ಹುಬ್ಬಳ್ಳಿ: ಬಿಜೆಪಿ ಬ್ಯಾನ್ ಮಾಡಬೇಕೆಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರಿಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಕಾಂಗ್ರೆಸ್ ಪಕ್ಷವನ್ನು ದೇಶದ ಜನರೇ ಬ್ಯಾನ್ ಮಾಡಿದ್ದಾರೆ ಎಂದರು. ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಿರುವುದು ವಿಚಿತ್ರ ಸಂಗತಿಯಾಗಿದೆ. ಏಕೆಂದರೆ ದೇಶದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ. ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೆ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ಸೇತರ ಸರ್ಕಾರ ಇದ್ದಾಗ ಹಗರಣ ನಡೆದಿಲ್ಲ. ಭ್ರಷ್ಟಾಚಾರದ ಮೊಟ್ಟೆ ಇಟ್ಟು ಅದಕ್ಕೆ ಕಾವು ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಆಸ್ತಿ ಎಷ್ಟಿದೆ ಅಂತಾ ಘೋಷಣೆ ಮಾಡಲಿ ಎಂದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ನೂರು ಬಾರಿ ಬರಲಿ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಈ ಹಿಂದೆಯೂ ಮೋದಿ ಬಗ್ಗೆ ಕೆಟ್ಟ ಶಬ್ದಗಳಿಂದ ಮಾತನಾಡಿದ್ದರು. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರು. ಸ್ವಲ್ಪ ಜ್ಞಾನ ಇಟ್ಟುಕೊಂಡು ಮಾತನಾಡುವಂತೆ ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ಹಳೆಯದ್ದನ್ನು ನೆನಪಿನಲ್ಲಿ ಇಟ್ಟುಕೊಂಡು ಮಾತಾಡಲಿ ಅಂತಾ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗಳ ವಿರುದ್ಧ ಕಾಂಗ್ರೆಸ್ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಇದು ಪಬ್ಲಿಸಿಟಿ ಗಿಮಿಕ್ ಆಗಿದೆ. ಎಲ್ಲಿ ಏನು ಮಾತಾಡಿದಾರೆ ನನಗೆ ಗೊತ್ತಿಲ್ಲ. ಆ ಕೇಸ್ ನಿಲ್ಲಲ್ಲ ಎಂದರು. ಇನ್ನು ಅಮಿತ್ ಶಾ ರೋಡ್ ಶೋ ವಿಚಾರವಾಗಿ ಮಾತನಾಡಿದ ಅವರು, ಕುಂದಗೋಳದಲ್ಲಿ ನಾವ ಗೆಲ್ಲುತ್ತೇವೆ. ಅದನ್ನ ಗಮನದಲ್ಲಿ ಇಟ್ಟುಕೊಂಡೇ ನಾವೇ ತಯಾರಿ ಮಾಡುತ್ತಿದ್ದೇವೆ ಎಂದರು. ಬಜೆಟ್ ಬಗ್ಗೆ ಮಾತನಾಡಿದ ಅವರು, ಬಜೆಟ್ ಸಿಕ್ರೇಟ್ ಡಾಕ್ಯುಮೆಂಟ್ ಆಗಿದೆ. ಹೀಗಾಗಿ ನಿಮಗೆ ಒಂದರಂದು ಮದ್ಯಾಹ್ನ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸೈಲೆಂಟ್ ಆದ ಶಾಸಕ ಯತ್ನಾಳ್: ಯಡಿಯೂರಪ್ಪ ಬಗ್ಗೆ ಮಾತನಾಡದಂತೆ ಸೂಚನೆ
ಕೇಂದ್ರ ಸಚಿವ ಅಮಿತ್ ಶಾ ಅವರು ಇಂದು ರಾತ್ರಿ 10.45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದ ಜೋಶಿ, ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಂತೆ ಧಾರವಾಡದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಕ್ಯಾಂಪಸ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಕುಂದಗೋಳದಲ್ಲಿ ಬೂತ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದು, ತದನಂತರ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಮಿತ್ ಶಾ ಆಗಮನದಿಂದ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಲಿದೆ ಎಂದರು.
ಪರೀಕ್ಷಾ ಪೇ ಚರ್ಚೆಯನ್ನು ದೇಶಾದ್ಯಂತ ಮೋದಿಯವರು ನಡೆಸಿದ್ದಾರೆ. ಸವಾಯಿ ಗಂಧರ್ವ ಹಾಲ್ನಲ್ಲಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಎಲ್ಲರಿಗೂ ಎಕ್ಸಾಮ್ ವಾರಿಯರ್ ಬುಕ್ ವಿತರಣೆ ಮಾಡಿದ್ದೇವೆ. ಸಾವಿರಾರು ಮಕ್ಕಳು ಭಾಗವಹಿಸಿದ್ದು, ಕಾರ್ಯಕ್ರಮ ವಿಶೇಷವಾಗಿತ್ತು ಎಂದು ಜೋಶಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 27 January 23