ಹಾಸನದಲ್ಲಿ ಜೆಡಿಎಸ್ ಬಾವುಟ ಹಾರಿಸೇ ಹಾರುಸುತ್ತೇವೆ: ಶಾಸಕ ಪ್ರೀತಮ್ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ
ಯುವಕರಿಗೆ ತೊಂದರೆ ಕೊಡುತ್ತಿದ್ದಾರೆ, ಎರಡು ದಿನದಲ್ಲಿ 120 ಜನರ ಮೇಲೆ 107 ಕೇಸ್ ದಾಖಲಿಸಿದ್ದಾರೆ. ನಮ್ಮ ನಾಯಕರನ್ನು ಗಡಿಪಾರು ಮಾಡಲು 107 ಸೆಕ್ಷನ್ ಕೇಸ್ ದಾಖಲಿಸುತ್ತಿದ್ದಾರೆ. ನೋವು ತಿಂದರು ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ಗೆಲ್ಲಿಸಲು ಛಲ ತೊಟ್ಟಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಹಾಸನ: ತಾಲ್ಲೂಕಿನ ದೊಡ್ಡಪುರ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರದ ವೇಳೆ ಶಾಸಕ ಪ್ರೀತಮ್ ಗೌಡ (Preetham Gowda) ಅವರ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna), ಶಾಸಕರು ಅಭಿವೃದ್ಧಿ ಮೂಲಕ ಮತ ಕೇಳುತ್ತಿಲ್ಲ. ಅವರು ಯಾವುದೇ ಕಡೆ ಹೋದರು ಯುವಕರನ್ನು ಹೊಡೆದಾಡಿಸಿ ಕೇಸ್ ಮಾಡಿಸುವುದು, ಇವರೇ ಕೇಸ್ ಮಾಡಿಸಲು ಹೋಗುವುದು. ನಂತರ ಪ್ರಕರಣ ವಾಪಾಸ್ ತೆಗೆಸುತ್ತೇನೆ, ನೀವೆಲ್ಲ ನಮ್ಮ ಪಕ್ಷಕ್ಕೆ ಬರಬೇಕು ಅಂತ ಹೇಳುವುದು ಹಾಸನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಇವತ್ತು ಯುವಕರಿಗೆ ಹೇಳುತ್ತೇನೆ, ನೀವೆಲ್ಲ ಧೈರ್ಯವಾಗಿ ಇರಿ. ಇನ್ನೂ ಎರಡೇ ತಿಂಗಳು ನಾವು ಕಾಯಬೇಕಿರುವುದು. ಈ ಜೆಡಿಎಸ್ ಪಕ್ಷದ ಬಾವುಟವನ್ನು ಹಾಸನ ತಾಲ್ಲೂಕಿನಲ್ಲಿ ಹಾರಿಸೇ ಹಾರುಸುತ್ತೇವೆ. ಯಾರು ಧೈರ್ಯ ಕಳೆದುಕೊಳ್ಳುವುದು ಬೇಡ. ಎಷ್ಟು ನೀಚಮಟ್ಟದ ರಾಜಕಾರಣ ಮಾಡಲಾಗುತ್ತಿದೆ. ಯುವಕರಿಗೆ ತೊಂದರೆ ಕೊಡುತ್ತಿದ್ದಾರೆ, ಎರಡು ದಿನದಲ್ಲಿ 120 ಜನರ ಮೇಲೆ 107 ಕೇಸ್ ದಾಖಲಿಸಿದ್ದಾರೆ. ನಮ್ಮ ನಾಯಕರನ್ನು ಗಡಿಪಾರು ಮಾಡಲು 107 ಸೆಕ್ಷನ್ ಕೇಸ್ ದಾಖಲಿಸುತ್ತಿದ್ದಾರೆ. ನೋವು ತಿಂದರು ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಈ ಪಕ್ಷವನ್ನು ಗೆಲ್ಲಿಸಲು ಛಲ ತೊಟ್ಟಿದ್ದಾರೆ ಎಂದರು.
ನಮ್ಮ ಪಕ್ಷದಲ್ಲಿ ಇರುವವರು ನಿಷ್ಠಾವಂತ ಕಾರ್ಯಕರ್ತರು. ದುಡ್ಡು ಕೊಡುತ್ತಾರೆ ಅಂತ ಬರುವುದಿಲ್ಲ. ನೀವೆಲ್ಲ ಶಕ್ತಿ ಕೊಟ್ಟರೆ ಖಂಡಿತ ಹಾಸನ ತಾಲ್ಲೂಕಿನಲ್ಲಿ ಮತ್ತೊಮ್ಮೆ ಜೆಡಿಎಸ್ ಬಾವುಟ ಹಾರಿಸುವ ಕೆಲಸ ಆಗುತ್ತದೆ. ರೇವಣ್ಣ ಸಾಹೆಬ್ರು ಸ್ವಲ್ಪ ದಿನ ಹೆಚ್ಚಾಗಿ ಹಾಸನ ತಾಲ್ಲೂಕಿಗೆ ಗಮನಹರಿಸಿ ನಮ್ಮ ನಾಯಕರು, ಮುಖಂಡರು, ಯುವಕರುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ ಎಂದರು.
