಿ ಈಗ ಇರುವುದು 53 ಟಿಎಂಸಿ ಮಾತ್ರ. ನಾಲ್ಕು ಜಲಾಶಯಗಳಿಂದ ಕೇವಲ 53 ಟಿಎಂಸಿ ನೀರು ಮಾತ್ರ ನಮ್ಮತ್ರ ಇದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಬೆಂಗಳೂರು, ಸೆಪ್ಟೆಂಬರ್ 23: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ (Cauvery Water Dispute) ಸಂಬಂಧಿಸಿದಂತೆ ಇಂದು (ಸೆಪ್ಟೆಂಬರ್ 13) ಸಿದ್ದರಾಮಯ್ಯನವರ (Siddaramaiah) ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷಗಳ ಸಭೆ ಅಂತ್ಯವಾಗಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ಪ್ರಸ್ತುತ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಅವರು, ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಆದೇಶ ನೀಡಿದೆ. ಇದನ್ನು ಮರು ಪರಿಶೀಲನೆ ಮಾಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ. ವಸ್ತುಸ್ಥಿತಿ ವಿವರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ.
ಸರ್ವಪಕ್ಷ ನಿಯೋಗದ ಭೇಟಿಗೆ ಈವರೆಗೂ ಪ್ರಧಾನಿ ಸಮಯ ಕೊಟ್ಟಿಲ್ಲ. ಸೆಪ್ಟೆಂಬರ್ 18ರಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದೆ. ಎಲ್ಲ ಸಂಸದರು, ಸಚಿವರ ಜತೆ ಹೋಗಿ ಚರ್ಚೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಎಲ್ಲಾ ಪಕ್ಷದವರು ಇದುವರೆಗೂ ಒಟ್ಟಾಗಿ ಹೋಗಿದ್ದೇವೆ. ನೆಲ, ಜಲ, ಭಾಷೆ ವಿಚಾರದಲ್ಲಿ ನಾವ್ಯಾರೂ ರಾಜಕೀಯ ಮಾಡಿಲ್ಲ. ಸಮಿತಿಯ ಮುಂದೆ ಮತ್ತೊಂದು ಅರ್ಜಿ ಹಾಕುತ್ತೇವೆ. ಸುಪ್ರೀಂಕೋರ್ಟ್ಗೆ ವಾಸ್ತವಾಂಶ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೀರು ಬಿಡಬೇಕಾ ಬೇಡವಾ ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಕಾನೂನು ತಜ್ಞರ ಜೊತೆ ಚರ್ಚಿಸುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸೆಪ್ಟೆಂಬರ್ 11 ರ ತನಕ ನಾವು 99 ಟಿಎಂಸಿ ನೀರಿನ ಬದಲು 37 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವೀಗ ಸಂಪೂರ್ಣ ನೀರು ಬಿಡ್ತಿಲ್ಲ. ಬೆಳೆ ಉಳಿಸಿಕೊಳ್ಳಲು ನಮಗೆ 70 ಟಿಎಂಸಿ ಬೇಕು. 30 ಟಿಎಂಸಿ ಕುಡಿಯುವ ನೀರು ಹಾಗೂ 3 ಟಿಎಂಸಿ ಕೈಗಾರಿಕೆಗೆ ಬೇಕು. ನಮ್ಮ ಬಳಿ ಈಗ ಇರುವುದು 53 ಟಿಎಂಸಿ ಮಾತ್ರ. ನಾಲ್ಕು ಜಲಾಶಯಗಳಿಂದ ಕೇವಲ 53 ಟಿಎಂಸಿ ನೀರು ಮಾತ್ರ ನಮ್ಮತ್ರ ಇದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಏನಂದರು ಡಿಕೆ ಶಿವಕುಮಾರ್?
ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ಕುಡಿಯುವ ನೀರು, ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸಬೇಕಿದೆ. ನೈಋತ್ಯ ಮಾನ್ಸೂನ್ ಮುಗಿಯುವ ಹಂತದಲ್ಲಿದೆ. ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಕ್ಷೀಣಿಸುತ್ತಿದ್ದು, ಈಗಿರುವ ನೀರನ್ನು ನಮ್ಮ ಅಗತ್ಯಗಳಿಗೆ ಕಾಯ್ದಿರಿಸಬೇಕಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನಕ್ಕೆ ಮನವಿ ಮಾಡಲಾಗಿದೆ. ಅಲ್ಲದೇ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಇನ್ನು ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಬಳಿ ಸಮಯ ಕೇಳಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಏಪ್ರಿಲ್ ನಂತರ ಕರ್ನಾಟಕದಲ್ಲಿ 251 ರೈತರ ಆತ್ಮಹತ್ಯೆ; ತೊಂದರೆ ನೀಡುವ ಲೇವಾದೇವಿಗಾರರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ
ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸೆಪ್ಟೆಂಬರ್ 21ಕ್ಕೆ ನಿಗದಿಯಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಬೆಳೆಗಳಿಗೆ 70.20 ಟಿಎಂಸಿ ನೀರು ಬೇಕು. 2024ರ ಜುಲೈವರೆಗೆ ಕುಡಿಯುವ ನೀರಿಗೆ 33 ಟಿಎಂಸಿ ನೀರು ಬೇಕು. ಕೈಗಾರಿಕಾ ಬಳಕೆಗೆ 3 ಟಿಎಂಸಿ ಸೇರಿ ಒಟ್ಟು 106.20 TMC ನೀರು ಬೇಕು. ಆದರೆ 4 ಜಲಾಶಯಗಳಲ್ಲಿನ ಈಗ ಒಟ್ಟು 53.287 ಟಿಎಂಸಿ ನೀರು ಇದೆ. ಕಾವೇರಿ ಕಣಿವೆಯ ರೈತರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯ. ಅನ್ಯ ವಿಚಾರ ಪಕ್ಕಕ್ಕಿಟ್ಟು ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡಿ ವಿಪಪಕ್ಷಗಳ ನಾಯಕರಿಗೆ ಕೇಳಿದರು.
ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ; ಪ್ರತಾಪ್ ಸಿಂಹ
ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ನೀಡಿರುವ ಸೂಚನೆಯನ್ನು ನಾವು ವಿರೋಧಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು. ಸರ್ವಪಕ್ಷ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ರಾಜ್ಯ ಸರ್ಕಾರ ತಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:33 pm, Wed, 13 September 23