ಹಿಂದೆ ದೇವೇಗೌಡ್ರನ್ನ CM,PM ಮಾಡಿದ್ವಿ, ಈಗ ನಿಮ್ಮ ಮಗನಿಗೆ ಅಧಿಕಾರದ ಶಕ್ತಿ ನೀಡಿ: ಪರೋಕ್ಷವಾಗಿ ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆ ಶಿವಕುಮಾರ್!
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದೊಮ್ಮೆ ಸಿಎಂ ಆಗುವ ಕನಸನ್ನು ಹೊರಹಾಕಿದ್ರು. ಇಂದು ಮಂಡ್ಯದಲ್ಲಿ ಮತ್ತೆ ಪರೋಕ್ಚವಾಗಿಡಿಕೆ ಶಿವಕುಮಾರ್ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ.
ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದೊಮ್ಮೆ ಸಿಎಂ ಆಗುವ ಕನಸನ್ನು ಹೊರಹಾಕಿದ್ದರು. ಇದೀಗ ಮತ್ತೆ ಮಂಡ್ಯದಲ್ಲಿ ಮತ್ತೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಇಂದು(ಜನವರಿ 27) ಮಂಡ್ಯದಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ನಾವು ಜೆಡಿಎಸ್ಗೆ ಅಧಿಕಾರ ನೀಡಿದ್ವಿ. ಆದರೆ ಅವರು ಉಳಿಸಿಕೊಳ್ಳಲಿಲ್ಲ. ಹಿಂದೆ ದೇವೇಗೌಡರನ್ನು ಸಿಎಂ ಆಗಿ ಮಾಡಿದ್ವಿ, ಪ್ರಧಾನಮಂತ್ರಿಯಾಗಿ ಮಾಡಿದ್ವಿ. ನಾನು ನಿಮ್ಮ ಮಣ್ಣಿನ ಮಗನಾಗಿ ಕೇಳುತ್ತಿದ್ದೇನೆ. ನಾನು ನಿಮ್ಮ ಮಣ್ಣಿನ ಮಗನಾಗಿ ಕನಕಪುರದ ಮಗನಾಗಿ ಕೇಳುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಕೇಳುತ್ತಿದ್ದೇನೆ. ಈ ನಿಮ್ಮ ಮಗನಿಗೆ ಅಧಿಕಾರದ ಶಕ್ತಿ ನೀಡಿ ಎಂದು ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಗೂ ನನಗೂ 40 ವರ್ಷದ ಸಂಬಂಧವಿದೆ. ಮಂಡ್ಯ, ಕನಕಪುರ, ರಾಮನಗರ ನನಗೆ ಬೇರೆ ಅಲ್ಲ. ಎಸ್.ಎಂ.ಕೃಷ್ಣ ಕಾಲದಿಂದಲೂ ಈ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಂಡ್ಯ ಜಿಲ್ಲೆಯ ಏಳಕ್ಕೆ 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿದ್ರಿ. ನಾವು ಜೆಡಿಎಸ್ಗೆ ಅಧಿಕಾರ ಕೊಟ್ಟಿದ್ದೆವು, ಅವರು ಉಳಿಸಿಕೊಂಡಿಲ್ಲ. ನಾನು ನಿಮ್ಮ ಮಣ್ಣಿನ ಮಗನಾಗಿ ಕೇಳ್ತಿದ್ದೀನಿ, ಅಧಿಕಾರದ ಶಕ್ತಿ ಕೊಡಿ. ಮೇಕೆದಾಟು ಯೋಜನೆಗಾಗಿ 170 ಕಿ.ಮೀ ಪಾದಯಾತ್ರೆ ಮಾಡಿದ್ದೆವು. ಕೊರೊನಾ ಸಂದರ್ಭ ಎಂದು ಎಲ್ಲರ ಮೇಲೂ ಕೇಸ್ ಹಾಕಿದರು. ಆದ್ರೆ ಬಿಜೆಪಿಯವರ ಮೇಲೆ ಕೇಸ್ ಹಾಕಲಿಲ್ಲ ಎಂದರು.
ಬಿಜೆಪಿಯವರ ಭ್ರಷ್ಟಾಚಾರದ ಆಡಳಿತವನ್ನು ನೀವೂ ನೋಡಿದ್ದೀರಿ. ಆದ್ರೆ ಭ್ರಷ್ಟಾಚಾರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಲಿಲ್ಲ.ನೀವು ಜೆಡಿಎಸ್ಗೆ ಮತಹಾಕಿದರೆ ಮತ್ತೆ ಬಿಜೆಪಿಯನ್ನ ಗೆಲ್ಲಿಸಿದಂತೆ. ನಿಮ್ಮ ಮಗನಿಗೆ ಶಕ್ತಿ ಬರಬೇಕಾದರೆ ನೀವು ನನ್ನ ಜೊತೆ ಇರಬೇಕು. ಭ್ರಷ್ಟಾಚಾರ ಮುಕ್ತ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ. ಇದರ ಮಧ್ಯೆ ಸಿಎಂ ಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಒಂದೆಡೆ ಸಿದ್ದರಾಮಯ್ಯ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ರೆ, ಇತ್ತ ಡಿಕೆ ಶಿವಕುಮಾರ್ ಸಹ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ. ಚಿತ್ರದುರ್ಗದ ಹಿರಿಯೂರಲ್ಲಿ ನಡೆದ ಕೆಂಪೇಗೌಡ ಜಯಂತಿ, ಒಕ್ಕಲಿಗರ ಸಮಾವೇಶದಲ್ಲಿ ಸಿಎಂ ಕನಸನ್ನು ಬಹಿರಂಗಪಡಿಸಿದ್ದರು. ಇದೀಗ ತಮ್ಮ ಸಮುದಾಯ ಬಲಿಷ್ಠವಾಗಿರುವ ಮಂಡ್ಯದಲ್ಲೂ ಸಹ ಪರೋಕ್ಷವಾಗಿ ಸಿಎಂ ಆಗುವ ಆಸೆ ಬಿಚ್ಚಿಟ್ಟಿದ್ದಾರೆ.