ಇದನ್ನೂ ಓದಿ: ನನ್ನ ಸರ್ಕಾರದ ಅವಧಿಯಲ್ಲಿ ಹೆಚ್ಚು ಸಾಲ ಪಡೆದ ಆರೋಪ ಸುಳ್ಳು: ಅಂಕಿ-ಸಂಖ್ಯೆ ಮೂಲಕ ಲೆಕ್ಕ ಕೊಟ್ಟ ಬೊಮ್ಮಾಯಿ
ಶಾಸಕರು ಹೆಣ್ಣುಮಕ್ಕಳ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದ್ದಾರೆ ಅಂತ ಹೇಳಬೇಕಾಗುತ್ತದೆ. ನಾನೊಬ್ಬ ಮಗನಾಗಿ ಹೇಳುತ್ತಿದ್ದೇನೆ, ನನ್ನ ತಾಯಿಗೆ ಯಾವುದೋ ಕುಡಿದಿರುವ ನಶೆಯಲ್ಲಿ ಬೆಳಿಗ್ಗೆ ಹೊತ್ತು ಮಾತಾಡುತ್ತಾರೆ ಅಂತಾರೆ. ಇಂತಹ ಹೇಳಿಕೆಗಳನ್ನು ಯಾವ ಮಗ ತಡೆದುಕೊಳ್ಳುತ್ತಾನೆ ಎಂದು ನೀವು ಯೋಚನೆ ಮಾಡಿ ಇವತ್ತು. ತಾಯಂದಿರ ಮೇಲೆ ಎಂತ ಗೌರವ ಇಟ್ಟಿದ್ದಾರೆ, ಹೆಣ್ಣುಮಕ್ಕಳ ಮೇಲೆ ಯಾವ ಭಾವನೆ ಇಟ್ಟಿದ್ದಾರೆ ಅನ್ನೊದನ್ನ ಚರ್ಚೆ ಮಾಡಬೇಕು ಎಂದರು.
ದ್ಯಾಪಲಪುರ ಗ್ರಾಮಕ್ಕೆ ಪ್ರೀತಂಗೌಡ ಕ್ಯಾನ್ವಸ್‌ಗೆ ಹೋದ ಸಂದರ್ಭದಲ್ಲಿ ಆರತಿ ಮಾಡಲಿಲ್ಲ ಎಂದು ಮಹಿಳೆಯನ್ನು ಬೀದಿಗೆ ಎಳೆದು ಹೊಡೆಯುತ್ತಾರೆ. ಪೊಲೀಸರು ಒಂದು ದೂರು ಕೂಡ ತೆಗೆದುಕೊಳ್ಳುವುದಿಲ್ಲ. ಹಾಸನ ಜಿಲ್ಲೆಯಲ್ಲಿ ದೇವೇಗೌಡರು ಐವತ್ತು ವರ್ಷ ಆಳ್ವಿಕೆ ಮಾಡಿದ್ದಾರೆ. ಇವತ್ತಿನವರೆಗೂ ಅಂತಹ ಘಟನೆ ನಡೆದಿದೆಯೇ? ಎಲ್ಲೂ ಕೂಡ ಈ ರೀತಿ ಮಾಡಿಲ್ಲ. ಇವತ್ತು ಹಾಸನ ಜಿಲ್ಲೆಯಲ್ಲಿ ಎಲ್ಲಿಂದ ಎಲ್ಲಿಗೆ ಹೋದರು ಒಂದು ಇಟ್ಟಿಗೆ ಹೇಳುತ್ತದೆ ರೇವಣ್ಣ ಸಾಹೆಬ್ರು ಅಭಿವೃದ್ಧಿ ಮಾಡಿರುವುದು ಅಂತ ಎಂದರು.
ನಮ್ಮ ಕಾರ್ಯಕರ್ತರೇ ಶ್ರಮವಹಿಸಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡುತ್ತಾರೆ. ಕೆಲವರು ಹಾಸನ ಜಿಲ್ಲೆಯಲ್ಲಿ ದುಡ್ಡಲ್ಲೇ ರಾಜಕಾರಣ ಮಾಡುತ್ತೇನೆ ಅಂತ ಭ್ರಮೆಯಲ್ಲಿದ್ದರೆ, ನಾವು ವಿಶ್ವಾಸ, ಪ್ರೀತಿಯಲ್ಲಿ ರಾಜಕಾರಣ ಮಾಡಲು ಹೊರಟಿದ್ದೇವೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Thu, 23 February 23